ದಲ್ಲಾಳಿಗಳಿಂದ ರೈತರಿಗೆ ವಂಚನೆ
ಸಿಂಧನೂರು: ದಲ್ಲಾಳಿಗಳಿಂದ ರೈತರ ವಂಚನೆ ನಿರಂತರವಾಗಿದ್ದು, ಈ ಹಿಂದೆ ಒಂದು ಚೀಲಕ್ಕೆ ಅರ್ಧ ಕೆಜಿ ಸೂಟ್ ತೆಗೆಯುತ್ತಿದ್ದರು. ಈಗ ಎರಡು ಕೆಜಿವರೆಗೆ ಸೂಟ್ ತೆಗೆದು ವಂಚನೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಆರೋಪಿಸಿದರು.
ನಗರದ ಬಾಲಕರ ಪಪೂ ಕಾಲೇಜು ಆವರಣದಲ್ಲಿ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ರೈಸ್ ಮಿಲ್ಗಳಿಂದ ಈ ಬಾರಿ 13.5 ಲಕ್ಷ ಟನ್ ಲೆವಿ ಕೇಳುವ ಮೂಲಕ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ.
1ಕ್ಕೆ ಕೆಜಿ ಅಕ್ಕಿ ನೀಡಲು ಮುಕ್ತ ಮಾರುಕಟ್ಟೆ ಬೆಲೆಯಲ್ಲಿ ಬತ್ತವನ್ನು ಖರೀದಿ ಮಾಡಲಿ. ಬತ್ತ ಹಾಗೂ ಹತ್ತಿಗೆ ವೈಜ್ಞಾನಿಕ ಬೆಲೆಯನ್ನು ಕೂಡಲೇ ಪ್ರಕಟಿಸಬೇಕು. ಬೇಸಿಗೆ ಬೆಳೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಬೇಕು.
ನಿರ್ಲಕ್ಷ್ಯ ತಾಳಿದರೆ ರೈತರು ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ: ರೈತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಆಂಧ್ರಪ್ರದೇಶ ರೈತರ ಅಸೋಸಿಯೇಶನ್ ಅಧ್ಯಕ್ಷ ವೈ.ನರೇಂದ್ರನಾಥ, ಲೋಕಸಭೆಯಲ್ಲಿ ರೈತ ಪರವಾದ ಚರ್ಚೆಗಳು ನಡೆಯುತ್ತಿಲ್ಲ. ಸಾಲದ ಸುಳಿಗೆ ಸಿಲುಕುತ್ತಿರುವ ರೈತರು ಕೃಷಿಯಿಂದ ವಿಮುಖರಾಗುವ ಅನಿವಾರ್ಯತೆ ಉಂಟಾಗುತ್ತಿದೆ.
ಸೋನಾ ಮಸೂರಿ ಬತ್ತ ಬೆಳೆಯಲು ಹೆಚ್ಚು ಖರ್ಚು ಆಗುತ್ತದೆ. ಸೋನಾ ರಫ್ತು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಸ್ವಾಮಿನಾಥನ್ ಸಮಿತಿಯ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣ ಕಡಗಂದೊಡ್ಡಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ವೀರಸಂಗಯ್ಯ, ವಿಭಾಗೀಯ ಕಾರ್ಯದರ್ಶಿ ಬಲ್ಲೂರ ರವಿಕುಮಾರ, ತ್ರಿಮೂರ್ತಿ, ಪುರುಷೋತ್ತಮಗೌಡ, ಅಮರಣ್ಣ ಗುಡಿಹಾಳ, ಕೆ.ಪಿ. ಆನಂದರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
5 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ರೈತರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸಗಳಗಿ ಭಾಗವಹಿಸಿದ್ದರು.
ಸಮಾವೇಶದ ನಿರ್ಣಯಗಳು: ಸೋನಾ ಮಸೂರಿ ಬತ್ತಕ್ಕೆ 2,000 , ಮಧ್ಯಮ ವರ್ಗದ ಬತ್ತಕ್ಕೆ 1,800 ಬೆಂಬಲ ಬೆಲೆ ಘೋಷಣೆ ಮಾಡಬೇಕು.
ಸರ್ಕಾರವೇ ನೇರವಾಗಿ ಖರೀದಿ ಮಾಡಬೇಕು. ರೈಸ್ ಮಿಲ್ ಮೇಲೆ ವಿಧಿಸಿರುವ ಲೆವಿಯನ್ನು ಕೂಡಲೇ ರದ್ದುಳಿಸಬೇಕು. ಬತ್ತ ಖರೀದಿ ಮಾಡುವ ವ್ಯಾಪಾರಸ್ಥರು ಕಡ್ಡಾಯವಾಗಿ ಲೈಸನ್ಸ್ ಹೊಂದಿರಬೇಕು.
ಪ್ರತಿ ಚೀಲಕ್ಕೆ 2 ಕೆಜಿ ಮುರಿಯುವ ಸೂಟ್ ಕೂಡಲೇ ರದ್ದುಗೊಳಿಸಬೇಕು. ಬತ್ತದ ಬೆಳೆಗೆ ಕುತ್ತಿಗೆ ರೋಗ, ಕಂದು ಹುಳು ಇತರೆ ರೋಗಗಳು ಔಷಧಿಯ ಮೂಲಕ ಹತೋಟಿಗೆ ಬರದೇ ನಷ್ಟ ಸಂಭವಿಸಿದ ರೈತರ ನೆರವಿಗೆ ಮುಂದಾಗಬೇಕು.
ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್ಗೆ 6,500, ಮೆಕ್ಕೆಜೋಳಕ್ಕೆ 1,500, ಕಬ್ಬಿಗೆ 5,000 ಬೆಂಬಲ ಬೆಲೆ ನಿಗದಿಗೊಳಿಸಬೇಕು ಎನ್ನುವ ನಿರ್ಣಯಗಳನ್ನು ಜಿಲ್ಲಾಧಿಕಾರಿ ನಾಗರಾಜ್ ಅವರ ಮೂಲಕ ಸರ್ಕಾರಕ್ಕೆ ರವಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

