ಯೋಧ ಮಲ್ಲಪ್ಪನಿಗೆ ಭಾವಪೂರ್ಣ ನಮನ..
ಕನ್ನಡಪ್ರಭ ವಾರ್ತೆ ಶಹಾಪುರ ಮೇ 14
ಮಧ್ಯಪ್ರದೇಶದ ಝಾನ್ಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟ ತಾಲೂಕಿನ ಸಗರ ಗ್ರಾಮದ ಯೋಧ ಮಲ್ಲಪ್ಪ ಭಾಗಪ್ಪ ಅಂದ್ಯಾಳ(42)ರ ಪಾರ್ಥಿವ ಶರೀರವನ್ನು ಸೋಮವಾರ ರಾತ್ರಿ ಸ್ವಗ್ರಾಮಕ್ಕೆ ತರಲಾಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಸಗರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಸಗರ ಗ್ರಾಮದ ಹೆಮ್ಮೆಯ ಕುವರ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಪ್ಪ ಅವರು ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೈದರಾಬಾದ್ ಮೂಲಕ ಪಾರ್ಥಿವ ಶರೀರವನ್ನು ಸೋಮವಾರ ತರಲಾಯಿತು. ಅವರ ಅಕಾಲಿಕ ಮರಣಕ್ಕೆ ಅಬಾಲ ವೃದ್ಧರಾದಿಯಾಗಿ ಇಡೀ ಗ್ರಾಮದ ಜನತೆ ಕಂಬನಿ ಮಿಡಿದರು. ಯೋಧನ ಪಾರ್ಥಿವ ಶರೀರವನ್ನು ಸರ್ಕಾರಿ ಗೌರವದೊಂದಿಗೆ ಊರೊಳಗೆ ತಂದಾಗ ಇಡೀ ಗ್ರಾಮದಲ್ಲೇ ಮೌನ ಆವರಿಸಿತ್ತು. ಎಲ್ಲರಲ್ಲೂ ಶೋಕ ಮಡುಗಟ್ಟಿತ್ತು.
ಎಂದಿಗೂ ಮಲ್ಲಪ್ಪ ಅಮರ: ದೇಶ ಸೇವೆಗೆ ತೆರಳಿದ್ದ ನಮ್ಮೂರ ಯೋಧನ ಆಕಸ್ಮಿನ ಸಾವು ಇಡೀ ಗ್ರಾಮಕ್ಕೆ ದುಃಖದ ಸಂಗತಿಯಾಗಿದ್ದು, ಯುವಕ ಮಲ್ಲಪ್ಪ ಭಾಗಪ್ಪ ಅಂದ್ಯಾಳ ಸದ್ಯ ಕಣ್ಣೆದುರು ಇರದಿದ್ದರೂ ಆತ ಅಮರನಾಗಿದ್ದಾನೆ. ಸಗರನಾಡಿನ ಹೆಮ್ಮೆಯ ಪುತ್ರನಾಗಿದ್ದಾನೆ ಎಂದು ಗ್ರಾಮಸ್ಥರು ಕಂಬನಿಮಿಡಿಯುತ್ತ ವೀರಯೋಧನ ಗುಣಗಾನ ಮಾಡುತ್ತಿದ್ದರು. ಎಲ್ಲರ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಬಾಳಿ ಬದುಕಬೇಕಾದ ದೇಶ ರಕ್ಷಕನ ಸಾವು ಹೀಗಾಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಲ್ಲಪ್ಪ ಅವರು ಪತ್ನಿ ಹಾಗೂ ಮಕ್ಕಳಾದ ಪ್ರಮೋದ, ಪ್ರಶಾಂತ ಮತ್ತು ಪ್ರಿಯಾಂಕ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ದೇಹವನ್ನು ಕಂಡು ಕುಟುಂಬ ವರ್ಗದವರ ಕಣ್ಣೀರು ಕಟ್ಟೆ ಒಡೆದುಹೋಗಿತ್ತು. ಸಿಪಿಐ, ತಹಸೀಲ್ದಾರ್ ಮತ್ತು ಇನ್ನಿತರ ಅಧಿಕಾರಿಗಳು ಪಾಲ್ಗೊಂಡು ಸರ್ಕಾರಿ ಗೌರವ ಸಲ್ಲಿಸಿದರು. ಸೋಮವಾರ ರಾತ್ರಿ ಕಳೆದ ವರ್ಷ ಹುತಾತ್ಮನಾದ ಸುಭಾಷ ಮಡಿವಾಳರ ಸಮಾಧಿ ಪಕ್ಕದಲ್ಲಿಯೇ ಮಲ್ಲಪ್ಪ ಅವರು ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
ಈ ವೇಳೆ ಗ್ರಾಮದ ಬಸನಗೌಡ ಸಗರ, ಲಿಂಗಣ್ಣಾ ಪಡಶಟ್ಟಿ, ಪಿಡ್ಡಪ್ಪ ನಂದಿಕೋಲ, ಡಾ. ಚಂದ್ರಶೇಖರ ಸುಬೇದಾರ, ಡಾ. ದೇವಿಂದ್ರಪ್ಪ ಹಡಪದ, ನಾಗಣ್ಣಾ ಜಾಯಿ, ಮಹಾಂತಗೌಡ, ನಾಗನಗೌಡ ಸುಬೇದಾರ, ಭೀಮರಾಯ ಶೇರಿ, ರಾಮರಾವ ಕುಲ್ಕರ್ಣಿ, ಮೈಲಾರಪ್ಪ ಸಗರ, ಶಿವಲಿಂಗಣ್ಣಗೌಡ, ತಿರುಪತಿ, ಶೇಖಪ್ಪ, ಮಲ್ಲಪ್ಪದೇವಪ್ಪ, ಭಾಗಣ್ಣಾ ಕೂಡ್ಲೂರ, ಅಶೋಕ ಕೂಡ್ಲೂರ, ಸಿದ್ದಪ್ಪ ಸೂಗೂರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಶಾಸಕ ಗುರು ಪಾಟೀಲ ಶಿರವಾಳ ಗೌರವ ಸಮರ್ಪಣೆ
ನಮ್ಮೂರ ಯೋಧರೊಬ್ಬರು ಮೃತಪಟ್ಟರು ಎಂಬ ಸುದ್ದಿ ತಿಳಿದ ಶಾಸಕ ಗುರು ಪಾಟೀಲ ಶಿರವಾಳ ಸಗರ ಗ್ರಾಮಕ್ಕೆ ಆಗಮಿಸಿ ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಮರ್ಪಿಸಿದರು. ಒಂದೇ ವರ್ಷದಲ್ಲಿ ದೇಶ ರಕ್ಷಣೆ ಮಾಡುವ ಸಗರ ಗ್ರಾಮದ ಇಬ್ಬರು ವೀರ ಯೋಧರು ಸಾವನ್ನಪ್ಪಿದ್ದು ಬೇಸರದ ಸಂಗತಿ. ಇವರಿಬ್ಬರೂ ಸಗರನಾಡಿನ ಹೆಮ್ಮೆಯ ದ್ಯೋತಕವಾಗಿದ್ದು, ಇಬ್ಬೂ ಯೋಧರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಸಿಗುವ ಎಲ್ಲ ನೆರವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ವೀರಯೋಧನ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

