ರಾಯಚೂರು

ಶೋಷಿತ ವರ್ಗ ಜಾಗೃತಿಗೆ ಸಾಹಿತ್ಯ ನೆರವು ಅಗತ್ಯ

Published On :

ಕ.ಪ್ರ. ವಾರ್ತೆರಾಯಚೂರುಮಾ.23
ಸಮಾಜದಲ್ಲಿ ಶೋಷಿತರ ಬದುಕಿನ ಕಷ್ಟಗಳು, ಏಳು ಬೀಳುಗಳು, ಆಕ್ರೋಶವು ಸಾಹಿತ್ಯದಲ್ಲಿ ಹೊರಹೊಮ್ಮಬೇಕು. ಆ ಮೂಲಕ ಸಾಮಾಜಿಕ ವ್ಯವಸ್ಥೆಯ ಮೇಲೆ ಅಂಥ ಸಾಹಿತ್ಯ ಜಾಗೃತಿಗೆ ಕಾರಣವಾಗಬೇಕಿದೆ ಎಂದು ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸ್ನೇಹಜೀವಿ ಸಂಸ್ಥೆ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆಯಿಂದ ಆಯೋಜಿಸಿದ್ದ ಹೆತ್ತವಳು ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಧ್ವನಿಮುದ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಸಮಾಜದಲ್ಲಿ ಮೇಲ್ವರ್ಗದವರಿಂದ ಕೆಳಸ್ತರದವರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಗ್ರಾಮೀಣ ಭಾಗದ ಜನರಲ್ಲಿ ಹಾಡಿನ ಮೂಲಕ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಈ ಮೂಲಕ ಚಾಲನೆ ನೀಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಯತ್ನಕ್ಕೆ ಪೂರಕ: ಶೋಷಿತರ ಬದುಕು, ಬವಣೆಯನ್ನು ಹಾಡಿನ ರೂಪದಲ್ಲಿ ಹೊರತರುತ್ತಿರುವ ಪ್ರಯತ್ನ ವಿನೂತನ. ಬದುಕಿನ ಬವಣೆಯನ್ನು ಎಳೆ ಎಳೆಯಾಗಿ ಹಾಡಿನ ಮೂಲಕ ರೂಪಿಸಿ ಕಟ್ಟಿಕೊಡುವ ಕಾರ್ಯವು ಆತ್ಮಗೌರವ, ಸ್ವಾವಲಂಬನೆ ಮೂಲಕ ಬಂಡಾಯದ ಹೋರಾಟ ಕಟ್ಟುವ ನಿಟ್ಟಿನಲ್ಲಿ ಸಾಗಿರುವ ಪ್ರಯತ್ನಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ಧ್ವನಿ ಮುದ್ರಿಕೆಯಲ್ಲಿ ಶೋಷಿತ ಸಮುದಾಯಕ್ಕೆ ಸೇರಿದ ಮಕ್ಕಳು ಮತ್ತು ಮಹಿಳೆಯರ ಶೈಕ್ಷಣಿಕ ಪ್ರಗತಿ, ಆರೋಗ್ಯ ಕಾಪಾಡಿಕೊಳ್ಳುವ ಬಗೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಹತ್ವ ನೀಡಿರುವುದು ಒಳ್ಳೆಯ ಕಾರ್ಯ. ಸಾಹಿತ್ಯದ ಮೂಲಕ ಶೋಷಿತರ ಸರ್ವಾಂಗೀಣ ಪ್ರಗತಿಗೆ ವೇದಿಕೆ ಸಜ್ಜುಗೊಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ನೋವಿನ ನುಡಿ: ಹೈದರಾಬಾದ್ ಕರ್ನಾಟಕ ವಿಮೋಚನಾ ವೇದಿಕೆ ಕೇಂದ್ರ ಸಂಯೋಜಕ ಅಂಬಣ್ಣ ಅರೋಲಿಕರ್ ಮಾತನಾಡಿ, ಕಡು ಬಡತನ, ಮೇಲ್ವರ್ಗದ ದೌರ್ಜನ್ಯ, ಅಜ್ಞಾನದಿಂದ ಅನುಭವಿಸಿದ ನೋವಿನ ನುಡಿಯೇ ಇಲ್ಲಿ ಸಾಹಿತ್ಯವಾಗಿದೆ. ಅದಕ್ಕೆ ರಾಗ ಸಂಯೋಜಿಸಿ ಧ್ವನಿಮುದ್ರಿಕೆ ಸಜ್ಜುಗೊಳಿಸಲಾಗಿದೆ ಎಂದರು.
ಇದಕ್ಕೂ ಮೊದಲು ಸಮಾರಂಭವನ್ನು ದ್ಯಾಮಮ್ಮ ಹಾಗೂ ಸಂಗಡಿಗರು ಉದ್ಘಾಟಿಸಿದರು. ಅಧ್ಯಕ್ಷತೆ ಸ್ನೇಹಜೀವಿ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್.ದೊಡ್ಡಪ್ಪ ಮಾಸ್ತರ್ ವಹಿಸಿದ್ದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಕರಿಯಪ್ಪ ಮಾಸ್ತರ್, ದಲಿತ ಸಾಹಿತಿ ದಾನಪ್ಪ ನಿಲೋಗಲ್, ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಸ್ಥೆಯ ರಾಜ್ಯ ಮುಖಂಡ ಜೆ.ಬಿ.ರಾಜು, ದಲಿತ ಮುಖಂಡ ಎಂ.ಆರ್.ಭೇರಿ, ಕಲಾವಿದ ಶರಣಪ್ಪ ಗೋನಾಳ, ಸಂಸ್ಥೆ ಖಜಾಂಚಿ ಎಂ.ಶಂಕರ, ಎನ್.ಪದ್ಮವರ್ಧನ, ಸುಜಾತಾ ಅಂಬಣ್ಣ ಅರೋಲಿಕರ್, ಜ್ಯೋತಿ ಸೇರಿದಂತೆ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ಜನತೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.