ಬಸವ ಜಯಂತಿ ರಾಷ್ಟ್ರೀಯ ಹಬ್ಬವಾಗಬೇಕು
ಕನ್ನಡಪ್ರಭ ವಾರ್ತೆ, ಮುದಗಲ್, ಮೆ 21
ವಿಶ್ವಗುರು ಬಸವಣ್ಣನವರ ಕರ್ಮಭೂಮಿಯಾದ ಕರ್ನಾಟಕದ ಬಸವ ಕಲ್ಯಾಣ ಹಾಗೂ ಕೇವಲ ರಾಜ್ಯದಲ್ಲಿ ಆಚರಿಸದೆ, ರಾಷ್ಟ್ರಮಟ್ಟದಲ್ಲಿ ಆಚರಿಸುವಂತಾಗಬೇಕು ಎಂದು ಕೊಪ್ಪಳ ಸಂಸದ ಶಿವರಾಮೇ ಗೌಡ ಅಭಿಪ್ರಾಯ ಪಟ್ಟರು.
ನಾಡಹಬ್ಬವಾಗಲಿ: ಪಟ್ಟಣ ಸಮೀಪದ ತಿಮ್ಮಾಪೂರ ಹತ್ತಿರ ಸಾಲಿಮಠದ ಮಹಾಂತಸ್ವಾಮಿ ಕನಸಿನಂತೆ ಬಸವಜಯಂತಿ ಶತಮಾನೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣಾಶ್ರಮಕ್ಕೆ ಸೋಮವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು. ವಿಧಾನಸೌಧ, ಲೋಕಸಭೆಗಳ ಮುಂದೆ ಬಸವಣ್ಣ ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಆದರೆ ಅವರ ತತ್ವವಿಚಾರಗಳ ಬಗ್ಗೆ ಅರಿವು ಇಲ್ಲದಾಗಿದೆ ಎಂದು ವಿಷಾದ ವ್ಯಕ್ತ ಪಡೆಸಿದರು. ಬಸವ ಜಯಂತಿಯನ್ನು ಕೇವಲ ಕರ್ನಾಟಕದಲ್ಲಿ ಆಚರಿಸುವುದಷ್ಟೇ ಅಲ್ಲದೆ ನಾಡಿನ ತುಂಬಾ ನಾಡಹಬ್ಬವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಂಸತ್ತಿನಲ್ಲಿ ಚರ್ಚಿಸಲಾಗಿದೆ. ಸದ್ಯದಲ್ಲಿಯೇ ಒಪ್ಪಿಗೆ ಸಿಗಲಿದ್ದು, ಈ ಕಾರ್ಯಕ್ಕೆ ಸಂಘಟನೆಗಳು ಮತ್ತು ಸ್ವಾಮೀಜಿಗಳು ಬೆಂಬಲ ವ್ಯಕ್ತಪಡೆಸಬೇಕಾಗಿದೆ ಎಂದರು.
ಕಲ್ಯಾಣಾಶ್ರಮಕ್ಕೆ ಸಹಾಯ: ಲಿಂಗಸ್ಗೂರು ತಾಲೂಕಿನ ತಿಮ್ಮಾಪುರದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮೀಣ ಶರಣ ಸಂಸ್ಕೃತಿಯ ವಿಶ್ವ ಶರಣ ಸಂಕುಲ ಕಲ್ಯಾಣಾಶ್ರಮ ಹೊಸ ಕ್ರಾಂತಿಗೆ ಸಾಕ್ಷಿಯಾಗಲಿದೆ. ಕಲ್ಯಾಣಾಶ್ರಮಕ್ಕೆ ತಮ್ಮಿಂದ ಸಹಕಾರ ನೀಡುವದಾಗಿ ತಿಳಿಸಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನಮಠದ ಶಿವಾನಂದ ಸ್ವಾಮಿ ಮಾತನಾಡಿ, ಜೀವನಕ್ಕೆ ಏಕೈಕ ತತ್ವವಾಗಿರುವ ಬಸವ ತತ್ವ ದಲಿತ, ಹಿಂದುಳಿದವರ ತತ್ವವಾಗಿದೆ ಎಂದರು.
ಕರ್ಮಭೂಮಿ: ಸರ್ಕಾರ ಸುಮ್ಮನೆ ಮಠಮಾನ್ಯಗಳಿಗೆ ಹಣ ನೀಡುವ ಬದಲು ಶಾಲೆ, ಗುಡಿಗಳ ನಿರ್ಮಾಣ, ರಸ್ತೆ, ಕುಡಿವ ನೀರು ಸೇರಿ ಮೂಲ ಸೌಕರ್ಯಗಳಿಗೆ ಹಣ ಖರ್ಚು ಮಾಡಲಿ. ಅಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಯಾವುದೋ ಉತ್ಸವ ಮಾಡುವ ಸರ್ಕಾರ 12ನೇ ಶತಮಾನದಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿದ ಬಸವಣ್ಣನವರ ಕರ್ಮಭೂಮಿಯಾದ್ದ ಬಸವಕಲ್ಯಾಣ ಉತ್ಸವ ಮಾಡಲಿ ಎಂದರು. ಕಾರ್ಯಕ್ರಮದಲ್ಲಿ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ಅಥಣಿಯ ಪ್ರಭುಚನ್ನಬಸವ ಸ್ವಾಮಿ, ಸಾಲಿಮಠದ ಮಹಂತ ಸ್ವಾಮಿ ಮುದಗಲ್ ಸೇರಿದಂತೆ ಮತ್ತಿತರರು ಮಾತನಾಡಿದರು.
ಸಾನ್ನಿಧ್ಯವನ್ನ ಇಳಕಲ್ಲಿನ ಡಾ. ಮಹಾಂತ ಶಿವಯೋಗಿ, ಅಧ್ಯಕ್ಷತೆಯನ್ನ ಗುರು ಮಹಾಂತ ಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಶಿರೂರಿನ ಡಾ. ಬಸವಲಿಂಗ ಸ್ವಾಮಿ, ಮುಖಂಡರಾದ ರಾಜಶೇಖರ ಪಾಟೀಲ್, ವಿಶ್ವನಾಥ ಪಾಟೀಲ್, ಸುರೇಂದ್ರ ಗೌಡ, ಮಹಾಂತೇಶ ಪಾಟೀಲ್, ಮಲ್ಲನಗೌಡ ಕಾನಿಹಾಳ, ಕನ್ನಾಳ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಬಸಪ್ಪ ಮರೋಳ, ಗುರುಮೂರ್ತಿ ಸ್ವಾಮಿ, ರೈತ ಮುಖಂಡ ಅಮರಣ್ಣ ಗುಡಿಹಾಳ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಗಗುರು ಭಾಸ್ಕರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

