ಅಲೆಮಾರಿ ಜನಾಂಗದಿಂದ ಪ್ರತಿಭಟನೆ
ಕ.ಪ್ರ. ವಾರ್ತೆ ಗುಲ್ಬರ್ಗ ನ.11
ಸಂವಿಧಾನದ 371(ಜೆ) ವಿಧಿಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಪ್ರಮುಖ 11 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಲೆಮಾರಿ ಜನಾಂಗ ಸೋಮವಾರ ಗುಲ್ಬರ್ಗದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು.
ಕಲ್ಯಾಣ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಿತಿ ನೇತೃತ್ವದಲ್ಲಿ ಸಾವಿರಾರು ಅಲೆಮಾರಿಗಳು ನಗರದ ವೀರಶೈವ ಕಲ್ಯಾಣ ಮಂಟಪ, ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೇಡಿಕೆಗಳು: ವಿವಿಧ ಯೋಜನೆಯಡಿ ನೇರ ಸಾಲ ಸೌಲಭ್ಯವನ್ನು ಕಲ್ಪಿಸಬೇಕು, ಪ್ರವರ್ಗ 1ರಲ್ಲಿ ಬರುವ ಈ ಅಲೆಮಾರಿ, ಅರೆ ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯದಡಿ ನಿಗಮ ಮಂಡಳಿಗಳಿಗೆ, ಸ್ಥಳೀಯ ಸಂಸ್ಥೆಗಳಲ್ಲಿ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಅಲೆಮಾರಿಗಳ ಸಬಲೀಕರಣಕ್ಕಾಗಿ ಎಸ್ಸಿಪಿ ವಿಶೇಷ ಘಟಕದ ಯೋಜನೆಯಡಿ ಪ್ರತಿ ವರ್ಷ 100 ಕೋಟಿ ಅನುದಾನವನ್ನು ಮೀಸಲಿಡಬೇಕು. ಈ ಸಮುದಾಯದ ಕಲ್ಯಾಣಕ್ಕಾಗಿ ಪ್ರತ್ಯೇಕ ಕಲ್ಯಾಣನಿಧಿ ಸ್ಥಾಪಿಸಬೇಕು, ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯಡಿ ಗುಲ್ಬರ್ಗ ವಿಭಾಗ ಮಟ್ಟದಲ್ಲಿ ಸಮುದಾಯದ ಜಾಗೃತಿ ಸಮಾವೇಶ ನಡೆಸಬೇಕೆಂದು ಆಗ್ರಹಿಸಿದರು. ಬರುವ 2013-14ನೇ ಸಾಲಿನ ಬಜೆಟ್ನಲ್ಲಿ ಅಲೆಮಾರಿ ಜನರ ಅಭಿವೃದ್ಧಿಗಾಗಿ 50 ಕೋಟಿ ನೀಡಬೇಕು, ಗುಡಿಸಲುಮುಕ್ತ ನೆಲೆ ಯೋಜನೆಯಡಿ ಪ್ರವರ್ಗ 1ರ ಅಲೆಮಾರಿಗಳಿಗೆ ಕಾಯಂ ಆಗಿ ಒಂದು ಕಡೆ ನೆಲೆ ನಿಲ್ಲಲು ನಿವೇಶನ, ಆಶ್ರಯ ಮನೆಗಳನ್ನು ಒದಗಿಸಬೇಕು. ಈ ಸಮುದಾಯಕ್ಕೆ ಸರ್ಕಾರಿ ಗೈರಾಣಿ ಜಾಗವನ್ನು ಮಂಜೂರು ಮಾಡಬೇಕು. ಅಲೆಮಾರಿ, ಅರೆ ಅಲೆಮಾರಿ ಜನಾಂಗದಲ್ಲಿ 46 ಒಳ ಜಾತಿ ಪಂಗಡಗಳಿದ್ದು, ಈ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು, ಈ ಸಮುದಾಯದ ಸಮಗ್ರ ಕಲ್ಯಾಣಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಅಧ್ಯಕ್ಷ ವೆಂಕಟೇಶ ಯಾದವ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೆಳವರ್, ನಾರಾಯಣರಾವ ಸೂರವಸೆ ಸೇರಿದಂತೆ ಸಾವಿರಾರು ಅಲೆಮಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

