ಆರ್ಟಿಪಿಎಸ್: 6ನೇ ಘಟಕ ಸ್ಥಗಿತ, ವಿದ್ಯುತ್ ಉತ್ಪಾದನೆಗೆ ಹಿನ್ನಡೆ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.24
ಬೇಸಿಗೆಯ ಆರಂಭದ ಜತೆಗೆ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಲ್ಲ ಘಟಕಗಳಿಂದ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಒತ್ತಡ ಹೆಚ್ಚುತ್ತಿದೆ. ಪರಿಣಾಮ ಘಟಕಗಳು ದುರಸ್ತಿಗೆ ಸಿಲುಕುತ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ ಐದನೇ ಘಟಕ ದುರಸ್ತಿಗೀಡಾಗಿತ್ತು. ಭಾನುವಾರ ಬೆಳಗ್ಗೆ 6ನೇ ಘಟಕದಲ್ಲಿ ತಾಂತ್ರಿಕ ದೋಷ ಕಂಡುಬಂದು ಉತ್ಪಾದನೆ ಸ್ಥಗಿತಗೊಳಿಸಿದೆ.
ಟ್ಯೂಬ್ನಲ್ಲಿ ಸೋರಿಕೆ: ವಿದ್ಯುತ್ ಕೇಂದ್ರದ ಆರನೇ ಘಟಕದ ಬಾಯ್ಲರ್ ಟ್ಯೂಬ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ವಿದ್ಯುತ್ ಕೇಂದ್ರದ ಐದನೇ ಘಟಕವು ಕಳೆದ ಎರಡು ದಿನಗಳ ಹಿಂದಷ್ಟೇ ದುರಸ್ತಿಗೀಡಾಗಿತ್ತು. ಸದ್ಯ ಆರನೇ ಘಟಕವೂ ದುರಸ್ತಿಗೆ ಸಿಲುಕಿದ್ದರಿಂದ ವಿದ್ಯುತ್ ಕೇಂದ್ರದ ಒಟ್ಟಾರೆ ವಿದ್ಯುತ್ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.
ವಿದ್ಯುತ್ ಕೇಂದ್ರದ ಆರು ಘಟಕಗಳಿಂದ ಭಾನುವಾರ ಬೆಳಗ್ಗೆವರೆಗೆ 950 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗಿದೆ. ಈಚೆಗೆ ಇಎಸ್ಪಿ ಕುಸಿತದ ಅವಘಡದ ನಂತರದಲ್ಲಿ ದುರಸ್ತಿಗೊಂಡಿದ್ದ 8ನೇ ಘಟಕದ ಪೂರ್ಣ ಸಾಮರ್ಥ್ಯ 250 ಮೆವ್ಯಾಗೆ ಪ್ರತಿಯಾಗಿ 100 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
100ರಿಂದ 150 ಮೆವ್ಯಾ: ಎಲ್ಲ 8 ಘಟಕಗಳು ನಿರಂತರ ವಿದ್ಯುತ್ ಉತ್ಪಾದಿಸಿದಲ್ಲಿ ಒಟ್ಟು 1720 ಮೆವ್ಯಾ ವಿದ್ಯುತ್ ಲಭ್ಯವಾಗುತ್ತಿತ್ತು. ಆದರೆ ಸದ್ಯ ಎರಡು ಘಟಕಗಳು ದುರಸ್ತಿಗೀಡಾಗಿರುವುದು ಮತ್ತು ಸದ್ಯ ಕಾರ್ಯನಿರ್ವಹಿಸುತ್ತಿರುವ ಎಲ್ಲ ಘಟಕಗಳು ಅವುಗಳ ತಲಾ ಸಾಮರ್ಥ್ಯ 210 ಮೆವ್ಯಾ ಬದಲಿಗೆ 100ರಿಂದ 150 ಮೆವ್ಯಾ ವಿದ್ಯುತ್ ಉತ್ಪಾದಿಸುತ್ತಿರುವುದು ವಿದ್ಯುತ್ ಕೊರತೆಗೆ ದಾರಿ ಮಾಡಿದೆ.
ದುರಸ್ತಿ: ವಿದ್ಯುತ್ ಘಟಕಗಳನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿದರೆ 25ವರ್ಷಗಳಷ್ಟು ಹಳೆಯದಾಗಿರುವ ಕೆಲ ಘಟಕಗಳು ದುರಸ್ತಿಗೀಡಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿ ಅಧಿಕಾರಿಗಳು ಅವುಗಳಿಂದ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಮುಂದಾಗುತ್ತಿಲ್ಲ.
ಈ ಮಧ್ಯೆ ಕಳೆದ ಕೆಲ ತಿಂಗಳಿನಿಂದ ವಿದ್ಯುತ್ ಕೇಂದ್ರಕ್ಕೆ ಲಭ್ಯವಾಗುತ್ತಿರುವ ಕಲ್ಲಿದ್ದಲು ಕಳಪೆ ಗುಣಮಟ್ಟದ್ದಾಗಿರುವುದು ವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿದ್ದು, ತಾಂತ್ರಿಕದೋಷ ಹಾಗೂ ಕಳಪೆ ಕಲ್ಲಿದ್ದಲು ಪೂರೈಕೆಯಾಗುತ್ತಿರುವುದರಿಂದ ಸುಮಾರು 700 ಮೆವ್ಯಾ ವಿದ್ಯುತ್ ಉತ್ಪಾದನೆಯಲ್ಲಿ ಖೋತಾ ಆಗುತ್ತಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

