ಸಿಂಧನೂರಿನಲ್ಲಿ 12ರಂದು ರೈತರ ಬೃಹತ್ ಸಮಾವೇಶ
ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ಅ.8
ಬತ್ತ ಮತ್ತು ಹತ್ತಿ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬತ್ತಕ್ಕೆ ಕನಿಷ್ಟ ಬೆಂಬಲ ಬೆಲೆಯನ್ನು ರು. 2ಸಾವಿರ ನಿಗದಿಗೆ ಒತ್ತಾಯಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.12ರಂದು ಸಿಂಧನೂರಿನಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹೈ.ಕ. ಭಾಗದ ಕೊಪ್ಪಳ, ರಾಯಚೂರು, ಬಳ್ಳಾರಿ, ಯಾದಗಿರಿ ಹಾಗೂ ದಾವಣಗೆರೆ ಜಿಲ್ಲೆಗಳ ಲಕ್ಷಾಂತರ ಬತ್ತ ಬೆಳೆಗಾರರು ಪಾಲ್ಗೊಳ್ಳುವ ಸಮಾವೇಶವನ್ನು ಆಂಧ್ರದ ಫಾರ್ಮರ್ಸ್ ಫೆಡರೇಷನ್ ಅಧ್ಯಕ್ಷ ವೈ. ನರೇಂದ್ರನಾಥ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಸಮಾವೇಶದಲ್ಲಿ ಆಂಧ್ರದ ಲೋಕಸತ್ತಾ ಪಾರ್ಟಿಯ ಶಾಸಕ ಡಾ. ಜಯಪ್ರಕಾಶ್ ನಾರಾಯಣ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಸೋಮಗುದ್ದು ರಂಗಸ್ವಾಮಿ ಸೇರಿ ಅನೇಕ ರೈತ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಖರೀದಿ: ರಾಜ್ಯದಲ್ಲಿ ಕಡಿಮೆ ಬೆಲೆಗೆ ಬತ್ತ ಮತ್ತು ಹತ್ತಿ ಮಾರಾಟ ಮಾಡುವಂಥ ಸ್ಥಿತಿಯಿದೆ. ಬತ್ತಕ್ಕೆ ಕನಿಷ್ಟ ರು. 2ಸಾವಿರ ಬೆಂಬಲ ಬೆಲೆ ನೀಡಬೇಕು. ಹತ್ತಿಗೆ ರು. 6500 ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುವಂತೆ ರಾಜ್ಯ ರೈತ ಸಂಘವು ಸರ್ಕಾರವನ್ನು ಸಮಾವೇಶದ ಮೂಲಕ ಒತ್ತಾಯಿಸುತ್ತದೆ ಎಂದು ಹೇಳಿದರು.
ವಿವಿಧ ದರ: ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು ಬತ್ತದ ಬೆಂಬಲ ಬೆಲೆ ಕುರಿತು ನೀಡಿರುವ ಹೇಳಿಕೆ ರೈತರ ದಾರಿ ತಪ್ಪಿಸುವ ಕಾರ್ಯ. ಸದ್ಯ ರು. 1800 ಪ್ರತಿ ಕ್ವಿಂಟಾಲ್ ದರವಿದೆ ಎಂದು ಹೇಳುವ ಮೂಲಕ ಅವರು ತಮಗಿರುವ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಬತ್ತಕ್ಕೆ ರು. 1350 ದರ ನಿಗದಿ ಮಾಡಿದೆ. ಆದರೆ ಸಚಿವರು ರು. 1800 ದರವಿದೆ ಎಂದು ಸುಳ್ಳು ಹೇಳಿದ್ದಾರೆಂದು ಟೀಕಿಸಿದರು.
ಬ್ರಿಟಿಷರ ಕಾಲದ ಅಕ್ಕಿ ಲೆವಿ ಸಂಗ್ರಹ ಪದ್ಧತಿಯನ್ನು ಕೂಡಲೇ ಕೈಬಿಡಬೇಕು.ಅದರಿಂದ ರೈತರಿಗಾಗುತ್ತಿರುವ ತೊಂದರೆ ತಪ್ಪಿ ಸಬೇಕು. ಈ ನಿಟ್ಟಿನಲ್ಲಿ ಸಿಂಧನೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒತ್ತಾಯಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸಮಾವೇಶದಲ್ಲಿ ಪಾಲ್ಗೊಂಡು ರೈತರ ಮನವಿ ಸ್ವೀಕರಿಸುವ ಭರವಸೆ ನೀಡಿದ್ದಾರೆಂದು ಹೇಳಿದರು.
ರಾಜ್ಯ ಸರ್ಕಾರ ಈಚೆಗೆ ಭೂಮಾಪನ ಕಾರ್ಯದ ಶುಲ್ಕ ಹೆಚ್ಚಳ ಮಾಡಿದೆ. ಅದರಿಂದಾಗಿ ರೈತರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಿಸಿದೆ. ಇದುವರೆಗೆ ಕೇವಲ ರು. 350 ಪಡೆಯಲಾಗುತ್ತಿತ್ತು. ಆದರೆ ಇನ್ನು ಮುಂದೆ ಭೂಮಾಪನ ಕಾರ್ಯಕ್ಕೆ ಮೊದಲ ಎರಡು ಎಕರೆಗೆ ರು. 1500 ಆನಂತರ ಪ್ರತಿ ಎಕರೆಗೆ ರು. 200 ನೀಡುವಂತೆ ಶುಲ್ಕ ನಿಗದಿ ಮಾಡಿದ್ದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ದೂರಿದರು.
ತೊಂದರೆ: ಈಗಾಗಲೇ ರಾಜ್ಯದಲ್ಲಿ ಭೂಮಾಪನ ಇಲಾಖೆಯು ಅಕ್ರಮಗಳ ತಾಣವಾಗಿದೆ. ಕಾಲಮಿತಿಯಲ್ಲಿ ಭೂಮಾಪನ ಕಾರ್ಯ ನಡೆಯುತ್ತಿಲ್ಲ. ಮಾಪನ ಶುಲ್ಕ ಹೆಚ್ಚಳದಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ರೈತರಿಗೆ ತೊಂದರೆಯಾಗಲಿದೆ. ನಗರ ಪ್ರದೇಶದ ಭೂಮಾಪನ ಕಾರ್ಯಕ್ಕೆ ಸರ್ಕಾರ ಸದ್ಯ ಪ್ರತಿ ಎಕರೆಗೆ ರು. 2ಸಾವಿರ ಆನಂತರದ ಪ್ರತಿ ಎಕರೆ ಅಳತೆ ಮಾಡಲು ರು. 500 ಶುಲ್ಕ ನಿಗದಿ ಮಾಡಿದೆ. ಇದು ಸಮಂಜಸವಲ್ಲ ಎಂದು ಟೀಕಿಸಿದರು.
ಕಾರಣ ರಾಜ್ಯ ಸರ್ಕಾರ ಕೂಡಲೇ ಹೊಸ ಶುಲ್ಕ ಹಿಂಪಡೆಯಬೇಕು. ರೈತರಿಗೆ ಕಾಲಮಿತಿಯ ಅಳತೆ ಕೈಗೊಳ್ಳಲು ಸೂಚಿಸಿ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಅವರು, ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸೂಕ್ತ ದರ ನಿಗದಿ ಮಾಡುವ ನಿಟ್ಟಿನಲ್ಲಿ ಕಬ್ಬಿನ ಬೆಲೆ ನಿಗದಿ ಸಮಿತಿಯ ಸಭೆ ಕರೆದು ಕೂಡಲೇ ಬೆಲೆ ನಿಗದಿ ಮಾಡಬೇಕು. ದಕ್ಷಿಣ ಮತ್ತು ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರೆಂದು ತಾರತಮ್ಯ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿದ್ದು ಬೆಳೆಗಾರು ಸಂಕಷ್ಟದಲ್ಲಿದ್ದಾರೆ. ಕಾರಣ ಸರ್ಕಾರ ಸಮರ್ಪಕ ಬೆಲೆ ನಿಗದಿ ಮಾಡಿ ಹತ್ತಿ ಖರೀದಿಸಬೇಕು. ರಾಜ್ಯ ಸರ್ಕಾರ ಮೂಢನಂಬಿಕೆಗೆ ಕಡಿ ವಾಣ ಹಾಕಲು ಕಾಯಿದೆ ಜಾರಿಗೆ ಮುಂದಾಗಿರುವ ಕ್ರಮಕ್ಕೆ ಸ್ವಾಗತಿಸಿದರು.
ಸಂಘಟನೆ ಪ್ರಮುಖರಾದ ಭೀಮೇಶ್ವರರಾವ್, ನರಸಪ್ಪ ಹೊಕ್ರಾಣಿ, ಬಸವರಾಜ್ ಮಾಲಿಪಾಟೀಲ್ ಸೇರಿ ಅನೇಕರಿದ್ದರು.
ರಾಜ್ಯದಲ್ಲಿ ಅಕ್ಕಿ ಗಿರಣಿಗಳ ಮಾಲಿಕರಿಂದ
ಲೆವಿ ಅಕ್ಕಿ ಸಂಗ್ರಹ ಕೂಡಲೇ ನಿಲ್ಲಿಸಬೇಕು. ಅದರಿಂದಾಗಿಯೇ ಬತ್ತ ಬೆಳೆಗಾರರು
ಸಂಕಷ್ಟದಲ್ಲಿದ್ದಾರೆ. ಅಕ್ಕಿ ಲೆವಿ ಸಂಗ್ರಹಕ್ಕೆ
ಗಿರಣಿ ಮಾಲಿಕರಿಗೆ ಒತ್ತಡ ಹೇರುವುದರಿಂದ ಅದರ ಹೊರೆ ರೈತರ ಮೇಲೆ ಅಂತಿಮವಾಗಿ ಬೀಳಲಿದೆ. ಪರಿಣಾಮ ರೈತರು ಆರ್ಥಿಕ
ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕು.
- ಚಾಮರಸ ಮಾಲಿಪಾಟೀಲ್, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

