ರಾಯಚೂರು

ವಸತಿ ಅನುದಾನ ದುರ್ಬಳಕೆ; ತನಿಖೆಗೆ ಆಗ್ರಹಿಸಿ ಧರಣಿ

Published On :

ಕನ್ನಡಪ್ರಭ ವಾರ್ತೆ   ರಾಯಚೂರು   ಮಾ.25
ದೇವದುರ್ಗ ತಾಲೂಕು ಪಲಕನಮರಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅಕ್ರಮದ ತನಿಖೆಗೆ ಆಗ್ರಹಿಸಿ ರಾಯಚೂರಿನಲ್ಲಿ ಸೋಮವಾರ ಭಾರತ್ ಯುವಸೇನೆ ನೇತೃತ್ವದಲ್ಲಿ ಧರಣಿ ನಡೆಸಿ ಜಿಪಂ.ಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ದಪ್ಪ ನೇತೃತ್ವದಲ್ಲಿ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದ ವಂಚಿತ ಜನರು, ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಪಂ.ನಲ್ಲಿ ಮೃತರಾದವರ ಹೆಸರಿಗೆ ವಸತಿ ಯೋಜನೆಗಳ ಅಡಿ ಮನೆ ಮಂಜೂರು ಮಾಡಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಹೊರ ಜಿಲ್ಲೆಯಲ್ಲಿ ನಗದೀಕರಣ: ಗ್ರಾಮದ ದುರ್ಗಮ್ಮ ಗಂಡ ದುರ್ಗಪ್ಪ ಅವರು ವಸತಿ ಯೋಜನೆಯಡಿ ಮೊದಲ ಕಂತಿನ 5 ಸಾವಿರ ಹಣ ಪಡೆದಿದ್ದರು. ಅವರು ಆನಂತರದಲ್ಲಿ ಮೃತರಾಗಿದ್ದಾರೆ. ಆದರೆ ಗ್ರಾಪಂ.ನಲ್ಲಿ ಮೃತ ದುರ್ಗಮ್ಮಳ ಹೆಸರಿನಲ್ಲಿಯೂ 2 ಕಂತಿನ ಹಣ ತಲಾ 15 ಸಾವಿರ ಮಂಜೂರು ಮಾಡಿ ಚೆಕ್ ಪಡೆದು ಅಕ್ರಮ ಎಸಗಲಾಗಿದೆ ಎಂದು ದೂರಿದರು.
ಈ ಮೂಲಕ ಗ್ರಾಪಂ ಅಧ್ಯಕ್ಷ ಹಾಗೂ ತಾಪಂ ಇಒ ಅವರು ಅಕ್ರಮದಲ್ಲಿ ಶಾಮೀಲಾಗಿ 1.41 ಕೋಟಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಖೊಟ್ಟಿ ಹಾಗೂ ಮೃತರ ಹೆಸರಿನಲ್ಲಿನ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದ್ದರ ಬಗ್ಗೆ ದಾಖಲೆ ತಯಾರಿಸಲಾಗಿದೆ. ಅಷ್ಟೇ ಅಲ್ಲ ಚೆಕ್ಗಳನ್ನು ಅನುಮಾನಾಸ್ಪದ ರೀತಿಯಲ್ಲಿ ಹೊರ ಜಿಲ್ಲೆಗಳಲ್ಲಿ ನಗದೀಕರಣ ಮಾಡಿಸಲಾಗಿದೆ ಎಂದು ದೂರಿದರು.
ಸೂಕ್ತ ತನಿಖೆಗೆ ಆಗ್ರಹ: ಸರ್ಕಾರದ ನಿಯಮದಂತೆ ಅನುದಾನದ ಮೊತ್ತವನ್ನು ವಸತಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡದೇ ನೇರವಾಗಿ ಚೆಕ್ ನೀಡಿರುವುದು ಅಕ್ರಮಕ್ಕೆ ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ 2011 ಜುಲೈ 18ರಿಂದ 2013 ಜನವರಿ 18ರವರೆಗಿನ ಅವಧಿಯಲ್ಲಿ ಪಲಕನಮರಡಿ ಗ್ರಾಪಂ.ನ ವಸತಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಿಲ್ ಕೂಡಲೇ ತಡೆಹಿಡಿಯಬೇಕು. ಅನುದಾನ ಪಾವತಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಹೋರಾಟ ನಿರತರು ಜಿಪಂ ಸಿಇಒ ಮನವಿ ಸಲ್ಲಿಸಿ ತಮಗಾದ ಅನ್ಯಾಯದ ಬಗ್ಗೆ ಮನವಿ ಮಾಡಿದರು.
ಭಾರತ್ ಯುವ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ದಪ್ಪ, ಫಲಾನುಭವಿಗಳಾದ ನರಸಮ್ಮ, ದುರ್ಗಮ್ಮ, ನಾಗಮ್ಮ, ಪದ್ಮಾವತಿ, ಗಂಗಮ್ಮ, ಹನುಮಂತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.