ಅಭಿಮಾನಿಗಳಿಗೆ ಮನಸೋತ ಮಳೆ ಹುಡುಗಿ
ರಾಯಚೂರು: ನಗರ ಕ್ಷೇತ್ರದ ಮತದಾರರು ತೋರಿದ ಅಭಿಮಾನಕ್ಕೆ ತಾವೆಂದೂ ಚಿರಋಣಿ ಎಂದಿರುವ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ನಾಯಕಿ, ನಟಿ ಪೂಜಾಗಾಂಧಿ ಅವರು, ಕ್ಷೇತ್ರದಲ್ಲಿ ತಮ್ಮ ನೇತೃತ್ವದ ಗಾಂಧಿ ಟ್ರಸ್ಟ್ನಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಚೆಗೆ ನಡೆದ ಚುನಾವಣೆಯಲ್ಲಿ ನಗರ ಕ್ಷೇತ್ರದ ಮತದಾರರು ತಮ್ಮನ್ನು ನಿರೀಕ್ಷಿತ ಮಟ್ಟದಲ್ಲಿ ಬೆಂಬಲಿಸದಿದ್ದರೂ ತಮಗೆ ಬೇಸರವಿಲ್ಲ. ತಮಗೆ ಪ್ರಚಾರಕ್ಕೆ ಕಡಿಮೆ ಕಾಲಾವಕಾಶ ದೊರೆತಿತ್ತು. ಕಡಿಮೆ ಅವಧಿಯಲ್ಲಿಯೇ ಪ್ರಚಾರ ಮಾಡಿದ್ದಾಗಿ ಹೇಳಿದರು.
ಚುನಾವಣೆ ವೇಳೆ ತಾವು ನೀಡಿದ ಭರವಸೆಯಂತೆ ಚುನಾವಣೆಯ ನಂತರವೂ ನಗರ ಕ್ಷೇತ್ರದಲ್ಲಿ ವಾಸವಾಗಿದ್ದು, ಇಲ್ಲಿನ ಜನರ ಸಮಸ್ಯೆಗಳ ಪರ ಹೋರಾಟ ನಡೆಸುವುದಾಗಿ ಹೇಳಿದ ಅವರು, ಇಲ್ಲಿನ ಬಡವರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅವರ ಏಳಿಗೆಗೆ ಪೂರಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಜನಜಾಗೃತಿ: ಗಾಂಧಿ ಟ್ರಸ್ಟ್ನಿಂದ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನರಲ್ಲಿ ಜಾಗೃತಿಯನ್ನುಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ನಗರದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಪ್ರತಿಭಾವಂತ ಕ್ರೀಡಾಳುಗಳಿಗೆ ಇಲ್ಲಿ ಅವಕಾಶಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಅವರ ಪ್ರತಿಭೆಗೆ ಗಾಂಧಿ ಟ್ರಸ್ಟ್ ವೇದಿಕೆ ಕಲ್ಪಿಸಲಿದೆ. ಅದೇ ರೀತಿ ಬಡ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುವಂತಾಗಲು ವಿವಿಧ ರೀತಿಯ ವೃತ್ತಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಹಣ ವ್ಯಯಿಸಿ ಸ್ಪರ್ಧಿಸುವುದಿಲ್ಲ: ನಗರ ಕ್ಷೇತ್ರದಲ್ಲಿ ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ಮತದಾರರ ಮನಗೆದ್ದು ಮುಂದಿನ ಚುನಾವಣೆಯಲ್ಲಿ ಸಹ ರಾಯಚೂರು ನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ ಪೂಜಾಗಾಂಧಿ ಅವರು, ತಾವು ಯಾವುದೇ ಹಣ ಬಲದಿಂದ ಈಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಮುಂದಿನ ದಿನಗಳಲ್ಲಿಯೂ ಎಂದಿಗೂ ಹಣ ವ್ಯಯಿಸಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಚೆಗಿನ ಚುನಾವಣೆಯಲ್ಲಿನ ಸೋಲು ತಮ್ಮಲ್ಲಿ ಮತ್ತಷ್ಟು ಹೋರಾಟದ ಸ್ಪೂರ್ತಿ ತುಂಬಿದೆ.
ಸೋಲಿನ ಪಾಠದಿಂದಲೇ ಗೆಲವಿನ ಸಂಭ್ರಮ ಕಾಣಲು ಸಾಧ್ಯ. ಸಾಮಾಜಿಕವಾಗಿ ತಮ್ಮ ಮೇಲೆ ಹೊಣೆಗಾರಿಕೆಯಿದೆ. ಅದರ ಅರಿವು ತಮಗಿದ್ದು, ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮೇ 21ರಿಂದಲೇ ಪ್ರಚಾರ ಕೈಗೊಳ್ಳುವುದಾಗಿ ಹೇಳಿ, ಚುನಾವಣೆಯ ನಂತರದಲ್ಲಿ ಪುನಾ ರಾಯಚೂರು ನಗರ ಕ್ಷೇತ್ರದಲ್ಲಿ ವಾಸವಾಗಿದ್ದು, ಇಲ್ಲಿನ ಬಡವರ ಏಳಿಗೆಗೆ ಶ್ರಮಿಸುವುದಾಗಿ ತಿಳಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಖಲೀಲ್ ಅಹ್ಮದ್, ಚೇತನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

