'ಬಿಎಸ್ಸಾರ್ ಕಾಂಗ್ರೆಸ್ ಸೇರಿದ್ದು ನನ್ನ ತಪ್ಪು ನಿರ್ಧಾರ'
ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 11
ಬಿಎಸ್ಸಾರ್ ಕಾಂಗ್ರೆಸ್ ಸೇರಿದ್ದು ನನ್ನ ತಪ್ಪು ನಿರ್ಧಾರ ಎಂಬುದು ಅರಿವಾಗಿದೆ ಎಂದು ಮಾಜಿ ಸಂಸದ, ಪಕ್ಷದ ಮುಖಂಡ ಕೆ. ವಿರೂಪಾಕ್ಷಪ್ಪ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ನನ್ನ ಹಿತೈಷಿಗಳು ಸಹ ನನ್ನೊಂದಿಗೆ ಚರ್ಚಿಸಿದ್ದಾರೆ. ಆದರೆ ಅಂದಿನ ಸ್ಥಿತಿಗತಿಯಲ್ಲಿ ಅನ್ಯಮಾರ್ಗವಿಲ್ಲದೆ ರಾಮುಲು ಅವರೊಂದಿಗೆ ಕೈ ಜೋಡಿಸಬೇಕಾಯಿತು. ಪಕ್ಷದಿಂದ ನಮಗೆ ಯಾವುದೂ ಸಹಾಯ ದೊರೆಯಲಿಲ್ಲ. ಆದರೂ ಕಾರ್ಯಕರ್ತರ, ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಿನ ಬೆಳವಣಿಗೆ ನೋಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ತಲೆಬಾಗುವೆ: ಸಿಂಧನೂರು ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗೆ 36 ಸಾವಿರ ಮತಗಳನ್ನು ನೀಡಿರುವ ಮತದಾರರ ತೀರ್ಪಿಗೆ ತಲೆಬಾಗುವೆ. ನಮ್ಮ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಅಭ್ಯರ್ಥಿಗಳು ಎನ್ನುವುದನ್ನು ಅರಿತು ಜನ ಕಾಂಗ್ರೆಸ್ಗೆ ಮತ ನೀಡಿದ್ದರಿಂದ ನಮಗೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ರಾಜಕೀಯ ತೀರ್ಮಾನಿಸುವುದಾಗಿ ತಿಳಿಸಿದರು.
ಸಿದ್ದರಾಮಯ್ಯನಿಂದ ರಾಜ್ಯದ ಅಭಿವೃದ್ಧಿ: ರಾಜ್ಯದಲ್ಲಿ ದೇವರಾಜು ಅರಸು ಅವರ ನಂತರ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿಸುತ್ತಿರುವುದು ಸಂತಸ ವಿಚಾರ. ನ್ಯಾಯ, ನಿಷ್ಠುರ, ಕಳಂಕ ರಹಿತ ವ್ಯಕ್ತಿಯಾದ್ದರಿಂದ ಹಿಂದುಳಿದ ವರ್ಗದ ಅಭಿವೃದ್ಧಿ ಸಾಧ್ಯ ಹೇಳಿದರು.
1983ರಿಂದ ಸಿದ್ದರಾಮಯ್ಯನವರ ಒಡನಾಡಿಯಾಗಿದ್ದೇನೆ. ಪಕ್ಷಗಳು ಬೇರೆ ಬೇರೆ ಇರಬಹುದು. ಆದರೆ ನಮ್ಮಬ್ಬರ ವೈಚಾರಿಕತೆ ಒಂದೇ ಆಗಿದೆ. ಅನೇಕ ಸಭೆ, ಸಮಾರಂಭ, ಸಮಾವೇಶ, ಜಯಂತಿಗಳಿಗೆ ಅವರನ್ನು ನಾನು ವೈಯಕ್ತಿಕವಾಗಿ ಆಹ್ವಾನಿಸಿದ್ದೇನೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದರಿಂದ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ಪಡೆಯಲಿದೆ ಎಂದರು.
ವಿಶಿಷ್ಟ ರಾಜಕಾರಣಿಯಂತೆ: ಬಿಜೆಪಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತತ್ವ ಸಿದ್ಧಾಂತಕ್ಕೆ ಬೆಲೆ ಇರದ ಇಂದಿನ ಸ್ಥಿತಿಯಲ್ಲಿ ಬಸವಣ್ಣ, ಕನಕದಾಸ, ಲೋಹಿಯಾ ಅವರ ವಿಚಾರಧಾರಗಳನ್ನು ಅಳವಡಿಸಿಕೊಂಡಿರುವ ಸಿದ್ದರಾಮಯ್ಯ ಸಮಾಜದವಾದದ ಧ್ವನಿಯಾಗಿದ್ದಾರೆ. ಜಾತ್ಯತೀತ ವ್ಯಕ್ತಿಯಾಗಿ ಸಮಾನತೆಯ ಕನಸನ್ನು ಹೊಂದಿದ ವಿಶಿಷ್ಟ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರಿಂದ ವಂಚನೆಗೆ ಒಳಗಾಗಿ ರಾಜಕೀಯ ನಿವೃತ್ತಿ ಹೊಂದುವ ನಿರ್ಧಾರದಲ್ಲಿದ್ದರು. ಹಾಲುಮತ ಸಮಾಜದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಿದ್ದರಾಮಯ್ಯರನ್ನು ಗುರುತಿಸಿ ಆ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ವಿಶ್ವನಾಥ, ಎಚ್.ಎಂ. ರೇವಣ್ಣ ಹಾಗೂ ನಾನು ಅವರನ್ನು ಮನವೊಲಿಸಿ ಕಾಂಗ್ರೆಸ್ಗೆ ತರುವಲ್ಲಿ ಯಶಸ್ವಿಯಾದೆವು ಎಂದು ಹಳೆಯ ರಾಜಕಾರಣವನ್ನು ಮೆಲುಕು ಹಾಕಿದರು. ಅವರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸ್ವಚ್ಛ ಆಡಳಿತ ನೀಡುವುದರಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

