ರಾಯಚೂರು

'ಶ್ರೀಅಮರೇಶ್ವರ ಮಹಾತ್ಮೆ' ಮುಂದಿನ ತಿಂಗಳು ತೆರೆಗೆ

Published On :

ರಾಯಚೂರು: ಜಿಲ್ಲೆಯ ಗುರುಗುಂಟಾದ ಆರಾಧ್ಯದೈವ ಅಮರೇಶ್ವರ ದೇವರ ಜೀವನ ಚರಿತ್ರೆಯಾಧರಿಸಿದ ಚಲನಚಿತ್ರ ಶ್ರೀಅಮರೇಶ್ವರ ಮಹಾತ್ಮೆ ಮುಂದಿನ ತಿಂಗಳು ತೆರೆ ಕಾಣಲಿದ್ದು, ಬಿಡುಗಡೆಗೆ ಎಲ್ಲ ಪೂರ್ವ ಸಿದ್ಧತೆಗಳು ನಡೆದಿವೆ ಎಂದು ಚಿತ್ರದ ನಿರ್ದೇಶಕ ಅರವಿಂದ ಮುಳುಗುಂದ ತಿಳಿಸಿದರು.
ನಗರದಲ್ಲಿ ಭಾನುವಾರ ಶ್ರೀ ಅಮರೇಶ್ವರ ಮಹಾತ್ಮೆ ಚಿತ್ರ ತಂಡವು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಅಭಿಜಿತ್ ನಾಯಕ, ಕೊಡಗು ಮೂಲದ ಉಜ್ವಲಾ ನಾಯಕಿಯ ಪಾತ್ರ ಮಾಡಿದ್ದಾರೆ. ಚಿತ್ರದ ಬಿಡುಗಡೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಮುಂದಿನ ತಿಂಗಳು ತೆರೆಗೆ: ಚಿತ್ರದ ನಿರ್ಮಾಪಕ ಬಸವರಾಜ ಹಿರೇಮಠ್, 2 ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರುವ ಶ್ರೀ ಅಮರೇಶ್ವರರ ಮಹಾತ್ಮೆ ಚಿತ್ರಕಥೆ ಆಯ್ಕೆಗೆ ಅನೇಕ ಗ್ರಂಥಕಾರರು, ಪ್ರವಚನಕಾರರ ನೆರವು ಪಡೆಯಲಾಗಿದೆ. ಅರವಿಂದ ಮುಳುಗುಂದ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಚಿತ್ರವು ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಹೇಳಿದರು.
ಲಿಂಗಸ್ಗೂರು ತಾಲೂಕಿನವರಾದ ತಾವು ಮೊದಲಿನಿಂದಲೂ ಶ್ರೀ ಅಮರೇಶ್ವರರ ಮಹಾತ್ಮೆ ಬಗ್ಗೆ ಚಿತ್ರ ಮಾಡುವ ಆಸೆಯಿರಿಸಿಕೊಂಡಿದ್ದು ಅದೀಗ ಸಾಕಾರಗೊಂಡಿದೆ. ಪವಾಡಗಳು ಹಾಗೂ ಜೀವನ ಕಥೆಯಾಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ 45 ನಿಮಿಷಗಳ ಅತ್ಯಾಧುನಿಕ ಗ್ರಾಫಿಕ್ಸ್ ಅಳವಡಿಸಲಾಗಿದೆ. ಗ್ರಾಫಿಕ್ಸ್ ಖಂಡಿತವಾಗಿಯೂ ಪ್ರೇಕ್ಷಕರ ಕಣ್ಸೆಳೆಯಲಿದೆ ಎಂದು ಹೇಳಿದರು.
2 ಕೋಟಿ ವೆಚ್ಚ: ಚಿತ್ರಕ್ಕಾಗಿ 2 ಕೋಟಿ ವೆಚ್ಚ ಮಾಡಲಾಗಿದ್ದು ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದ ಬಿಡುಗಡೆಗೆ ನಾಯಕ ನಟ ಅಭಿಜಿತ್ ಅವರ ಸಹಕಾರ ಸ್ಮರಿಸಿ, ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮುದಗಲ್ ಕೋಟೆ, ಅಮರೇಶ್ವರ ಕ್ಷೇತ್ರದ ಸುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಚಿತ್ರದ ನಾಯಕ ನಟ ಅಭಿಜಿತ್, ಚಿತ್ರೀಕರಣ ವೇಳೆ ತಮಗಾದ ಅನುಭವ ಮತ್ತು ಪವಾಡಗಳ ಬಗ್ಗೆ ಹೇಳಿಕೊಂಡರು. ಹಾಗೆಯೇ ತಮ್ಮ ಅಭಿನಯದ 126ನೇ ಚಿತ್ರವಿದು ಎಂದ ಅವರು, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಚಿತ್ರದಲ್ಲಿ ನಟಿಸುವಾಸೆಯೊಂದಿಗೆ ಗಾಂಧಿನಗರಕ್ಕೆ ತೆರಳಿದ್ದ ತಾವು ಎಲ್ಲ ಹಿರಿಯ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಸೌಭಾಗ್ಯ ಎಂದರು.
ಕನ್ನಡ ಸಿನಿಮಾಗಳ ತೋಪು- ಬೇಸರ: ಶ್ರೀಅಮರೇಶ್ವರ ಮಹಾತ್ಮೆಯಲ್ಲಿ ತಮ್ಮ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಒಳ್ಳೆಯ ಪಾತ್ರ ದೊರೆತಿದ್ದಕ್ಕೆ ಒಪ್ಪಿಕೊಂಡೆ ಎಂದ ಅಭಿಜಿತ್, ಅಷ್ಟೇ ಅಲ್ಲ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾಗಿಯೂ ಹೇಳಿದರು. ಕನ್ನಡ ಚಿತ್ರಗಳು ಸಾಲುಸಾಲು ತೋಪಾಗುತ್ತಿರುವ ಬಗ್ಗೆ ಅವರಲ್ಲಿ ಬೇಸರವಿದೆ. ಕನ್ನಡಿಗರು ಹೆಚ್ಚೆಚ್ಚು ಥಿಯೇಟರ್ ಗಳತ್ತ ಧಾವಿಸದಿರುವುದಕ್ಕೆ ಆತಂಕವೂ ಅವರಲ್ಲಿತ್ತು.
ತೆಲುಗು, ತಮಿಳು ಭಾಷಿಕರು ಅಲ್ಲಿನ ಸಿನೆಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡುತ್ತಾರೆ. ಆದರೆ ನಮ್ಮಲ್ಲಿ ಕನ್ನಡ ಚಿತ್ರಗಳತ್ತಲೇ ಅಸಡ್ಡೆಯಿದೆ. ಇಂಥ ಪರಿಸ್ಥಿತಿಯಲ್ಲಿ ಯಾವ ನಿರ್ಮಾಪಕನೂ ಉತ್ತಮ ಹಾಗೂ ಬಹುದೊಡ್ಡ ಬಜೆಟ್‌ನ ಚಿತ್ರ ತಯಾರಿಸಲು ಧೈರ್ಯ ತೋರಲಾರ ಎಂದರು.
ಕನ್ನಡ ಸಿನಿಮಾಗಳಲ್ಲೇ ಪೈಪೋಟಿ: ಇನ್ನು ಕನ್ನಡ ಚಿತ್ರಗಳಿಗೆ ಕನ್ನಡ ಸಿನೆಮಾಗಳೇ ಪೈಪೋಟಿ ನೀಡುತ್ತಿರುವುದು ಇತ್ತೀಚಿನ ಅಪಾಯಕಾರಿ ಬೆಳವಣಿಗೆಯಾಗಿದೆ. ತಮ್ಮ ನಿರ್ಮಾಣದ ಮಹಾತ್ವಾಕಾಂಕ್ಷೆಯ ಚಿತ್ರ ವಿಷ್ಣು ಬಿಡುಗಡೆಗೆ ಸಿದ್ಧವಾಗಿದ್ದಾಗಲೇ ಹಿರಿಯ ನಿರ್ದೇಶಕ ದ್ವಾರಕೀಶ್ ಅವರ ವಿಷ್ಣುವರ್ಧನ ಚಿತ್ರ ಬಿಡುಗಡೆಯಾಯಿತು. ಹೀಗಾಗಿ ತಮ್ಮ ಚಿತ್ರಕ್ಕೆ ಚಿತ್ರಮಂದಿರದ ಕೊರತೆಯಾಗಿ ಚಿತ್ರ ಕೈಕೊಟ್ಟಿತು. ಇಂಥ ಸಂದರ್ಭ ಅನೇಕ ಸಾರಿ ಒದಗಿದೆ. ಹೀಗಾಗಿ ಉತ್ತಮ ಕಥೆಯಿದ್ದರೂ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಎದುರಾಗುವ ಸವಾಲುಗಳಿಂದಾಗಿಯೇ ಚಿತ್ರಗಳಿಗೆ ಸೋಲಾಗುತ್ತಿದೆ.
ಇಂದು ಚಿತ್ರೀಕರಣ ಮಾಡುವುದು ತೀರಾ ಸುಲಭ. ಆದರೆ ಚಿತ್ರ ಬಿಡುಗಡೆ ಹಾಗೂ ಸೂಕ್ತ ಚಿತ್ರಮಂದಿರಗಳ ಲಭ್ಯತೆಯೇ ನಿರ್ಮಾಪಕರಿಗೆ ದೊಡ್ಡ ಸಮಸ್ಯೆ ಎಂದು ನೋವು ತೋಡಿಕೊಂಡರು. ಈ ಸಂದರ್ಭದಲ್ಲಿ ಚಿತ್ರ ತಂಡದ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.