ಸ್ಪಾಟ್ ಫಿಕ್ಸಿಂಗ್: ತನಿಖೆಗೆ ಆಗ್ರಹಿಸಿ ಪ್ರತಿಕೃತಿ ದಹನ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 31
ಐಪಿಎಲ್ ಕಳ್ಳಾಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನಿಷ್ಪಕ್ಷಪಾತ ತನಿಖೆಯ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಎಐಡಿವೈಒ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಐಪಿಎಲ್ ಕಳ್ಳಾಟದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಭಗತ್ ಸಿಂಗ್ ವೃತ್ತದಲ್ಲಿ ಸಂಘಟನೆಯ ಪ್ರಮುಖರು ಜಮಾಯಿಸಿ ಕ್ರಿಕೆಟ್ ಫಿಕ್ಸಿಂಗ್ನಲ್ಲಿ ಶಾಮೀಲಾ ಗಿರುವ ಆಟಗಾರರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪ್ರತಿಕೃತಿ ದಹಿಸಿದ ಕಾರ್ಯಕರ್ತರು, ದೇಶದಲ್ಲಿ ಕ್ರಿಕೆಟ್ ಈಚೆಗಿನ ದಿನಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ಗಳಿಸಿದೆ. ಅಷ್ಟೇ ಅಲ್ಲ ಸಭ್ಯರ ಆಟ ಎಂದೇ ಕರೆಯಿಸಿಕೊಂಡಿದೆ.
ಕ್ರಿಕೆಟ್ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಆಟಗಾರರು ಹತ್ತಾರು ರೀತಿಯ ಅಕ್ರಮಗಳಿಗೆ ತೊಡಗುತ್ತಿರುವುದು ಆತಂಕಕಾರಿ. ಕ್ರಿಕೆಟ್ ಆಟಕ್ಕೆ ಕುಂದು ತರುವಂಥ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಟೀಕಿಸಿದರು.
ಸರ್ಕಾರಗಳು ಕೂಡಲೇ ಕಡಿವಾಣ ಹಾಕಲಿ: ಕ್ರಿಕೆಟ್ ಆಟವನ್ನು ನಂಬಿರುವ ದೇಶದ ಕೋಟ್ಯಂತರ ಕ್ರೀಡಾಭಿಮಾನಿಗಳನ್ನು ವಂಚಿಸಿ ಅಕ್ರಮ ಮಾರ್ಗಗಳ ಮೂಲಕ ಹಣ ಗಳಿಕೆಗೆ ಮುಂದಾಗಿದ್ದಾರೆ. ಇದಕ್ಕೆ ಸರ್ಕಾರಗಳು ಕೂಡಲೇ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ ಹೋರಾಟಗಾರರು ಆಟಗಾರರಿಂದ ಜನರಿಗೆ ನಂಬಿಕೆ ದ್ರೋಹ ಎಂದು ಆರೋಪಿಸಿದರು.
ಐಪಿಎಲ್ ಪಂದ್ಯಾವಳಿಯ ವೇಳೆ ಚಿಯರ್ ಗರ್ಲ್ಸ್ ಬಳಕೆ ಸರಿಯಲ್ಲ. ಅಸಭ್ಯ ನೃತ್ಯದ ಮೂಲಕ ಕ್ರಿಕೆಟ್ಗೆ ಅಗೌರವ ತೋರಲಾಗುತ್ತಿದೆ. ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಶಾಮೀಲಾಗಿರುವ ಕೆಲವರನ್ನು ಈಗಾಗಲೇ ಪತ್ತೆ ಹಚ್ಚಿ ಬಂಧಿಸಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಇನ್ನುಳಿದವರನ್ನೂ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಸ್ಪಾಟ್ ಫಿಕ್ಸಿಂಗ್ನಲ್ಲಿ ಅನೇಕ ಹಿರಿಯ ಆಟಗಾರರು ಶಾಮೀಲಾಗಿರುವ ಸಾಧ್ಯತೆಯಿದ್ದು, ತನಿಖೆ ತೀವ್ರಗೊಳಿಸದಿದ್ದಲ್ಲಿ ಅಂಥವರು ಪಾರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಬೇಕು. ನಿಷ್ಪಕ್ಷಪಾತ ತನಿಖೆಯಿಂದ ಒಟ್ಟಾರೆ ಅಕ್ರಮದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್, ಚನ್ನಬಸವ ಜಾನೇಕಲ್, ಸದಸ್ಯರಾದ ಗೌರಿಶಂಕರ್, ರಂಗನಾಥ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

