ರಾಯಚೂರು

ಪಕ್ಷೇತರನ ಪ್ರಮಾಣ ಪತ್ರ ಭರವಸೆ

Published On :

 -ವಿಶೇಷ ವರದಿ
ಕ.ಪ್ರ. ವಾರ್ತೆ, ರಾಯಚೂರು, ಮೇ 1

ಸ್ಟಾರ್ ಕ್ಯಾಂಪೇನರ್‌ಗಳ ಅಬ್ಬರದ ಪ್ರಚಾರ. ಹಣ ಬಲ, ತೋಳ್ಬಲದ ಪೈಪೋಟಿ. ಗೆದ್ದೇ ತೀರಬೇಕೆಂಬ ಹಟದ ಮಧ್ಯೆಯೇ ನಗರ ಕ್ಷೇತ್ರದಲ್ಲಿ ಪಕ್ಷೇತರರೊಬ್ಬರು ಮತದಾರರಿಗೆ ಮೂಲಸೌಲಭ್ಯ ಒದಗಿಸುವ ಪ್ರಮಾಣಪತ್ರವನ್ನೇ ನೀಡುವ ಮೂಲಕ ವಿನೂತನ ಪ್ರಚಾರ ಮಾಡುತ್ತಿದ್ದಾರೆ. ಆ ಮೂಲಕ ಮತದಾರರ ಗಮನ ಸೆಳೆಯುವ ಕಾರ್ಯದಲ್ಲಿದ್ದಾರೆ.
ಪೈಪೋಟಿ ನಡುವೆ ಪ್ರಚಾರ: ನಗರ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಾಂದ್ ಪಾಷಾ ಎಂಬುವವರೇ ಪ್ರಮಾಣ ಪತ್ರದ ಮೂಲಕ ಪ್ರಚಾರ ಕೈಗೊಳ್ಳುತ್ತಿದ್ದಾರೆ. ನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 21 ಜನ ಕಣದಲ್ಲಿದ್ದಾರೆ. ಎಲ್ಲರೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಆಯಾ ಪಕ್ಷಗಳ ಸ್ಟಾರ್ ಕ್ಯಾಂಪೇನರ್‌ಗಳೇ ಪ್ರಚಾರದ ಅಸ್ತ್ರ. ಆದರೆ ಪಕ್ಷೇತರರಿಗೆ ಅಂಥ ಅವಕಾಶವಿರುವುದಿಲ್ಲ.
ಹೀಗಾಗಿ ಅವ್ಯವಸ್ಥೆಯಿಂದ ಬೇಸತ್ತವರೆಲ್ಲರೂ ಸದ್ಯ ಕಣದಲ್ಲಿ ಪಕ್ಷೇತರರಾಗಿದ್ದಾರೆ. ಪಕ್ಷೇತರರು ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೆಂದೇ ಕಣದಲ್ಲಿರುತ್ತಾರೆಂಬುದು ಸಾರ್ವತ್ರಿಕ ಆರೋಪ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಗರ ಕ್ಷೇತ್ರದಲ್ಲಿ ಪಕ್ಷೇತರರು ಸದ್ದು ಮಾಡುತ್ತಿದ್ದಾರೆ. ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರಿಗೆ ಮುಸ್ಲಿಂ ಸಮುದಾಯದವರೇ ಆಗಿರುವ ಅನೇಕ ಪಕ್ಷೇತರರು ಪೈಪೋಟಿಯಲ್ಲಿದ್ದಾರೆ. ಅವರಲ್ಲಿ ಬಹುತೇಕರು ಸದ್ದಿಲ್ಲದೇ ಪ್ರಚಾರದಲ್ಲಿದ್ದಾರೆ.
ಅಫಿಡೆವಿಟ್ ಪ್ರಚಾರ: ಆದರೆ ಪಕ್ಷೇತರ ಅಭ್ಯರ್ಥಿ ಚಾಂದ್ ಪಾಷಾ ಅವರದ್ದು ವಿನೂತನ ಪ್ರಚಾರ. ಇವರೇ ಸ್ಟಾರ್ ಕ್ಯಾಂಪೇನರ್. ಅಫಿಡೆವಿಟ್ ನಲ್ಲಿಯೇ ತಮ್ಮ ಪ್ರಚಾರದ ವಿಷಯ ಮುದ್ರಿಸಿರುವ ಇವರು ತಮ್ಮ ಬೈಕ್ ಮೇಲೆಯೇ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಮೂಲತಃ ಇವರು ಶಕ್ತಿನಗರದಲ್ಲಿ ವೆಲ್‌ಡಿಂಗ್ ವರ್ಕಶಾಪ್ ಇರಿಸಿಕೊಂಡಿದ್ದು, ರಾಜಕೀಯಕ್ಕೆ ಕಾಲಿಡಲು ಯಾವುದೇ ಹಿನ್ನೆಲೆಯಲ್ಲಿ ಆಡಳಿತದಲ್ಲಿನ ಅವ್ಯವಸ್ಥೆಯ ವಿರುದ್ಧದ ಆಕ್ರೋಶವೇ ಇವರಿಗೆ ಕಣಕ್ಕಿಳಿಸಿದೆ ಎನ್ನಬಹುದು. ಇವರ ಕೈಯಲ್ಲಿ ರು. 30 ಸಾವಿರ ಅಷ್ಟೇ ಇವೆ. ಅಷ್ಟೇ ಹಣದಲ್ಲಿ ಪ್ರಚಾರ ಮಾಡುವುದು ಗುರಿ.
ಮತದಾರರಿಗೆ ಇವರು ಪ್ರಮಾಣಪತ್ರದಲ್ಲಿಯೇ ಭರವಸೆಗಳನ್ನು ನೀಡಿದ್ದಾರೆ. ನಗರ ಕ್ಷೇತ್ರದಲ್ಲಿ ಮೂಲಸೌಲಭ್ಯಗಳಿಗೆ ಕೊರತೆ ಇದ್ದು, ಅವುಗಳ ನಿವಾರಣೆಗೆ ಮೊದಲಾದ್ಯತೆ ನೀಡುವುದಾಗಿ ಪ್ರಮಾಣ ಮಾಡಿದ್ದಾರೆ. ಅದೇ ರೀತಿ ಶಾಸಕರಾಗಿ ಆಯ್ಕೆಯಾದವರು ಮತದಾರರನ್ನು ಹಾಗೂ ಕ್ಷೇತ್ರವನ್ನು ಆನಂತರದಲ್ಲಿ ಮರೆಯುವುದು ರೂಢಿ.
ಸ್ಪಂದನೆ: ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇವರು ಈಗಲೇ ಪ್ರಮಾಣ ಪತ್ರದ ಮೂಲಕ ಪ್ರತಿ ಮತದಾರರನ್ನು ಪ್ರತಿ ವರ್ಷವೂ ಭೇಟಿ ಯಾಗುವ ಭರವಸೆ ನೀಡಿದ್ದಾರೆ. ಪ್ರಜೆಗಳ ಬೇಡಿಕೆಗೆ ಕೂಡಲೇ ಸ್ಪಂದನೆ ನೀಡಲು ನಗರದಲ್ಲಿ ಶಾಸಕರ ಕಚೇರಿ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ತೆರೆದಿಡುವ ಭರವಸೆಯೂ ಇವರ ಪ್ರಮಾಣ ಪತ್ರದಲ್ಲಿ ನೀಡಲಾಗಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಇವರು, ಮತದಾರರು ಆರಿಸಿ ತಂದ ಮೇಲೆ ಕ್ಷೇತ್ರದ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಕಾರ್ಯವಾಗಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಮ್ಮನ್ನು ಬೆಂಬಲಿಸಿದ ಮತದಾರರನ್ನು ಕಡೆಗಣಿಸಿ ಬೆಂಗಳೂರು ಸೇರುತ್ತಿದ್ದಾರೆ. ಆಡಳಿತದಲ್ಲಿನ ಅವ್ಯವಸ್ಥೆಯ ವಿರುದ್ಧದ ಅಸಮಾಧಾನವೇ ತಮಗೆ ಸ್ಪರ್ಧೆಗಿಳಿಯಲು ಪ್ರೇರಣೆ ಎಂದು ಹೇಳಿದ್ದಾರೆ.
ಒಂದೆಡೆ ಅಬ್ಬರದ ಪ್ರಚಾರಕ್ಕೆ ಲಕ್ಷ ಲಕ್ಷ ರು. ವೆಚ್ಚ ಮಾಡುವ ಮೂಲಕ ಬಹಿರಂಗ ಪ್ರಚಾರ ಸಭೆ ನಡೆಸುವ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು, ಮತ್ತೊಂದೆಡೆ ವಿನೂತನ ಪ್ರಚಾರದ ಮೂಲಕ ಮತದಾರರ ಗಮನ ಸೆಳೆಯುತ್ತಿರುವ ಪಕ್ಷೇತರರ ಮಧ್ಯೆ ನಗರ ಕ್ಷೇತ್ರದ ಮತದಾರರು ಯಾರಿಗೆ ಒಲಿಯುತ್ತಾರೆಂಬ ಕುತೂಹಲ ಎಲ್ಲರಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.