ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ
ಕ.ಪ್ರ. ವಾರ್ತೆ ಟಿ ರಾಯಚೂರು ಟಿ ನ.3
ನಗರ ಸೇರಿದಂತೆ ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಂಡುಬಂದಿತು. ಹಬ್ಬದ ಅಂಗವಾಗಿ ಭಾನುವಾರ ನಗರದ ಮಾರುಕಟ್ಟೆಯಲ್ಲಿ ಅವಶ್ಯಕ ಸಾಮಗ್ರಿ ಮತ್ತು ಪಟಾಕಿ ಮಾರಾಟ ಜೋರಾಗಿತ್ತು.
ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ನಗರದ ಮನೆ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಲಕ್ಷ್ಮಿ ಪೂಜೆಗಾಗಿ ಹಣ್ಣು ಹೂವು ತರಕಾರಿ ಖರೀದಿಸಲು ಜನತೆ ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ನಗರದ ಮಾರುಕಟ್ಟೆಯ ಜನರಿಂದ ಗಿಜಿಗುಡುತ್ತಿದ್ದು, ಹಬ್ಬದ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿದೆ.
ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಿದ್ದು, ನೂರಾರು ಸಂಖ್ಯೆಯ ನಾಗರಿಕರು ಪಟಾಕಿ ಖರೀದಿ ಸುತ್ತಿದ್ದಾರೆ. ಜಿಲ್ಲಾದ್ಯಂತ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಸಿಂಧನೂರು ಸ್ಪೆಷಲ್ 'ಧೂಳ್' ದೀಪಾವಳಿ
ಸಿಂಧನೂರು: ಈ ಸಲ ಏನ್ ಸ್ಪೆಷಲ್ರೀ. ಏನ್ ಸ್ಪೆಷಲ್ ಇರ್ತ ಬಿಡ್ರಿ. ಹೋದ್ಸಲ ಒಂದಿಷ್ಟು ಕಡಿಮೆ ಇತ್ತು. ಈ ಸಲ ಇನ್ನೂ ಜಾಸ್ತಿ ಆಗೈತಿ. ದೀಪಾವಳಿಗೆ ಧೂಳೇ ಸ್ಪೆಷಲ್ ನೋಡ್ರಿ. ಕುಷ್ಟಗಿ ಮಾರ್ಗದ ರಸ್ತೆ ಬದಿಯ ಅಂಗಡಿಗಳಿಗೆ ಹಬ್ಬದ ಸಾಮಗ್ರಿಗಳನ್ನು ಕೊಳ್ಳಲು ಬಂದಿದ್ದ ವ್ಯಕ್ತಿಯೊಬ್ಬರಿಂದ ಬಂದ ವ್ಯಂಗ್ಯದ ಮಾತುಗಳಿವು. ಭಾನುವಾರ ಸಾಯಂಕಾಲ ಕ್ಷಣ ಕ್ಷಣಕ್ಕೂ ಗಾಡಿಗಳು ಒಂದೇ ಸಮನೇ ಚಲಿಸುತ್ತಿದ್ದರೆ ಧೂಳೋ ಧೂಳು.. ಸಿಂಧನೂರಿನ ಧೂಳು ನೋಡಲು ಎರಡು ಕಣ್ಣು ಸಾಲದು. ಇಂತಹ ಅವಕಾಶ ಒದಗಿಸಿದ ಮಹನೀಯರಿಗೆ ಧನ್ಯವಾದಗಳು ಎಂದು ಕಿಚಾಯಿಸುತ್ತಿದ್ದುದು ಕೇಳಿ ಬಂತು.
ಹಬ್ಬದ ಖುಷಿಯ ನಡುವೆಯೂ, ಧೂಳಿಗಂಜಿ ಅನೇಕರು ಮೂಗು ಮುಚ್ಚಿಕೊಂಡು ಅಂಗಡಿಗಳ ಕಡೆಗೆ ಧಾವಿಸುತ್ತಿದ್ದುದು ಕಂಡುಬಂತು. ಮುಂದೆ ವಾಹನ ಹೋಗುತ್ತಿದ್ದರೆ ಹಿಂದಿನ ವಾಹನ ಚಾಲಕರಿಗೆ ಧೂಳು ಮುಕ್ಕುರಿಪಟ ಬಡಿಯುತ್ತಿತ್ತು. ಕೆಮ್ಮುತ್ತಲೇ ವಾಹನ ಚಲಾಯಿಸುತ್ತಿರುವುದು ಕಾಮನ್ನಾಗಿತ್ತು.
ಸಿಂಧನೂರ್ ಜನಕ್ಕೆ ಧೂಳು ಕುಡುದು ಕುಡುದು ಅಭ್ಯಾಸಾಗೈತಪ. ಪಾಪ ಅವರಾದ್ರು ಏನ್ ಮಾಡ್ತಾರ. ಇರೋ ರಸ್ತದಾಗ ಅಡ್ಯಾಡಬೇಕಲ. ಈ ಗಾಡಿಗುಳ ಹೆಸರಿಲ್ಯ ಟ್ಯಾಕ್ಸ್ ಕಟ್ಟೋದ ಬಿಡ್ತೀವಿ ಅಂತ ಸಾರ್ವಜನಿಕರೊಬ್ಬರ ವ್ಯಂಗೋಕ್ತಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಚಾಟಿ ಬೀಸಿದರು. ಈ ಸಲದ ದೀಪಾವಳಿಗೆ ನಗರಿಗರಿಗೆ ಧೂಳೆಬ್ಬಿಸಿ ತಟ್ಟಿರುವುದಂತೂ ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

