ಕೃಷಿ ಕಾರ್ಯಕ್ಕೆ ರೈತರು ಸಜ್ಜು
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 30
ಕಳೆದ ಎರಡು ವರ್ಷಗಳ ಭೀಕರ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರು ಮತ್ತೆ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗೆ ತೊಡಗಿದ್ದಾರೆ. ಮುಂಗಾರು ಹಂಗಾಮಿಗೆ ಜಮೀನು ಹದಗೊಳಿಸುವ ಕಾರ್ಯದಲ್ಲಿದ್ದಾರೆ. ಅದೇ ವೇಳೆ ಕಳೆದ ಎರಡು ದಿನ ಜಿಲ್ಲೆಯಲ್ಲಿ ಸುರಿದ ಮಳೆ ರೈತರಲ್ಲಿ ಹರ್ಷ ತಂದಿದೆ. ಕೃಷಿ ಇಲಾಖೆಯೂ ಸಹ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನಿರಿಸಲು ಮುಂದಾಗಿದೆ.
ಮಳೆ ರೈತರಲ್ಲಿ ನಿರೀಕ್ಷೆ: ಜಿಲ್ಲೆಯ ರೈತರು ಕಳೆದ ಎರಡು ವರ್ಷಗಳ ಕಾಲ ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದ ಕಂಗೆಟ್ಟಿದ್ದಾರೆ. ಕೃಷಿಯಲ್ಲಿ ಆರ್ಥಿಕ ನಷ್ಟ ಅನುಭವಿಸಿ ಅನೇಕರು ಮಹಾನಗರಗಳತ್ತ ಬದುಕು ಕಂಡುಕೊಳ್ಳಲು ಗುಳೆ ಹೋಗಿದ್ದಾರೆ. ಆದರೆ ಪ್ರಸಕ್ತ ವರ್ಷ ಬೇಸಿಗೆಯ ಅಂತ್ಯಕ್ಕೆ ಮುಂಗಾರು ಪ್ರವೇಶಕ್ಕೂ ಮುನ್ನವೇ ಕಳೆದ ಎರಡು ದಿನ ಸುರಿದ ಹದವಾದ ಮಳೆ ರೈತರಲ್ಲಿ ನಿರೀಕ್ಷೆ ಗರಿಗೆದರಿಸಿದೆ.
ಹೆಕ್ಟೇರ್ನಲ್ಲಿ ಬೆಳೆಯುವ ಗುರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 2,99,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ 1,59,500 ಹೆಕ್ಟೇರ್ ಒಣಬೇಸಾಯ ಪ್ರದೇಶ ಹಾಗೂ 1.40 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿದೆ. ಮುಂಗಾರು ಹಂಗಾಮಿಗೆ 26100 ಹೆಕ್ಟೇರ್ ಪ್ರದೇಶದಲ್ಲಿ ಬತ್ತ, ಸಜ್ಜೆ- 57300 ಹೆಕ್ಟೇರ್, ತೊಗರಿ- 47250 ಹೆಕ್ಟೇರ್, ಹತ್ತಿ- 45900 ಹೆಕ್ಟೇರ್ನಲ್ಲಿ ಬೆಳೆಯುವ ಗುರಿಯಿದೆ.
ಸದ್ಯ ಜಿಲ್ಲೆಯಲ್ಲಿ 26100 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. 31700 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳ ದಾಸ್ತಾನಿದೆ. ಬತ್ತ- 25ಸಾವಿರ ಕ್ವಿಂಟಲ್, ತೊಗರಿ- 100ಕ್ವಿಂಟಲ್, ಹೆಸರು- 50ಕ್ವಿಂಟಲ್, ಸೂರ್ಯಕಾಂತಿ- 1600 ಕ್ವಿಂಟಲ್, ಶೇಂಗಾ-1300 ಕ್ವಿಂಟಲ್, ಸಜ್ಜೆ- 3500 ಕ್ವಿಂಟಲ್, ಮುಸುಕಿನ ಜೋಳ-150ಕ್ವಿಂಟಲ್ ಸೇರಿದಂತೆ ಒಟ್ಟು 31700 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ವಿವಿಧ ರಸಗೊಬ್ಬರ: ಇನ್ನು ಜಿಲ್ಲೆಗೆ ಮುಂಗಾರು ಹಂಗಾಮಿಗೆ ಒಟ್ಟು 1,70,700 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದೆ. ಈ ಪೈಕಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಪೂರೈಕೆಯಾದ ರಸಗೊಬ್ಬರವು ಮಳೆಯಾಗದ್ದರಿಂದ ಬಳಕೆಯಾಗದೇ ಉಳಿದಿದೆ. ಸದ್ಯ ಜಿಲ್ಲೆಯಲ್ಲಿ 87,131 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರವಿದೆ.
ಕಳೆದ ವರ್ಷ ಈ ಪ್ರಮಾಣ 48ಸಾವಿರ ಮೆಟ್ರಿಕ್ ಟನ್ ಆಗಿತ್ತು. ಪ್ರಸಕ್ತ ವರ್ಷ ಎಂಪಿಒ 4361 ಟನ್, ಕಾಂಪ್ಲೆಕ್ಸ್- 32,179 ಟನ್, ಯೂರಿಯಾ- 33690 ಟನ್, ಡಿಎಪಿ- 16901 ಟನ್ ರಸಗೊಬ್ಬರ ದಾಸ್ತಾನಿದೆ. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜದ ಕೊರತೆಯಿಲ್ಲ. ರಸಗೊಬ್ಬರದ ಪ್ರಮಾಣವೂ ಸಾಕಷ್ಟಿದೆ. ಪ್ರತಿ ತಿಂಗಳು ಹಂಚಿಕೆಯಾದಂತೆ ರಸಗೊಬ್ಬರ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಮುಂಗಾರು ಮಳೆಯ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ರೈತರು ಕೃಷಿಯಲ್ಲಿ ತೊಡಗಿದ್ದು, ಕೃಷಿ ಇಲಾಖೆ ಸಹ ರೈತರಿಗೆ ನೆರವಾಗಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

