ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಗಿಲ್ಲ ಕಿಮ್ಮತ್ತು
ಕನ್ನಡಪ್ರಭ ವಾರ್ತೆ, ರಾಯಚೂರು. ಮೇ 27
ನಗರದ ಸೇಂಟ್ ಮೇರೀಸ್ ಕಾನ್ವೆಂಟ್ ಸ್ಕೂಲ್ನ ಅನುದಾನ ಹಾಗೂ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಾನ್ವೆಂಟ್ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ಜಾಣರಾಗುತ್ತಾರೆಂಬ ನಂಬಿಕೆಯಿಂದ ಪೋಷಕರು ತಮ್ಮ ಮಕ್ಕಳಿಗೆ ಕಾನ್ವೆಂಟ್ ಶಾಲೆಯಲ್ಲಿ ಪ್ರವೇಶ ಕೊಡಿಸಲು ಮುಗಿಬೀಳುತ್ತಾರೆ. ಸರ್ಕಾರದಿಂದ ಪೂರ್ಣವಾಗಿ ಅನುದಾನ ಪಡೆದು ನಡೆಸಲಾಗುತ್ತಿರುವ ಸೇಂಟ್ ಮೇರಿಸ್ ಸ್ಕೂಲ್ನಲ್ಲಿ ಕಾನೂನು ಉಲ್ಲಂಘಿಸಿ ನಾಗರಿಕರಿಂದ ರಹಸ್ಯವಾಗಿ ಮನ ಬಂದಂತೆ ದೇಣಿಗೆ(ಡೊನೇಷನ್) ಪಡೆಯಲಾಗುತ್ತದೆ. ಇನ್ನುಳಿದ ಶಾಲೆಗಳೂ ಇದಕ್ಕೆ ಹೊರತಾಗಿಲ್ಲವೆಂದು ದೇಣಿಗೆ ನೀಡಲಾಗದ ಅಶಕ್ತರು ಮತ್ತು ತಡವಾಗಿ ಪ್ರವೇಶ ಹೊಂದುವವರು ಸಂಘಟನೆಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಕಟ್ಟಿ ಕುಳಿತ ಅಧಿಕಾರಿಗಳು: ಈ ಬಗ್ಗೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಕೂಡ ಯಾವುದೇ ಕ್ರಮ ಜರುಗಿಸದೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ. ಶಿಕ್ಷಣ ಇಲಾಖೆ ರಹಸ್ಯ ಕಾರ್ಯಚರಣೆ ನಡೆಸಿ ಡೊನೇಷನ್ ಕೊಡುವ ಮತ್ತು ತೆಗೆದುಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡರೆ ಡೊನೇಷನ್ ಹಾವಳಿ ತಪ್ಪಿಸಬಹುದಾಗಿದೆ. ಇಂತಹ ಪರಿಸ್ಥಿತಿಯ ಮಧ್ಯೆ 2009ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2012- 13ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಯಾಗಿದೆ.
ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಆದರೆ ಸೇಂಟ್ ಮೇರೀಸ್ ಕಾನ್ವೆಂಟ್ ಸ್ಕೂಲ್ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಪ್ರಸಕ್ತ ವರ್ಷ ಅನಾನುಕೂಲ ಪರಿಸ್ಥಿತಿಯ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಒಬ್ಬ ಮಗುವಿಗೂ ಪ್ರವೇಶ ನೀಡಲಾರದೆ ಸರ್ಕಾರದ ಆದೇಶ ಉಲ್ಲಂಘಿಸುತ್ತಿರುವುದು ಖಂಡನೀಯ ಕ್ರಮವಾಗಿದೆ. ಕೂಡಲೇ ಶಾಲೆಗೆ ಸರ್ಕಾರದ ಅನುದಾನ ಮತ್ತು ಪರವಾನಗಿ ರದ್ದುಪಡಿಸಬೇಕು. ಇಲ್ಲದಿದ್ದರೆ ಕರವೇ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಸಿ.ಕೆ. ಜೈನ್, ತಾಲೂಕು ಅಧ್ಯಕ್ಷ ಖಲೀಲ್ ಪಾಶಾ, ನಗರಾಧ್ಯಕ್ಷ ಮಾನಸಿಂಗ್ ಠಾಕೂರ್, ಖಜಾಂಚಿ ಕೆ.ಕಿಶನ್ರಾವ್, ಪ್ರ.ಕಾರ್ಯದರ್ಶಿ ಮುಮ್ತಾಜುದ್ದಿನ್, ನಾಗರಾಜ ಬಿಚ್ಚಾಲಿ, ವೀರೇಂದ್ರಗೌಳಿ, ಅರಾಫತ್, ಬಂದೇನವಾಜ್, ನಿಜಾಮ್, ಸತ್ಯ, ಅಜೀಜ್, ವೀರೇಶ, ಹಸನ್, ರಿಯಾಜ್, ಜಾವೇದ್, ಸುಲ್ತಾನ್, ಶಾಲಂ ಸೇರಿದಂತೆ ಇದ್ದರು.
ಶಾಲೆಗೆ ಮಕ್ಕಳನ್ನು ಕಳಿಸಲು ಮನವಿ
ರಾಯಚೂರು: ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು 2013- 14ನೇ ಸಾಲಿಗೆ ಮೇ 31ರಿಂದ ಪುನಾರಂಭಗೊಳ್ಳಲಿವೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿನ ಎಲ್ಲ ಪಾಲಕರು, ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಅದೇ ದಿನ ಶಾಲೆಗೆ ಕಳುಹಿಸಲು ಡಿಡಿಪಿಐ ಬಿ.ಎಸ್. ಪರಮೇಶ್ ಮನವಿ ಮಾಡಿದ್ದಾರೆ.
ಮದ್ಯ ಮಾರಾಟ ನಿಷೇಧ
ರಾಯಚೂರು: ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ಮೇ 30 ಹಾಗೂ 31ರಂದು ನಡೆಯಲಿದ್ದು, ಜಾತ್ರೆ ಸುಗಮ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಹೊರಗಿನಿಂದ ತಂದು ಮಾರಾಟ ಮಾಡುವಂತಿಲ್ಲ. ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

