ರಾಯಚೂರು

ಭೂ ರಹಿತರಿಗೆ ನಾಡಗೌಡರ 'ಆಸ್ತಿ' ಹಂಚಲು ಆಗ್ರಹಿಸಿ ಧರಣಿ

Published On :

ಕನ್ನಡಪ್ರಭ ವಾರ್ತೆ   ಸಿಂಧನೂರು   ಮೇ 22
ಸಿಂಧನೂರು ತಾಲೂಕಿನ ಮಾಜಿ ಶಾಸಕರಾದ ಜವಳಗೇರ ನಾಡಗೌಡರ ಅವಿಭಕ್ತ ಕುಟುಂಬಕ್ಕೆ ಸೇರಿದ 3600 ಎಕರೆಗೂ ಹೆಚ್ಚುವರಿ ಭೂ ಪ್ರಕರಣದಲ್ಲಿ ಭಾರಿ ಮೋಸ ನಡೆದಿದೆ. ಸರ್ಕಾರಕ್ಕೆ ಬೇನಾಮಿ ಹೆಸರಿನಲ್ಲಿ ಆಸ್ತಿ ವಿವರದ ಘೋಷಣೆ ಪತ್ರ ಸಲ್ಲಿಸಿ ಸಾವಿರಾರು ಎಕರೆ ಭೂಮಿ ಉಳಿಸಿಕೊಂಡಿದ್ದಾರೆ. 'ಬಿ' ಗ್ರೇಡಿಗೆ ಸೇರಿದ ಭೂಮಿ ಡಿ ಗ್ರೇಡಿಗೆ ಸೇರಿಸಿ ಮತ್ತು 'ಡಿ' ಗ್ರೇಡಿಗೆ ಸೇರಿದ ಭೂಮಿಯನ್ನು 'ಸಿ' ಗ್ರೇಡಿಗೆ ಸೇರಿಸಿ ಶೇ.90ರಷ್ಟು  ಭೂಮಿ ಉಳಿಸಿಕೊಂಡಿದ್ದಾರೆ. ಕೂಡಲೇ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚಬೇಕೆಂದು ಒತ್ತಾಯಿಸಿ ಬುಧವಾರ ಕೆಆರ್‌ಎಸ್, ಟಿಯುಸಿಐ, ಆರ್‌ವೈಎಫ್‌ಐ ಸಂಘಟನೆಗಳು ಅನಿರ್ಧಿಷ್ಟ ಧರಣಿಯನ್ನು ಆರಂಭಿಸಿದರು.
ಸರ್ಕಾರಕ್ಕೆ ಪ್ರಮಾಣ ಪತ್ರ: ಧರಣಿಕಾರರನ್ನುದ್ದೇಶಿಸಿ ತಾಲೂಕು ಕೆಆರ್‌ಎಸ್ ಅಧ್ಯಕ್ಷ ರಮೇಶ ಪಾಟೀಲ್ ಮಾತನಾಡಿ, ಜವಳಗೇರಿ ನಾಡಗೌಡರು ಸಂಪೂರ್ಣ ನೀರಾವರಿ ಅನುಕೂಲದಿಂದ ಬತ್ತ ಬೆಳೆಯುವ ಭೂಮಿ, ಅರೆ ನೀರಾವರಿಗೆ ಒಳಪಡುತ್ತದೆಂದು ಮತ್ತು ಶೇ. 70ರಷ್ಟು ಭೂಮಿ ನೀರಾವರಿಗೆ ಒಳಪಡುವುದಿಲ್ಲವೆಂದು ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನಾಡಗೌಡರ ಕುಟುಂಬ 3600 ಎಕರೆ ಹೆಚ್ಚುವರಿ ಭೂಮಿ ಹೊಂದಿದ ಬಗ್ಗೆ ಸರ್ಕಾರಕ್ಕೆ ಘೋಷಣೆ ಮಾಡುವ ಪೂರ್ವದಲ್ಲಿ ಮಾರಾಟ ಮಾಡಲಾಗಿದೆ ಎಂದು ಕೆಲವರು ಕೋರ್ಟ್‌ನಲ್ಲಿ ದಾವೆ ಹೂಡುವಂತೆ ಯೋಜಿತ ಕುತಂತ್ರ ನಡೆಸಲಾಗಿದೆ. ಇದಲ್ಲದೆ ಬಸಾಪೂರ, ಮಂಗನಾಳ(ಡಿ) ಗ್ರಾಮದ ಸರ್ವೆ ನಂ.41,42,43 ಇತರೆ ಸರ್ವೆ ನಂಬರುಗಳ 106 ಎಕರೆ ಭೂಮಿ ರತ್ನಮ್ಮ ಗಂ. ಸಂಗಮೇಶ್ವರಾವ್ (ನಾಡಗೌಡರ ಕುಟುಂಬ) ಇವರಿಂದ ಖರೀದಿಸಲಾಗಿದೆ ಎಂದು ವಿಠಲರಾವ್ ಮತ್ತು ಇತನ ಸಹೋದರ ಸಂಬಂಧಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಕೋರ್ಟ್‌ನಲ್ಲಿ ಡಿಕ್ರಿ ಪಡೆದು ಅನಧಿಕೃತವಾಗಿ ಸಾಗುವಳಿ ಮಾಡುತಿದ್ದ ಭೂಮಿಯನ್ನು ಅಧಿಕೃತಗೊಳಿಸಿಕೊಂಡರು ಎಂದು ಟೀಕಿಸಿದರು.  ಹೆಚ್ಚುವರಿ ಭೂಮಿ: ಆರ್‌ವೈಎಫ್‌ಐ ತಾಲೂಕಾಧ್ಯಕ್ಷ ನಾಗರಾಜ ಪೂಜಾರ ಮಾತನಾಡಿ ಇದಲ್ಲದೆ ಜವಳಗೇರಾ ಗ್ರಾಮಕ್ಕೆ ಹೊಂದಿಕೊಂಡ ಸರ್ಕಾರಿ ಭೂಮಿಯಲ್ಲಿ, ನಿವೇಶನಗಳನ್ನು ಮಾಡಿ ಮಾರಾಟ ಮಾಡಿದಲ್ಲದೆ, ಪೆಟ್ರೋಲ್ ಬಂಕ್ ನಿರ್ಮಿಸಿದ್ದಾರೆ. ನಾಡಗೌಡರ ಕುಟುಂಬದ ಭೂಮಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿರುವ ಸರ್ಕಾರಿ ಹೆಚ್ಚುವರಿ ಭೂಮಿಗೆ ಸಂಬಂಧಿಸಿದ ನೂರಾರು ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಯಚೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಿಂಧನೂರು ತಹಸೀಲ್ದಾರ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಡಗೌಡರ ಜೊತೆಗೆ ಆಂತರಿಕ ಸಂಬಂಧ ಹೊಂದಿದ್ದರಿಂದ ತಾವು ಕೊಟ್ಟ ಮನವಿ ಪತ್ರಗಳನ್ನು ನಾಪತ್ತೆ ಮಾಡುತ್ತಾರೆ. 2006ರಲ್ಲಿ ಸರ್ವೆ ಮಾಡಿದ ದಾಖಲಾತಿಗಳನ್ನು ನಾಪತ್ತೆ ಮಾಡಿದ್ದರಿಂದ, ಸರ್ವೆ ಅಧಿಕಾರಿಗಳಾದ ಶ್ರೀನಿವಾಸ ಇತರರ ಮೇಲೆ 6 ತಿಂಗಳ ಹಿಂದೆ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗಿತ್ತು. ಆದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಜವಳಗೇರಾ ಸೆಂಟ್ರಲ್ ಸ್ಟೇಟ್ ಫಾರ್ಮ್‌ಗೆ ಸೇರಿದ 3000 ಸರ್ಕಾರಿ ಭೂಮಿಯನ್ನು ಮೂಲ ರೈತರಿಗೆ ವಾಪಾಸ್ ಮರಳಿಸಬೇಕು.
ಹಂಚಿಕೆಗೆ ಒತ್ತಾಯ: ಜವಳಗೇರಾ, ಬಸಾಪೂರ(ಈಜೆ), ಮಂಗನಾಳ(ಡಿ), ನಿಡಿಗೋಳ, ತಿಡಿಗೋಳ, ಯದ್ದಲದೊಡ್ಡಿ, ತಿಮ್ಮಾಪುರ, ಕುನ್ನಟಗಿ, ಬೂದಿಹಾಳ, ಕಗ್ಗಲ(ಡಿ) ಬೆಳಗುರ್ಕಿ, ಎಲೆಕೂಡ್ಲಗಿ, ಬೊಮ್ಮನಾಳ, ಪಗಡದಿನ್ನಿ, ಸುಲ್ತಾನಪೂರ, ಉಪ್ಪಾಳ, ಜಾಲಿಹಾಳ(ಇನಾಮು ಭೂಮಿ) ಕ್ಯಾಂಪ್, ಕೊಂತನೂರು(ಡಿ), ಉಪ್ಪಲದೊಡ್ಡಿ(ಡಿ), ಅಮರಾಪುರ, ವೆಂಕಟೇಶ್ವರ ಕ್ಯಾಂಪ್, ಇತರ ಗ್ರಾಮಗಳಲ್ಲಿರುವ ಭೂಮಿ ಬಡವರಿಗೆ ಹಂಚಿಕೆ ಮಾಡಬೇಕು. ನಗರದ ದೋಬಿಗಲ್ಲಿ, ಜನತಾ ಕಾಲೋನಿ, ಸುಕಾಲಪೇಟೆ ಗುಡಿಸಲಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕು ಪತ್ರ ಹಂಚಬೇಕು ಎಂದು ಚಳುವಳಿಕಾರರು ಒತ್ತಾಯಿಸಿದರು. ಭೇಟಿ: ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತರಾದ ಟಿ. ಯೋಗೀಶ್ ಮತ್ತು ನಗರ ಠಾಣೆ ಪಿಎಸ್‌ಐ ನಿಂಗಪ್ಪ ಧರಣಿ ನಿರತರೊಂದಿಗೆ ಚರ್ಚಿಸಲು ಆಗಮಿಸಿದಾಗ ಯೋಗೀಶ್ ಅವರಿಗೆ ಈ ಹಿಂದೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಚಳುವಳಿಕಾರರು ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ನಾಗರಾಜ್ ಮೇದಾರ, ಬಸವರಾಜ ಹಿರೇಮನಿ, ಮರಿಯಮ್ಮ ಬಸಾಪುರ, ಬಾಗಮ್ಮ, ರಾಜಾಸಾಬ ತಿಡಿಗೋಳ, ಪರಶುರಾಮ್, ಶೈನಜಾ ಬೆಗಂ, ಬದ್ರುನ ಬೇಗಂ, ರಾಮ್ ಬಾಬು, ಚಾಂದ ಪಾಶಾ ಜನತಾ ಕಾಲೋನಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.