ಸ್ವಸಾಮರ್ಥ್ಯ ಅರಿತು ಮುನ್ನಡೆಯಿರಿ
ಕನ್ನಡಪ್ರಭ ವಾರ್ತೆ ರಾಯಚೂರು ಮೇ 16
ಶೈಕ್ಷಣಿಕ ಬದುಕಿನಲ್ಲಿ ವಿದ್ಯಾರ್ಥಿಗಳು ಪಾಲಕರ ಒತ್ತಡಕ್ಕೆ ಮಣಿದು ಕೋರ್ಸ್ಗಳ ಆಯ್ಕೆ ಮಾಡದೇ ಸ್ವ-ಸಾಮರ್ಥ್ಯ, ಬುದ್ಧಿಶಕ್ತಿ, ಕಲಿಯುವ ವೇಗವನ್ನರಿತು ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ಭವಿಷ್ಯ ಉಜ್ವಲಗೊಳಿಸಿಕೊಳ್ಳುವಂತೆ ಬೆಂಗಳೂರಿನ ಸಿಐಜಿಎಂಎ ಸಂಸ್ಥೆಯ ಮಾರ್ಗದರ್ಶಕ ಅಮೀನ್ ಮುದಸ್ಸಿರ್ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಇಲ್ಲಿನ ಎಜುಕೇಷನ್ ಫಾರ್ ಆಲ್(ಇಎಫ್ಎ) ಫೌಂಡೇಷನ್, ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಆಸಕ್ತಿಯಿರುವ ವಿಷಯ ಆಯ್ಕೆ ಮಾಡಿ: ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲ ವಿದ್ಯಾರ್ಥಿಗಳನ್ನು ಕಾಡುವ ಪ್ರಶ್ನೆಯಾಗಿದೆ. ಆದರೆ ಪಾಲಕರ ಇಲ್ಲವೇ ಗೆಳೆಯರ ಒತ್ತಡಕ್ಕೆ ಮಣಿದು ಆಸಕ್ತಿಯಿಲ್ಲದ ವಿಷಯಗಳನ್ನು ಆಯ್ದುಕೊಳ್ಳುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಬೌದ್ಧಿಕ ಶಕ್ತಿಗೆ ಅನುಗುಣವಾಗಿ ಮುಂದಿನ ವ್ಯಾಸಂಗದಲ್ಲಿ ವಿಷಯಗಳನ್ನು ಆಯ್ದುಕೊಳ್ಳುವುದು ಹೆಚ್ಚು ಸೂಕ್ತ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ, ಸ್ವಸಾಮರ್ಥ್ಯ ಗುರುತಿಸುವುದು ಹಾಗೂ ಆಯ್ಕೆಯ ವಿಚಾರದಲ್ಲಿ ಪಾಲಕರು ಸಹಾಯ ಮಾಡಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ನಿರ್ದಿಷ್ಟ ಕೋರ್ಸ್ ಆಯ್ದುಕೊಳ್ಳುವಂತೆ ಒತ್ತಡ ಹೇರದಿರಲು ಪಾಲಕರಿಗೆ ಅವರು ಮನವಿ ಮಾಡಿದರು.
ಮಕ್ಕಳ ಕಲಿಕಾಸಕ್ತಿಗೇ ಪ್ರೋತ್ಸಾಹಿಸಿ: ಪಾಲಕರು ತಮ್ಮ ಆಸೆ, ಆಕಾಂಕ್ಷೆಗಳನ್ನು ಮಕ್ಕಳಿಂದ ಈಡೇರಿಸಿಕೊಳ್ಳುವ ಪ್ರವೃತ್ತಿ ಬಿಟ್ಟು ಮಕ್ಕಳ ಕಲಿಕಾಸಕ್ತಿಗೆ ಅನುಗುಣವಾಗಿ ಅವರಿಗೆ ಪ್ರೋತ್ಸಾಹಿಸಿ ಬೆಂಬಲಿಸುವಂತೆ ಸಲಹೆ ನೀಡಿದ ಅವರು, ದೇಶದಲ್ಲಿ ಶೇ. 70ರಷ್ಟು ಎಂಜಿನಿಯರಿಂಗ್ ಕಲಿತಂಥ ಪದವೀಧರರಿಗೆ ಕೌಶಲ್ಯಾಭಿವೃದ್ಧಿ ಕೊರತೆಯಿಂದಾಗಿ ಸೂಕ್ತ ಉದ್ಯೋಗ ದೊರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೌಶಲ್ಯವುಳ್ಳವರಿಗೆ ಉದ್ಯೋಗ ಕಮ್ಮಿಯಿಲ್ಲ: ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮಾರ್ಪಾಟುಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಇಂದಿನ ದಿನಮಾನದಲ್ಲಿ ಪರಿಶ್ರಮ ವಹಿಸಿ ದುಡಿಯುವವರಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆಯಿದೆ. ಕೆಲಸದಲ್ಲಿ ನೈಪುಣ್ಯತೆ, ಚಾಣಾಕ್ಷತೆ ಜತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡವರಿಗೆ ಉದ್ಯೋಗ ದೊರೆಯುವುದು ಕಷ್ಟವೇನಲ್ಲ. ಆದರೆ ಅಂಥ ಕಲೆಯನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳುವುದು ತೀರಾ ಅವಶ್ಯ ಎಂದು ಹೇಳಿದರು.
ಮಕ್ಕಳಿಗೆ ಶಿಕ್ಷಣ ಒದಗಿಸುವುದರ ಹಿಂದೆ ಕೇವಲ ಹಣ ಗಳಿಕೆಯ ಉದ್ದೇಶವಿರಬಾರದು. ಜ್ಞಾನ ವೃದ್ಧಿಯಿಂದ ಮಾತ್ರ ವಿದ್ಯಾರ್ಥಿಗಳ ಬದುಕು ಹಸನಾಗಲು ಸಾಧ್ಯ. ಪಾಲಕರು ಹಣದಾಸೆಗೆ ಮಕ್ಕಳ ಭವಿಷ್ಯ ಹಾಳುಗೆಡವದೇ ಮಕ್ಕಳಲ್ಲಿನ ಆಸಕ್ತಿ ಅರಿತು ಅವರ ಜ್ಞಾನ ವೃದ್ಧಿಗೆ ಪೂರಕ ಪರಿಸರ ನಿರ್ಮಿಸುಸಂವೆತ ಅವರು ಸಲಹೆ ನೀಡಿದರು.
ಮಾಹಿತಿ ಪುಸ್ತಕ ಬಿಡುಗಡೆ: ಈ ವೇಳೆ ಅವರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರ ಮುಂದೇನು ಎಂಬ ವಿಷಯಗಳ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಡಾ. ರಜಾಕ್ ಉಸ್ತಾದ್, ಇಎಫ್ಎ ಫೌಂಡೇಷನ್ ಅಧ್ಯಕ್ಷ ಮೊಹ್ಮದ್ ಶಬ್ಬೀರ್, ಪ್ರೊ. ಅಮರೇಶ್ ಸೇರಿದಂತೆ ಅನೇಕರಿದ್ದರು. ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

