ನಾಳೆ ಕೃಷಿ ವಿವಿ ಘಟಿಕೋತ್ಸವ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.28
ನಗರದ ರಾಯಚೂರು ಕೃಷಿ ವಿವಿಯ ಮೂರನೇ ಘಟಿಕೋತ್ಸವ ಸಮಾರಂಭ ಮಾ.30 ರಂದು ನಡೆಯಲಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ದೇಶದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ನಗರದ ಕೃಷಿ ವಿವಿಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್, ಮಾ.30ರಂದು ಬೆಳಗ್ಗೆ 10ಕ್ಕೆ ಕೃಷಿ ವಿವಿ ಆವರಣದಲ್ಲಿನ ಪ್ರೇಕ್ಷಾಗೃಹದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ರಾಜ್ಯದ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿ ಹಂಸರಾಜ ಭಾರದ್ವಾಜ್ ವಹಿಸಲಿದ್ದಾರೆಂದು ಹೇಳಿದರು.
ಪದವಿ ಪ್ರದಾನ: ಸಮಾರಂಭದಲ್ಲಿ ವಿವಿಯಲ್ಲಿ ವ್ಯಾಸಂಗ ಮಾಡಿದ ಒಟ್ಟು 137 ಸ್ನಾತಕ ಮತ್ತು 67 ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 111 ಜನ ಸ್ನಾತಕ ವಿದ್ಯಾರ್ಥಿಗಳು ಹಾಗೂ 45 ಜನ ಸ್ನಾತಕೋತ್ತರ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದು, ಪದವಿ ಸ್ವೀಕರಿಸಲಿದ್ದಾರೆಂದು ಹೇಳಿದರು.
2011-12ನೇ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿನ ಉತ್ತಮ ಸಾಧನೆಗೆ ವಿವಿ ನೀಡುವ ರೈತ ವಿಜ್ಞಾನಿ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಹಾಗೂ ಗುಲ್ಬರ್ಗ ಜಿಲ್ಲೆಯ ಹಾಲ ಸುಲ್ತಾನಪುರ ಗ್ರಾಮದ ರೈತ ಶರಣಬಸಪ್ಪ ಪೀರಪ್ಪ ಪಾಟೀಲ್ ಅವರಿಗೆ ನೀಡಲಾಗುತ್ತದೆ. ಅದೇ ರೀತಿ ಕೃಷಿ ವಿವಿಯಲ್ಲಿ ಉತ್ತಮ ಬೋಧನೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
ರೈತರೊಂದಿಗೆ ಸಂಪರ್ಕ: ಕೃಷಿ ವಿವಿ ಸಂಶೋಧನೆಗಳನ್ನು ಹೆಚ್ಚೆಚ್ಚು ರೈತರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ಕೃಷಿ ವಿವಿ ಕಾರ್ಯನಿರತವಾಗಿದೆ. ಅದರಲ್ಲೂ ಕೃಷಿ ವಿಜ್ಞಾನಿಗಳು ನಿರಂತರವಾಗಿ ರೈತರೊಂದಿಗೆ ಸಂಪರ್ಕವಿರಿಸಿಕೊಂಡು ರೈತರ ಹಿತ ಕಾಪಾಡಲು ಶ್ರಮಿಸುತ್ತಿದ್ದು, ವಿವಿ ಮೊದಲ ವರ್ಷದಲ್ಲಿ 14ಸಾವಿರ ಕ್ವಿಂಟಾಲ್ ಮೂಲಬೀಜೋತ್ಪಾದನೆ ಮಾಡಿತ್ತು. 2012-13ರಲ್ಲಿ ಈ ಪ್ರಮಾಣ 36 ಸಾವಿರ ಕ್ವಿಂಟಾಲ್ಗೆ ತಲುಪಿದೆ ಎಂದು ಹೇಳಿದರು.
ರಾಯಚೂರು ಕೃಷಿ ವಿವಿಯ ಸಂಶೋಧನೆಯಾದ ಕೀಟಗಳ ನಿರ್ವಹಣೆಗೆ ತಂತ್ರಜ್ಞಾನದ ಬಳಕೆಯ ಇ-ಸ್ಯಾಪ್ ತಂತ್ರಜ್ಞಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ವಿವಿ ವ್ಯಾಪ್ತಿಯ 5ಸಾವಿರ ರೈತರಿಗೆ ಇದರ ಪ್ರಯೋಜನ ಪಡೆದಿದ್ದು, ಮುಂದಿನ ದಿನಗಳಲ್ಲಿ ವಿವಿ ವ್ಯಾಪ್ತಿಯ 6 ಜಿಲ್ಲೆಗಳ 1ಲಕ್ಷ ರೈತರಿಗೆ ಈ ತಂತ್ರಜ್ಞಾನದ ನೆರವು ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು.
3.5ಕೋಟಿ ಒಪ್ಪಂದಕ್ಕೆ ವಿವಿ ಸಹಿ: ಅದೇ ರೀತಿ ಸದ್ಯ 7 ಬೆಳೆಗಳಲ್ಲಿನ ಕೀಟ ನಿಯಂತ್ರಣ ಕುರಿತು ಸಲಹೆ ಇ-ಸ್ಯಾಪ್ ತಂತ್ರಜ್ಞಾನದಲ್ಲಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 20 ಬೆಳೆಗಳಿಗೆ ಹೆಚ್ಚಿಸಲು ಯೋಜಿಸಲಾಗಿದೆ. ವಿವಿಧ ರಾಜ್ಯಗಳಿಂದ ಈ ತಂತ್ರಜ್ಞಾನಕ್ಕಾಗಿ ಬೇಡಿಕೆ ಬಂದಿದೆ. ಕೇಂದ್ರ ಸರ್ಕಾರದ ಸಸ್ಯ ಸಂರಕ್ಷಣಾ ವಿಭಾಗದ ಜತೆ ಈ ತಂತ್ರಜ್ಞಾನ ಅಭಿವೃದ್ಧಿಗೆ 3.5ಕೋಟಿ ಒಪ್ಪಂದಕ್ಕೆ ವಿವಿ ಸಹಿ ಹಾಕಿದೆ ಎಂದು ತಿಳಿಸಿದರು.
ವಿವಿಯು ಮೂಲ ಬೀಜೋತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ಮಠದ ಕಡೆಗೆ ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದು ಅದರಲ್ಲಿ ಈಗಾಗಲೇ ಗುಲ್ಬರ್ಗದ ಬಬಲಾದ ಮತ್ತು ಬೀದರ್ನ ತಡೋಳಾ ಹಾಗೂ ಕೊಪ್ಪಳದ ಗವಿಮಠದ ಸಹಯೋಗದಲ್ಲಿ ಮೂಲಬೀಜೋತ್ಪಾದನೆಗೆ ಪೂರಕ ಕಾರ್ಯಕ್ರಮ ಜಾರಿಗೆ ತಂದಿದೆ. ಅದರಿಂದ ಬೀಜೋತ್ಪಾದನೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.
ಯೋಜನೆಗೆ 6 ಕೋಟಿ: ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದೆ. ಆದರೆ ಅದಕ್ಕೆ ಅವಶ್ಯವಿರುವ 45 ಕೋಟಿ ಅನುದಾನ ಒದಗಿಸಿದ ನಂತರವೇ ಕಾಲೇಜು ಆರಂಭಗೊಳ್ಳಲಿದೆ. ರಾಜ್ಯ ಸರ್ಕಾರ ಕೃಷಿ ವಿವಿಗೆ ಪ್ರಸಕ್ತ ವರ್ಷಕ್ಕೆ 72 ಕೋಟಿ ಬಜೆಟ್ನಲ್ಲಿ ನಿಗದಿ ಮಾಡಿದೆ ಎಂದು ಹೇಳಿದರು.
ದೇವದುರ್ಗ ತಾಲೂಕಿನ ವೀರಗೋಟ ಬಳಿ ಕೃಷಿ ವಿವಿಯ ಜೈವಿಕ ಇಂಧನ ವಿಭಾಗದಿಂದ ಇಂಧನ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದ್ದು ಅದಕ್ಕಾಗಿ ಈಗಾಗಲೇ 42 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಯೋಜನೆಗೆ 6 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.
ಕೃಷಿ ವಿವಿಯ ಆದಾಯವು 2009-10ರಲ್ಲಿ 117 ಲಕ್ಷ ಆಗಿತ್ತು. 2012-13ರಲ್ಲಿ ಈ ಆದಾಯದ ಪ್ರಮಾಣ 950 ಲಕ್ಷಕ್ಕೆ ಏರಿಕೆ ಕಂಡಿದೆ. ಆದರೆ ಬರಗಾಲದ ಹಿನ್ನೆಲೆಯಲ್ಲಿ ಈ ಆದಾಯದ ಪ್ರಮಾಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಸಿತ ಕಾಣುವ ನಿರೀಕ್ಷೆಯಿದೆ ಎಂದು ಹೇಳಿದರು.
ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಡಿ.ಪಿ.ಬಿರಾದಾರ, ಎಲ್.ಬಿ. ಹೂಗಾರ್, ಎಸ್.ಜಿ. ಪಾಟೀಲ್, ಅನಂತಾಚಾರ್, ವಿಶ್ವನಾಥ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

