ರಾಯಚೂರು

ಕಸ ವಿಲೇವಾರಿಯಲ್ಲಿ ಸ್ಥಳೀಯ ನಗರಸಭೆ ನಿರ್ಲಕ್ಷ್ಯ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ನ.8
ಸಿಂಧನೂರಿನ ಆದಿತ್ಯ ಕಾಲೇಜಿನ ವಿದ್ಯಾರ್ಥಿಗಳು ಧೂಳಿನ ವಿರುದ್ಧ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ 31 ವಾರ್ಡ್‌ಗಳ ರಸ್ತೆ ಹಾಗೂ ಮುಖ್ಯ ರಸ್ತೆಗಳ ಸ್ಥಿತಿ ಹೀನಾಯ ಸ್ಥಿತಿಗೆ ತಲುಪಿ ವರ್ಷಗಳೇ ಗತಿಸಿವೆ. ಇತ್ತೀಚೆಗೆ ಸುರಿದ ಮಳೆಯಿಂದ ಸಂಪೂರ್ಣ ಹಾಳಾಗಿವೆ. ಮುಖ್ಯ ರಸ್ತೆಯಲ್ಲಿ ಡಾಂಬರೇ ಇಲ್ಲ. ಇದರಿಂದ ಬಸ್ ನಿಲ್ದಾಣ, ಹಳೇ ಬಜಾರ್, ಗಂಗಾವತಿ ರಸ್ತೆ ಸೇರಿದಂತೆ ವಾರ್ಡ್‌ಗಳ ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಈ ರಸ್ತೆಗಳ ಮಾರ್ಗದಲ್ಲಿಯೇ ವಿವಿಧ ಶಾಲಾ, ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಇದೇ ರಸ್ತೆಗಳಲ್ಲಿ ತೆರಳುವಂತಾಗಿದೆ. ರಸ್ತೆಗಳೆಲ್ಲ ಮಣ್ಣು ಮಯವಾಗಿರುವುದರಿಂದ ಧೂಳಿನ ಸ್ಥಿತಿಯೂ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರಿಂದ ನಗರದ ಜನತೆ, ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಕಾಲೇಜು ಪ್ರಾಚಾರ್ಯ ಕೆ. ಚಕ್ರವರ್ತಿ ಮಾತನಾಡಿದರು.
ದುರಸ್ತಿಗೆ ಒತ್ತಾಯ: ಕಸ ವಿಲೇವಾರಿಯಲ್ಲಿ ಸ್ಥಳೀಯ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ಇತ್ತೀಚಿಗೆ ಚರಂಡಿಯಿಂದ ತೆಗೆದ ಘನತ್ಯಾಜ್ಯ ಕೂಡ ರಸ್ತೆ ಬದಿ ಬಿಟ್ಟಿರುವುದರಿಂದ ವಾರ್ಡ್‌ಗಳು ಗಬ್ಬು ನಾರುತ್ತಿವೆ. ಹೊರಗಡೆ ಸಾಗಿಸುವ ಪ್ರಯತ್ನ ನಡೆದಿಲ್ಲ. ಗಂಗಾವತಿ, ರಾಯಚೂರು ರಸ್ತೆ ಮಾರ್ಗದಲ್ಲಿ ನಗರೋತ್ಥಾನ ಚರಂಡಿ ಕಾಮಗಾರಿ ನಡೆಯುತ್ತಿದೆ. ಅಲ್ಲಿಯೂ ರಾಶಿಗಟ್ಟಲೇ ಮಣ್ಣು ರಸ್ತೆ ಬದಿ ಬಿಡಲಾಗಿದ್ದು ಬೇರೆಡೆಗೆ ಸಾಗಿಸಿಲ್ಲ ಪ್ರತಿ ವರ್ಷವೂ ರಿಪೇರಿ ಮಾಡುವುದಾಗಿ ಹೇಳುತ್ತಿರುವ ನಗರಸಭೆ ಹಾಗೂ ಪಿಡಬ್ಲ್ಯೂಡಿ ಇಲಾಖೆ ಕಣ್ಣು ಮುಚ್ಚಿ ಕುಳಿತಿವೆ. ರಸ್ತೆ ಹೆಸರಿನಲ್ಲಿ ಸಂಪೂರ್ಣ ಹಾಳಾಗಿರುವ ರಸ್ತೆಗಳಿಗೆ ಮರಂ ಹಾಕಿದರೆ ಸಾಲದು. ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಸುಮಾರು ವರ್ಷಗಳಿಂದ ವ್ಯಾಪಿಸಿಕೊಂಡಿರುವ ಧೂಳು ನಿವಾರಣೆಗೂ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಪನ್ಯಾಸಕರಾದ ಲಕ್ಷ್ಮೀಕಾಂತ ದೇಸಾಯಿ, ಸತ್ಯಪ್ರಕಾಶ, ಅಶೋಕ ಬೆನ್ನೂರು, ಲಕ್ಷ್ಮೀ ವೈ. ಶಂಕ್ರಪ್ಪ, ದೊಡ್ಡಬಸವ, ಮಂಜುಳಾ, ಹನುಮೇಶ ತಿಡಿಗೋಳ, ಸುಜಾತ, ಎಂ.ಎಂ. ವಾಲೇಕಾರ, ಡಾ. ಗುರುಪ್ರಸಾದ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.