371 ಶೀಘ್ರ ಅನುಷ್ಠಾನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 31
ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಕೊನೆಗೊಂಡು ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭ್ರಷ್ಟಾಚಾರ ರಹಿತ ಜನಪರವಾದ ಆಡಳಿತ ನೀಡುತ್ತೇವೆಂದು ಭರವಸೆ ನೀಡಿದ್ದಾರೆ. ಅದರಂತೆ ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬೇಡಿಕೆಗಳು: ಸಂವಿಧಾನದ 371(ಜೆ)ನೇ ಕಲಂ ತಿದ್ದುಪಡಿ ಮಾಡಿ ಶಿಕ್ಷಣ, ಉದ್ಯೋಗ, ಇನ್ನಿತರೆ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1.70 ಲಕ್ಷ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಸರ್ಕಾರದ ಅಧೀನದಲ್ಲಿರುವ ಅರೆ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಕಾರ್ಖಾನೆಗಳು ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ನಿರುದ್ಯೋಗಿ ಯುವಜನರಿಂದ ವಸೂಲಿ ಮಾಡುವ ಅರ್ಜಿ ಶುಲ್ಕ, ಡಿಡಿ ಮುಂತಾದ ಶುಲ್ಕಗಳನ್ನು ಸಂಪೂರ್ಣ ರದ್ದುಪಡಿಸಬೇಕು.
ಸರ್ಕಾರದ ಸ್ವಾಮ್ಯದಲ್ಲಿರುವ ಕಿಯೋನಿಕ್ಸ್ ಸಂಸ್ಥೆಯಿಂದ ಖಾಸಗಿ ಸಂಸ್ಥೆಗಳಿಗೆ ತರಬೇತಿ ನೀಡಲು ಗುತ್ತಿಗೆ ನೀಡುವುದನ್ನು ನಿಲ್ಲಿಸಿ ಕಿಯೋನಿಕ್ಸ್ನಿಂದಲೇ ಜಿಲ್ಲಾವಾರು ಸಮಗ್ರ ತರಬೇತಿ ನೀಡಬೇಕು. ಉದ್ಯೋಗ ಮತ್ತು ತರಬೇತಿ ಇಲಾಖೆ ಅಡಿಯಲ್ಲಿನ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಖಾಸಗಿಯವರಿಗೆ ಗುತ್ತಿಗೆ ನೀಡಿ ನಕಲಿ ಕೌಶಲ್ಯ ಅಭಿವೃದ್ಧಿಯ ತರಬೇತಿ ನೀಡುವುದನ್ನು ತಡೆಗಟ್ಟಿ ನೇರವಾಗಿ ಸರ್ಕಾರ ಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭಿಸಬೇಕು. ಶಿಕ್ಷಣದ ಕೇಸರೀಕರಣ, ವ್ಯಾಪಾರೀಕರಣ ತಡೆಗಟ್ಟಿ ಸರ್ಕಾರಿ ಶಾಲಾ- ಕಾಲೇಜು, ಹಾಸ್ಟೆಲ್ ಹಾಗೂ ವಿವಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಖಾತ್ರಿಗೊಳಿಸಬೇಕು.
ಖಾಸಗಿ ರಂಗದಲ್ಲಿ ಮೀಸಲಾತಿ ಕಲ್ಪಿಸಿ: ಜನಸಾಮಾನ್ಯರ ಅಗತ್ಯ ಮೂಲ ಸೌಲಭ್ಯಗಳಿಗಾಗಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸರ್ಕಾರಿ ಶಿಕ್ಷಣ, ಆರೋಗ್ಯ ಸೇವಾ ಕ್ಷೇತ್ರ ಮುಂತಾದ ಅಗತ್ಯ ವಲಯಗಳನ್ನು ವಿಸ್ತರಿಸಿ ಸಂಪನ್ಮೂಲಗಳನ್ನು ಒದಗಿಸಬೇಕು. ಖಾಸಗಿ ರಂಗದಲ್ಲಿ ಮೀಸಲಾತಿಗಾಗಿ ಕೇಂದ್ರೀಯ ಶಾಸನ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಗಂಡ- ಹೆಂಡತಿಯರ ಜಂಟಿ ಹೆಸರಿನಲ್ಲಿ ನೀಡಬೇಕು. ಎಲ್ಲ ಹಂತದ ಉದ್ಯೋಗದ ನೇಮಕಾತಿಯಲ್ಲಿ ಅಂಗವಿಕಲರಿಗೆ, ಯುವತಿಯರಿಗೆ ಮೀಸಲಾತಿ ಜಾರಿಗೊಳಿಸಬೇಕು.
ರಾಜ್ಯದ ನೂತನ ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಮುಂದಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಬುಬು ಕಡ್ಡೋಣಿ, ಮುಖಂಡರಾದ ಲಕ್ಷ್ಮೀಬಾಯಿ, ವಿಜಯಲಕ್ಷ್ಮೀ, ವೀರೇಶ ರಾಠೋಡ, ರಮೇಶ ವೀರಾಪೂರ, ವೀರಭದ್ರ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

