ರಾಯಚೂರು

ವಾಂತಿ- ಭೇದಿಯಿಂದ ಯಾರೂ ಮೃತಪಟ್ಟಿಲ್ಲ

Published On :

ಕನ್ನಡಪ್ರಭ ವಾರ್ತೆ  ಸಿಂಧನೂರು  ಮಾ.14
ತಾಲೂಕಿನ ಹಂಪನಾಳ ಗ್ರಾಮದಲ್ಲಿ ಮಾ.12ರ ಮಧ್ಯರಾತ್ರಿಯಿಂದ ಉಲ್ಬಣಿಸಿದ ವಾಂತಿ- ಭೇದಿ ಪ್ರಕರಣಗಳ ನಿಯಂತ್ರಣಕ್ಕಾಗಿ ಎರಡು ದಿನಗಳಿಂದ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕೊಳವೆಬಾವಿಯ ಕಲುಷಿತ ನೀರು ಸೇವಿಸಿದ್ದರಿಂದ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ವಾಂತಿ- ಭೇದಿಯಿಂದಾಗಿ ಬಳಲುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ತಾವು ವೈದ್ಯಕೀಯ ತಂಡದೊಂದಿಗೆ ತೆರಳಿ ತುರ್ತು ಚಿಕಿತ್ಸಾ ಕೇಂದ್ರವನ್ನು ಆರಂಭಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು.
50ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ: ಬುಧವಾರ ಗ್ರಾಮದಲ್ಲಿ ಒಟ್ಟು 20 ಜನರು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಮಸ್ಕಿ ಖಾಸಗಿ ಆಸ್ಪತ್ರೆಯಲ್ಲಿ 18 ಜನರನ್ನು ಕಳುಹಿಸಲಾಗಿದ್ದು ಗುಣಮುಖರಾಗಿರುತ್ತಾರೆ. ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 7 ಜನ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 5 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಪಷ್ಟನೆ: ಬನ್ನಿಕೊಪ್ಪ ಗ್ರಾಮದ ಸಿದ್ದಪ್ಪ ಎಂಬುವವರು ವಾಂತಿ- ಭೇದಿಯಿಂದಾಗಿ ಮರಣ ಹೊಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ 45 ವರ್ಷದ ಸಿದ್ದಪ್ಪ ಅತಿಯಾದ ಹೊಟ್ಟೆ ನೋವು ಹಾಗೂ ಬೆನ್ನು ನೋವಿನಿಂದ ಬಳಲಿ ಸಿಂಧನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬನ್ನಿಕೊಪ್ಪಕ್ಕೆ ಹೋಗುವಾಗ ಮಾರ್ಗ ಮಧ್ಯೆ ಮರಣ ಹೊಂದಿದ್ದಾರೆ.
65 ವಯಸ್ಸಿನ ಅಮರೇಗೌಡ ತಂದೆ ತಿಮ್ಮನಗೌಡ ಗುಡಗಲದಿನ್ನಿ ತೀವ್ರ ಅಸ್ತಮಾ ಕಾಯಿಲೆಯಿಂದ ಬಳಲಿ ಮಸ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. 25 ವರ್ಷದ ಬಸವರಾಜ ಗುರಿಕಾರ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅಕಾಲಿಕವಾಗಿ ಮರಣ ಹೊಂದಿರುತ್ತಾರೆ. ಆದರೆ ಇವರು ವಾಂತಿ- ಭೇದಿಯಿಂದಾಗಿ ಸತ್ತಿದ್ದಾರೆಂದು ವರದಿಯಾಗಿವೆ. ಯಾರೂ ಈ ಕಾರಣದಿಂದ ಮರಣ ಹೊಂದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಕ್ರಮ: ಪ್ರಸ್ತುತ ಹಂಪನಾಳ ಗ್ರಾಮದಲ್ಲಿ ಡಾ. ಮನೋಹರ ಕರ್ನಾಳ, ಡಾ. ಬಸವರಾಜ ವಿ., ಹಿರಿಯ ಆರೋಗ್ಯ ನಿರೀಕ್ಷಕ ಪಿ. ವೆಂಕಟೇಶ, ಸಿಬ್ಬಂದಿ ಗುರುಸಿದ್ದಪ್ಪ, ರಮೇಶ, ಅಮರೇಶ ಅನಸೂಯಾ, ರೇಣುಕಾ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ತಂಡ ರಚಿಸಿ ಗ್ರಾಮದ 300 ಮನೆಗಳಿಗೆ 3000 ಹ್ಯಾಲೋಜನ್ ಮಾತ್ರೆ, 500 ಓಆರ್‌ಎಸ್. ಪೊಟ್ಟಣಗಳನ್ನು ವಿತರಿಸಲಾಗಿದೆ.
ಸೋರಿಕೆಯಾಗುತ್ತಿದ್ದ ನೀರಿನ ಪೈಪ್ ದುರಸ್ತಿಗೊಳಿಸಿ ಎರಡು ನೀರಿನ ಗುಮ್ಮಿಗಳನ್ನು ಕ್ಲೋರಿನೇಷನ್ ಮಾಡಿಸಿ ಶುದ್ಧ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಜನತೆ ಮುಂಜಾಗ್ರತಾ ಕ್ರಮವಾಗಿ ನೀರನ್ನು ಚೆನ್ನಾಗಿ ಕಾಯಿಸಿ, ಆರಿಸಿ, ಸೋಸಿ ಕುಡಿಯಲು ವ್ಯಾಪಕವಾಗಿ ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.