ಮಂತ್ರಿ ಸ್ಥಾನ: ಜಿಲ್ಲೆಗೆ ಮೊದಲ ಹಂತದಲ್ಲಿ ಅನುಮಾನ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 16
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದ ಸಚಿವ ಸಂಪುಟ ರಚನೆಗೆ ಮುಂದಾಗುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಮೇಲಾಟ ಆರಂಭಗೊಂಡಿದೆ. ಪ್ರಭಾವಿ ನಾಯಕರು ರೇಸ್ನಲ್ಲಿದ್ದು, ಜಿಲ್ಲೆಯಿಂದ ಆಯ್ಕೆಯಾಗಿರುವ ಹಿರಿಯರಿಗೆ ಸಚಿವ ಸ್ಥಾನ ಮೊದಲ ಹಂತದಲ್ಲಿಯೇ ದೊರೆಯುವುದು ಅನುಮಾನ ಎಂಬ ಮಾತು ಕೇಳಿಬಂದಿದೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಚಿವ ಸಂಪುಟ ರಚನೆಯ ನಿಟ್ಟಿನಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸಿದ್ಧಪಡಿಸಿದ್ದ ಪಟ್ಟಿಗೆ ಸಮ್ಮತಿಸಿದ್ದು, ಶನಿವಾರ ಮೊದಲ ಹಂತದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅದರಲ್ಲಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ನಾಯಕರಿಗೆ ಸ್ಥಾನ ದೊರೆಯುವುದು ಸದ್ಯದ ಮಟ್ಟಿಗೆ ಅನುಮಾನ ಎಂಬ ಶಂಕೆ ವ್ಯಕ್ತವಾಗಿದೆ.
ಸಚಿವ ಸ್ಥಾನ ಕಷ್ಟ ಕಷ್ಟ: ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಸಂಪುಟದಲ್ಲಿ ಸ್ಥಾನ ಮತ್ತು ಸೂಕ್ತ ಖಾತೆ ಪಡೆಯುವ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ಪ್ರಭಾವ ಬೀರಿದ್ದು, ಜಿಲ್ಲೆಯ ದೇವದುರ್ಗ ಶಾಸಕ ವೆಂಕಟೇಶ ನಾಯಕ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಆರಂಭದಲ್ಲಿಯೇ ಸಚಿವ ಸ್ಥಾನ ಒಲಿಯುವ ಲಕ್ಷಣಗಳು ಕ್ಷೀಣಿಸಿವೆ.
ಆರಂಭದಲ್ಲೇ ಹಿನ್ನಡೆ ಸಾಧ್ಯತೆ: ಕಳೆದ ಅವಧಿ ಬಿಜೆಪಿ ಸರ್ಕಾರದಲ್ಲಿ ಐವರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಹೊಣೆ ಹೊತ್ತಿದ್ದರೂ ಅವರು ಹೊರ ಜಿಲ್ಲೆಯವರಾಗಿದ್ದರಿಂದ ಜಿಲ್ಲೆಯತ್ತ ಕಾಳಜಿ ತೋರಿದ್ದು ಅಷ್ಟಕ್ಕಷ್ಟೇ. ಜಿಲ್ಲೆಯ ಪಾಲಿಗೆ ಅಭಿವೃದ್ಧಿ ಮರೀಚಿಕೆಯೇ ಆಗಿದೆ. ಇಂಥ ಪರಿಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ ಪಕ್ಷದ ಶಾಸಕರನ್ನು ಮತದಾರರು ಆರಿಸಿ ಕಳಿಸಿದ್ದಾರೆ. ಈ ಬಾರಿಯಾದರೂ ಸಚಿವ ಸ್ಥಾನ ಜಿಲ್ಲೆಯವರಿಗೆ ದೊರೆಯಲಿದೆ ಎಂಬ ನಿರೀಕ್ಷೆಗೆ ಆರಂಭದಲ್ಲಿಯೇ ಹಿನ್ನಡೆಯಾಗುವ ಸಾಧ್ಯತೆಯಿದೆ.
..ಭರವಸೆಯಿತ್ತು: ದೇವದುರ್ಗ ಶಾಸಕ ವೆಂಕಟೇಶ ನಾಯಕ ಅವರು ನಾಲ್ಕಾರು ಬಾರಿ ಸಂಸದರಾಗಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ವಯಸ್ಸಿನಲ್ಲಿಯೂ ಹಿರಿತನವಿರುವ ಇವರಿಗೆ ಸಚಿವ ಸ್ಥಾನ ದೊರೆಯುವ ಭರವಸೆಯಿತ್ತು.
ಅದೇ ರೀತಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರೂ ಎರಡು ಬಾರಿ ಕಾಂಗ್ರೆಸ್ ನಿಂದ ಎರಡು ಬಾರಿ ಜನತಾ ಪರಿವಾರದಿಂದ ಶಾಸಕರಾಗಿರುವ ಅನುಭವವಿದೆ. ವೆಂಕಟೇಶ ನಾಯಕ ಅವರ ನಂತರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ವಯಸ್ಸಿನಲ್ಲಿ ಹಿರಿಯರು. ಆದರೆ ಅವರಿಗೂ ಈಗಲೇ ಸಚಿವ ಸ್ಥಾನ ಸಿಗುವುದು ಕಷ್ಟ ಎಂಬ ಮಾತು ಕೇಳಿಬಂದಿದೆ.
ಪಕ್ಷದಲ್ಲಿನ ಘಟಾನುಘಟಿಗಳು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಮೇಲೆ ಒತ್ತಡ ತಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದು, ಜಿಲ್ಲೆಯ ನಾಯಕರಿಗೆ ಸಚಿವ ಸ್ಥಾನ ಆರಂಭದಲ್ಲಿಯೇ ದೊರೆಯುವುದು ಬಹುತೇಕ ಅನುಮಾನ ಎಂಬಂತಾಗಿದೆ.
ಆಶಾಭಾವವೂ ಕ್ಷೀಣ: ಹೈಕಮಾಂಡ್ ಮಟ್ಟಿದಲ್ಲಿ ಯಾವುದೇ ರೀತಿಯ ಪ್ರಭಾವ ಬೀರದೇ ಕ್ಷೇತ್ರದಲ್ಲಿ ಉಳಿದಿರುವ ಈ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ಆರಂಭದಲ್ಲಿಯೇ ದೊರೆಯುವ ಲಕ್ಷಣಗಳಿಲ್ಲ. ಅದರಲ್ಲೂ ಹೈಕಮಾಂಡ್ ಮೊದಲಿಗೆ ಕೇವಲ 18ರಿಂದ 20 ಸ್ಥಾನಗಳಿಗೆ ಸಂಪುಟ ರಚನೆ ಸೀಮಿತಗೊಳಿಸುವಂತೆ ಸೂಚಿಸಿರುವುದು ಅವಕಾಶವನ್ನು ಕಡಿಮೆಗೊಳಿಸಿದೆ.
ಪ್ರಸಕ್ತ ಸಂಪುಟ ರಚನೆಯ ಪ್ರಕ್ರಿಯೆಯಲ್ಲಿ ಹಿರಿತನ ಎಂಬುದು ಗಣನೆಗೆ ಬಂದರೂ ಜಿಲ್ಲೆಯ ಹಾಲಿ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುವಷ್ಟು ಪ್ರಭಾವಿಗಳಾಗಿಲ್ಲದಿರುವುದೂ ಸಚಿವ ಸ್ಥಾನ ಸದ್ಯಕ್ಕೆ ಕೈತಪ್ಪಲು ದಾರಿಯಾಗಲಿದೆ ಎಂಬ ಮಾತು ಕೇಳಿಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

