ಕಾಲೇಜು ಮಹಡಿಯಿಂದ ಹಾರಿ ಸಿಂಧನೂರು ವಿದ್ಯಾರ್ಥಿ ಸಾವು
ಕನ್ನಡಪ್ರಭ ವಾರ್ತೆ ಟಿ ಬಳ್ಳಾರಿ ಟಿ ನ. 15
ವಿದ್ಯಾರ್ಥಿಯೋರ್ವ ಕಾಲೇಜಿನ ವಸತಿ ನಿಲಯದ ಎರಡನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿರುವ ಘಟನೆ ಶುಕ್ರವಾರ ನಗರದ ಮೋಕಾ ರಸ್ತೆಯ ಚೈತನ್ಯ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿಯನ್ನು ಚೈತನ್ಯ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶಶಿಕುಮಾರ್ (16) ಎಂದು ಗುರುತಿಸಲಾಗಿದೆ. ಈತನು ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸುಲ್ತಾನಪುರ ಗ್ರಾಮದವನು. ಆದರೆ ಹಾರಿ ಬೀಳಲು ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಮಾರ್ಗ ಮಧ್ಯದಲ್ಲೇ ಸಾವು: ಶುಕ್ರವಾರ ಮೊಹರಂ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದುದರಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸ್ಟಡಿ ಅವರ್ನಲ್ಲಿ ಓದುವುದಕ್ಕೆ ಬಿಟ್ಟಿತ್ತು, ಈ ಸಂದರ್ಭದಲ್ಲಿ ಶಶಿಕುಮಾರ್ ವಸತಿ ನಿಲಯದ 2ನೇ ಮಹಡಿಗೆ ಹೋಗಿ ಏಕಾಏಕಿ ಹಾರಿ ಬಿದ್ದಿದ್ದಾನೆ. ಕೂಡಲೇ ಕಾಲೇಜು ಹಾಗೂ ಹಾಸ್ಟೆಲ್ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರಿಶೀಲಿಸಿ, ವಿಮ್ಸ್ಗೆ ದಾಖಲಿಸುವಂತೆ ತಿಳಿಸಿದ್ದರಿಂದ ವಿಮ್ಸ್ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಈತನು ಸಿಂಧನೂರಿನ ಮಾಂಟೆಸರಿ ಶಾಲೆಯಲ್ಲಿ ಓದುತ್ತಿರುವಾಗಲೂ ಮಹಡಿ ಮೇಲಿಂದ ಹಾರಿ ಬಿದ್ದು ಗಾಯಗೊಂಡಿದ್ದನು. ಎರಡು ಬಾರಿ ಈ ರೀತಿಯಾಗಿ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ ಎಂದು ಕಾಲೇಜಿನವರು ತಿಳಿಸಿದರು. ಕೆಳಗೆ ಬೀಳಲು ತಮಗೆ ಕಾರಣ ಗೊತ್ತಿಲ್ಲ ಎನ್ನುತ್ತಾರೆ. ಗಾಂಧಿನಗರ ಪೊಲೀಸ್ ಠಾಣೆ ಪಿಎಸ್ಐ ಚಂದನ್ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದೊಡ್ಡ ಶಬ್ದ ಬಂತು: ಚೈತನ್ಯ ಕಾಲೇಜಿನ ಸಿಬ್ಬಂದಿ ರಾಜೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಟಡಿ ಅವರ್ ಬಿಟ್ಟಾಗ ಎಲ್ಲಾ ವಿದ್ಯಾರ್ಥಿಗಳು ಓದುತ್ತಿದ್ದರು. ಶಶಿಕುಮಾರ್ ಹೊರ ಬಂದು 2ನೇ ಮಹಡಿಗೆ ಹೋಗಿ ಕೆಳಗೆ ಬಿದ್ದಾಗ ದೊಡ್ಡದಾದ ಶಬ್ದ ಬಂತು. ಕೆಳಗೆ ಬಿದ್ದಿರುವುದು ನೋಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಹಡಿಯಿಂದ ಕೆಳಗೆ ಬೀಳಲು ಕಾರಣ ತಿಳಿದು ಬಂದಿಲ್ಲ ಎನ್ನುತ್ತಾರೆ.
ಶಶಿಕುಮಾರ್ ಸಹಪಾಠಿ ಅನಿಲ್ ಮಾತನಾಡಿ, ಶಶಿಕುಮಾರ್ ಹೆಚ್ಚಾಗಿ ಓದಿನಲ್ಲಿ ಸಮಯ ಕಳೆಯುತ್ತಿದ್ದು, ನಾವು ಮಲಗಿದಾಗಲೂ ಲೈಟ್ ಹಾಕಿಕೊಂಡು ಓದುತ್ತಿದ್ದ. ಯಾರೊಂದಿಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ, ಸ್ಟಡಿ ಅವರ್ನಲ್ಲಿ ಓದುತ್ತಿದ್ದಾಗ, ಮಹಡಿ ಮೇಲಿಂದ ಕೆಳಗೆ ಬಿದ್ದಾಗ ದೊಡ್ಡದಾಗಿ ಶಬ್ದ ಕೇಳಿಸಿತು ಎಂದು ವಿವರಿಸಿದ.
ಬೆಳಗ್ಗೆ ಫೋನ್ ಮಾಡಿದ್ದ: ಶಶಿಕುಮಾರ್ ತಂದೆ ಸಿದ್ದರಾಮಪ್ಪ ಮಾತನಾಡಿ, ಶಶಿ ಬೆಳಗ್ಗೆ ಫೋನ್ ಮಾಡಿ, ಆರೋಗ್ಯ ವಿಚಾರಿಸಿದ್ದ, ಅಪ್ಪ ಫೀಜ್ ಕೊಡುವಂತೆ ಕೇಳಿದ, ಇನ್ನು ನಾಲ್ಕೈದು ದಿನ ಬಿಟ್ಟು ಕೊಡುತ್ತೇನೆ ಎಂದು ಹೇಳಿ, ಮಾಸ್ಟರ್ ಹತ್ತಿರ ಫೋನ್ ಕೊಡು ಹೇಳುತ್ತೇನೆ ಎಂದಿದ್ದರು.
ಮಾಸ್ಟರ್ ಜತೆ ಮಾತನಾಡಿದಾಗ, ಮಾಸ್ಟರ್ ಕೂಡ ಆಯ್ತು ಎಂದು ಹೇಳಿದ್ದರು. ನಂತರ ಕಾಲೇಜಿನವರು ಫೋನ್ ಮಾಡಿ ಶಶಿಕುಮಾರ್ನನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

