ರಾಯಚೂರು

ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ವಿವಿ ಆಶಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 24
ಕಳೆದ ಎರಡು ವರ್ಷಗಳ ಭೀಕರ ಬರ ಕೊನೆಯಾಗಲೆಂಬ ಆಶಯ. ಉತ್ತಮ ಮುಂಗಾರು ಸುರಿದು ರೈತರ ಬದುಕಿನಲ್ಲಿ ಮತ್ತೆ ಹಸಿರು ಚಿಗುರಲಿ ಎಂಬ ನಿರೀಕ್ಷೆಯೊಂದಿಗೆ ಇಲ್ಲಿನ ಕೃಷಿ ವಿವಿ ಮೂಲ ಬಿತ್ತನೆ ಬೀಜಗಳ ದಿನೋತ್ಸವಕ್ಕೆ ಸಜ್ಜಾಗಿದೆ. ರಿಯಾಯಿತಿ ದರದಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯೇ ಬೀಜ ದಿನೋತ್ಸವದ ಮೂಲ ಉದ್ದೇಶ.
ರಾಯಚೂರು ಕೃಷಿ ವಿವಿ ರಾಜ್ಯದ ಹೈ.ಕ. ಭಾಗದ ರೈತರ ಆಶೋತ್ತರಗಳಿಗೆ ಸ್ಪಂದಿಸುತ್ತಲೇ ಸಾಗಿದೆ. ಅಂತೆಯೇ ಪ್ರತಿ ವರ್ಷ ಮೇ 25 ಹಾಗೂ ಸೆ.25ರಂದು ರೈತರಿಗೆ ಮೂಲಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಬೀಜ ದಿನೋತ್ಸವ ಕಾರ್ಯಕ್ರಮ ಆಯೋಜಿಸುತ್ತದೆ. ಅದರಂತೆ ನಗರದ ಕೃಷಿ ವಿವಿಯಲ್ಲಿ ಮೇ 25ರಂದು ಮುಂಗಾರು ಬೀಜ ದಿನೋತ್ಸವ ಆಯೋಜಿಸಲಾಗಿದೆ.
ಎರಡು ಹಂತದಲ್ಲಿ: ರಾಯಚೂರು ಕೃಷಿ ವಿವಿಯು ಕಳಪೆ ಬಿತ್ತನೆ ಬೀಜಗಳನ್ನು ಬಳಸಿ ಕೃಷಿಯಲ್ಲಿ ಹಾನಿ ಅನುಭವಿಸುವ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯ ಕಾರ್ಯದಲ್ಲಿ ಯಾವತ್ತೂ ಮುಂದಿದೆ. ಕೃಷಿ ವಿವಿ ಎರಡು ಹಂತದಲ್ಲಿ ಬಿತ್ತನೆ ಬೀಜೋತ್ಪಾದನೆಯಲ್ಲಿ ತೊಡಗಿದೆ.
ನೇರ ಬಿತ್ತನೆ ಬೀಜೋತ್ಪಾದನೆಯ ಮೂಲಕ ವಿವಿ 2012-13ರಲ್ಲಿ 21927 ಕ್ವಿಂಟಲ್ ಬಿತ್ತನೆ ಬೀಜ ಉತ್ಪಾದಿಸಿದೆ. ಪ್ರಸಕ್ತ ವರ್ಷಕ್ಕೆ ಈ ಗುರಿಯು 40ಸಾವಿರ ಕ್ವಿಂಟಲ್ ಆಗಿದೆ. ಅದೇ ರೀತಿ ಬೀಜ ಗ್ರಾಮ ಯೋಜನೆ ಅಡಿ ಆಯ್ದ 100ಗ್ರಾಮಗಳ ರೈತರಿಗೆ ಮೂಲಬಿತ್ತನೆ ಬೀಜಗಳನ್ನು ಒದಗಿಸಿ ಅವುಗಳನ್ನು ಬಳಸಿ ಬೆಳೆ ಬೆಳೆದ ರೈತರಿಂದ ಮೂಲಬಿತ್ತನೆ ಬೀಜ ಮರಳಿ ಪಡೆಯುವ ಇಲ್ಲವೇ ಖರೀದಿಸುವ ಕಾರ್ಯ ಕೃಷಿ ವಿವಿ ಮಾಡುತ್ತಿದೆ. ಈ ಮೂಲಕ ವಿವಿ 2012-13ರಲ್ಲಿ 25600 ಕ್ವಿಂಟಲ್ ಬಿತ್ತನೆ ಬೀಜ ಸಂಗ್ರಹಿಸಿದೆ. 2013-14ಕ್ಕೆ ಬೀಜ ಗ್ರಾಮಗಳಿಂದ 30 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಗುರಿಯಿರಿಸಿಕೊಳ್ಳಲಾಗಿದೆ.
ಬೀಜ ಗ್ರಾಮ ಯೋಜನೆ ಅಡಿ ಶೇಂಗಾ, ಬತ್ತ, ತೊಗರಿ, ಸೋಯಾ ಆವರೆ, ಕಡಲೆ ಬೆಳೆಗಳ ಬಿತ್ತನೆ ಬೀಜ ಒದಗಿಸಲಾಗುತ್ತಿದೆ. 2009-10ರಲ್ಲಿ 4372ರಷ್ಟಿದ್ದ ಬೀಜ ಗ್ರಾಮ ಯೋಜನೆಯಲ್ಲಿ ಪಾಲ್ಗೊಂಡ ರೈತರ ಸಂಖ್ಯೆಯು ಈಗ 18379ಕ್ಕೆ ಏರಿಕೆ ಕಂಡಿದೆ.
ಗುಣಮಟ್ಟದ ಬಿತ್ತನೆ ಬೀಜ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜವು ರಿಯಾಯಿತಿ ದರದಲ್ಲಿ ರೈತರಿಗೆ ಲಭ್ಯವಾಗಬೇಕು. ಆ ಮೂಲಕ ರೈತರು ಕೃಷಿಯಲ್ಲಿ ಲಾಭ ಕಾಣಬೇಕೆಂಬ ಆಶಯದೊಂದಿಗೆ ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕೃಷಿ ವಿವಿ ಆರಂಭಕ್ಕೂ ಮುನ್ನ 10ಕ್ವಿಂಟಲ್ ಸಾಮರ್ಥ್ಯದ 1 ಬೀಜ ಸಂಸ್ಕರಣ ಘಟಕ, 5 ಸಾವಿರ ಕ್ವಿಂಟಲ್ ಸಾಮರ್ಥ್ಯದ 1 ಬೀಜ ಉಗ್ರಾಣ ಇಲ್ಲಿತ್ತು.
ಆದರೆ 2009-10ರಲ್ಲಿ ಕೃಷಿ ವಿವಿ ಆರಂಭವಾದ ನಂತರ ಇದುವರೆಗೆ ಒಟ್ಟು ಪ್ರತಿ ಗಂಟೆಗೆ 180 ಕ್ವಿಂಟಲ್ ಸಾಮರ್ಥ್ಯದ 9 ಬೀಜ ಸಂಸ್ಕರಣ ಘಟಕಗಳಿವೆ. ತಲಾ 50ಸಾವಿರ ಕ್ವಿಂಟಲ್ ಸಾಮರ್ಥ್ಯದ ಒಟ್ಟು 14 ಬೀಜ ಉಗ್ರಾಣಗಳಿದ್ದು ಬೀಜ ಸಂಗ್ರಹಣೆಗೆ ಅನುಕೂಲವಾಗಿದೆ.
ಹೀಗೆ ಒಟ್ಟಾರೆಯಾಗಿ ರಾಯಚೂರು ಕೃಷಿ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ಮುಂಗಾರು ಹಂಗಾಮಿನ ಸಿದ್ಧತೆಯಲ್ಲಿ ರೈತರಿಗೆ ನೆರವಾಗಲು ಮುಂಗಾರು ಬೀಜ ದಿನೋತ್ಸವವನ್ನು ಮೇ 25ರಂದು ಆಯೋಜಿಸಿದೆ. ಅದೇ ವೇಳೆ ರೈತರಿಗೆ ಕೃಷಿ ವಿಜ್ಞಾನಿಗಳು ತಳಿಗಳು, ಬೇಸಾಯ ಕ್ರಮಗಳು ಸೇರಿದಂತೆ ವಿವಿಧ ಕೃಷಿ ಸಂಬಂಧಿ ಮಾಹಿತಿ, ಚರ್ಚೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.