ಗ್ರಾಮೀಣ ಭಾಗದಲ್ಲಿ ಕುಡಿವ ನೀರು ಒದಗಿಸಿ
ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಕೂಡಲೇ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಶಾಸಕ ವೆಂಕಟೇಶ ನಾಯಕ ಸೂಚಿಸಿದರು.
ಪಟ್ಟಣದ ತಾಪಂ ಆವರಣದಲ್ಲಿನ ಶಾಸಕರ ಕಚೇರಿಗೆ ಪೂಜೆ ಸಲ್ಲಿಸಿ ಅಧಿಕೃತವಾಗಿ ಆರಂಭಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಳ್ಳಿಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಿದೆ. ಕಳೆದ 2 ವರ್ಷದಿಂದ ಸಮರ್ಪಕವಾಗಿ ಮಳೆ ಇಲ್ಲದೆ ಕೆರೆಗಳು ಕೂಡ ಬತ್ತಿವೆ. ಆದ್ದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿ, ಕಿರು ನೀರು ಸರಬರಾಜು ಯೋಜನೆಗಳಿಗೆ ಚಾಲನೆ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
ಕಾಮಗಾರಿ ನಡೆದಿಲ್ಲ: ಕುಡಿಯುವ ನೀರಿನ ಅವಶ್ಯಕತೆಗೆ ಅನುಗುಣವಾಗಿ ಟ್ಯಾಂಕರ್ ಮೂಲಕ ಜನರಿಗೆ ನೀರೊದಗಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂಥ ಆಡಳಿತ ನಡೆಸುವುದಾಗಿ ತಾವು ಭರವಸೆ ನೀಡಿದ್ದು; ಅದರಂತೆಯೇ ಈಗಾಗಲೇ ಅಧಿಕಾರಿಗಳಿಗೆ ತಾಲೂಕಿನಲ್ಲಿ ಮಟಕಾ, ಮದ್ಯದ ಅಕ್ರಮ ಮಾರಾಟ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗಿ ತಿಳಿಸಿದರು.
ಪಟ್ಟಣದಲ್ಲಿ ರಸ್ತೆ ಅಗಲೀಕರಣವಾಗಿದ್ದು, ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ರಸ್ತೆ ಬದಿಯ ಚರಂಡಿ ನಿರ್ಮಾಣ ಇಲ್ಲದೆ ಜನರು ತೊಂದರೆ ಎದುರಿಸುವಂತಾಗಿದೆ. ಈ ಕಾಮಗಾರಿ ಆರಂಭಕ್ಕೆ ಶೀಘ್ರದಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿಗಾಗಿ 5 ಕೋಟಿ ವಿಶೇಷ ಅನುದಾನ ದೊರೆತಿದ್ದರೂ ಕಾಮಗಾರಿಗಳು ಮಾತ್ರ ಸಮರ್ಪಕವಾಗಿ ನಡೆದಿಲ್ಲ ಎಂದ ಅವರು, ವಿಶೇಷ ಪ್ಯಾಕೇಜಿನ ಹಣದ ವೆಚ್ಚದ ವಿವರ ಪಡೆಯುವುದಾಗಿ ಹೇಳಿದರು.
ಸಮಸ್ಯೆಗೆ ಸ್ಪಂದಿಸಲಿ: ಜೂ.6ರ ನಂತರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುತ್ತದೆ. ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕ ಮತ್ತು ಒಳ್ಳೆಯ ಅಧಿಕಾರಿಗಳನ್ನು ತಾಲೂಕು ಹೊಂದುವುದು ಅವಶ್ಯ ಎಂದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಜಿಪಂ ಸದಸ್ಯರಾದ ಶಿವಣ್ಣ ತಾತಾ ಮುಂಡರಗಿ, ಎ. ಮಲ್ಲಿಕಾರ್ಜುನ ಪಾಟೀಲ್, ಬುಡ್ಡನಗೌಡ ಜಾಗಟಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ಪೊಲೀಸ್ ಪಾಟೀಲ್, ಬಸಯ್ಯ ಶಾಖೆ, ಯಕ್ಬಾಲಸಾಬ ಹೌದುಡಿ, ತಾಪಂ ಸದಸ್ಯ ಸತ್ಯನಾರಾಯಣ ನಾಯಕ, ಶೇಖ್ ಮುನ್ನಾಭಾಯಿ, ಹಿಂದುಳಿದ ಘಟಕದ ಅಧ್ಯಕ್ಷ ನಾಗಪ್ಪ ಗಿರಿಣಿ, ರಾಜಾ ಚಂದ್ರಹಾಸ ನಾಯಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಅಕ್ಕಮಹಾದೇವಿ ಆರ್.ಪಾಟೀಲ್, ಗುರು ವಿಶ್ವಕರ್ಮ, ಕರೆಮ್ಮ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

