ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆಗೆ ಆಕ್ರೋಶನಗರಸಭೆಯಲ್ಲಿ ಕಾಂಗ್ರೆಸ್ಗೆ ಬಹುಮತವಿಲ್ಲ-ಹೋರಾಟ ಮುಂದುವರಿಕೆ: ಎಚ್ಚರಿಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.18
ಸ್ಥಳೀಯ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿಲ್ಲ. ಕಳೆದ ಬಾರಿಗಿಂತ ಕಡಿಮೆ ಸದಸ್ಯರು ಆಯ್ಕೆಯಾಗಿದ್ದಾರೆ.
ಹಾಗೆಯೇ ಸದ್ಯ ಆಯ್ಕೆಯಾಗಿರುವ ಸದಸ್ಯರು ವೈಯಕ್ತಿಕ ಸಾಮರ್ಥ್ಯದಿಂದ ಆಯ್ಕೆಯಾಗಿದ್ದಾರೆಯೇ ವಿನಾ ಅದು ಕಾಂಗ್ರೆಸ್ನ ಜಿಲ್ಲಾಧ್ಯಕ್ಷರಿಂದಲ್ಲ ಎಂದಿರುವ ಜನಪರ ಸಂಘಟನೆಗಳ ಒಕ್ಕೂಟವು ನಗರಸಭೆಯಲ್ಲಿನ ಅಕ್ರಮಗಳ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಲಿದೆ.
ಲೇವಡಿ: ನಗರದಲ್ಲಿ ಸೋಮವಾರ 27 ಸಂಘಟನೆಗಳ ಒಕ್ಕೂಟದಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಮುಖ ಜೆ.ಬಿ. ರಾಜು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲವಿನಿಂದ ಬೀಗುತ್ತಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅವರು 27 ಸಂಘಟನೆಗಳ ಒಕ್ಕೂಟದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜನತೆ ಅನೇಕ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದವರನ್ನು ಇನ್ನಿಲ್ಲದಂತೆ ಸೋಲಿಸಿದ್ದಾರೆಂಬುದನ್ನು ಮರೆಯುವಂತಿಲ್ಲ ಎಂದು ಲೇವಡಿ ಮಾಡಿದರು.
ನಗರಸಭೆಯಲ್ಲಿ ಕಳೆದ ಅವಧಿಗೆ ನಡೆದ ಅಕ್ರಮಗಳ ಬಗ್ಗೆ ಮತದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆಯೇ ವಿನಾ ಕಾಂಗ್ರೆಸ್ ಬೆಂಬಲಿಸಿಲ್ಲ. ಕಾಂಗ್ರೆಸ್ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ 14 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.
ನಗರಸಭೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದ ಆಡಳಿತ ಅಧಿಕಾರಕ್ಕೆ ಬಂದರೆ ಜನಪರ ಸಂಘಟನೆಗಳ ಒಕ್ಕೂಟದಿಂದ ಹೋರಾಟ ನಿರಂತರ ಮುಂದುವರಿಸಿಕೊಂಡು ಹೋಗಲಾಗುತ್ತದೆ.
ಅಕ್ರಮಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜನರು ಕೋಟ್ಯಂತರ ರು. ತೆರಿಗೆ ಪಾವತಿಸುತ್ತಾರೆ. ಅವರ ತೆರಿಗೆ ಹಣದ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಅಡ್ಡಗಾಲು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಕಳೆದ ಅವಧಿಗೆ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದ್ದಕ್ಕೆ ಜನ ಬೆಂಬಲಿಸಿದ್ದಾರೆಂದು ಹೇಳಿಕೊಂಡಿರುವುದು ಅವರ ಊಹೆಯಷ್ಟೇ. ನಗರಸಭೆಯಲ್ಲಿ ಹತ್ತಾರು ಅಕ್ರಮಗಳು ನಡೆದಿವೆ. ಎಸ್ಸಿಗಳಿಗೆ ಮೀಸಲಾದ ಶೇ.22.75 ಅನುದಾನದ ಬಳಕೆಯಲ್ಲಿ ನಿರ್ಲಕ್ಷ್ಯ ತೋರುವ ಮೂಲಕ ಕಾಂಗ್ರೆಸ್ ಎಸ್ಸಿಗಳ ಪ್ರಗತಿಗೆ ಅಡ್ಡಗಾಲಾಗಿದೆಯೆಂದು ಟೀಕಿಸಿದರು.
ಆರೋಪ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್, ತಮ್ಮ ಸಂಘಟನೆಗಳ ವಿರುದ್ಧ ಅನಗತ್ಯವಾದ ಹೇಳಿಕೆ ನೀಡಿ ಕೆಣಕಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಘಟನೆಗಳು ತಮ್ಮ ಹೋರಾಟ ಮತ್ತಷ್ಟು ಚುರುಕುಗೊಳಿಸಲಿವೆ. ಕೆಣಕುವ ಕಾರ್ಯ ಬಿಟ್ಟು ಪ್ರಾಮಾಣಿಕವಾಗಿ ಅಭಿವೃದ್ಧಿಯ ಕಾರ್ಯ ಮಾಡಿದ್ದರೆ ಜನತೆ ಮೆಚ್ಚುಗೆ ದೊರೆಯುತ್ತಿತ್ತು.
ನಗರಸಭೆಯ ಚುನಾವಣೆಯಲ್ಲಿ ಹಾಗೂ ನಗರಸಭೆಯ ಕಳೆದ ಅವಧಿಯಲ್ಲಿ ನಡೆದ ಎಲ್ಲ ಅಕ್ರಮಗಳ ಹಿಂದೆ ಬಿಜೆಪಿ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್ ಕೈವಾಡವಿದೆ. ಮತದಾರರ ಪಟ್ಟಿಯಿಂದ ಅನೇಕರ ಹೆಸರುಗಳು ನಾಪತ್ತೆಯಾಗಿರುವುದರ ಹಿಂದೆ ಹಾಗೂ ಹೆಸರುಗಳು ಬೇರೆ ಬೇರೆ ವಾರ್ಡುಗಳಿಗೆ ಸ್ಥಳಾಂತರಗೊಂಡಿರುವುದರ ಹಿಂದೆ ಈ ಇಬ್ಬರ ಪಾಲಿದೆ ಎಂದು ಗಂಭೀರ ಆರೋಪ ಮಾಡಿದರು.
ನಗರಸಭೆಗೆ ಅನೇಕ ಹೊಸಬರ ಪ್ರವೇಶವಾಗಿರುವುದು ಸಂಘಟನೆಗಳಿಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಹೊಸ ಸದಸ್ಯರು ಕಾಂಗ್ರೆಸ್ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ. ನಗರಸಭೆಯಲ್ಲಿ ಅಕ್ರಮಗಳಿಗೆ ಅವಕಾಶ ನೀಡದೇ ಜನತೆಗೆ ಉತ್ತಮ ಅವಕಾಶ ನೀಡುವ ಕಾರ್ಯ ಮಾಡುವತ್ತ ನಿಗಾ ಇರಿಸಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಅಂಬಣ್ಣ ಅರೋಲಿಕರ್, ಶಿವುಕುಮಾರ್ ಯಾದವ್, ರಾಜೇಶ್ ಕುಮಾರ್, ಅಶೋಕ ಕುಮಾರ್ ಜೈನ್, ನರಸಪ್ಪ ಮಾದಿಗ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

