ರಾಯಚೂರು

20 ಕೋಟಿ ಖರ್ಚಾದರೂ ಹೊಲಕ್ಕೆ ನೀರು ಹರಿದಿಲ್ಲ

Published On :

ಸಿಂಧನೂರು: ತಾಲೂಕಿನ ಗೊರೇಬಾಳ ಪಿಕ್ಅಪ್ ಡ್ಯಾಂಗೆ 20 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಆದರೆ ಒಂದು ಎಕರೆಗೂ ನೀರು ಹರಿದಿಲ್ಲ ಎಂದು ನ್ಯಾಯವಾದಿ ಡಿ.ಎಸ್.ಕಲ್ಮಠ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಾಲುವೆಗೆ ನೀರು ಹರಿಯದಿದ್ದರೂ ಹೂಳು ತೆಗೆದಿರುವುದಾಗಿ ಹೇಳಿ ಬಿಲ್ ಪಡೆಯಲಾಗಿದೆ. ಇದಕ್ಕೆ ಸಿಂಧನೂರನ್ನು 40 ವರ್ಷಗಳ ಕಾಲ ಆಳಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಉತ್ತರಿಸಲಿ ಎಂದರು.
ಸಿಂಧನೂರು ತಾಲೂಕು ಕಳಪೆ ಕಾಮಗಾರಿಗಳ ತವರೂರಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಶೇ.90ರಷ್ಟು ಕಳಪೆ ಕಾಮಗಾರಿಗಳು ನಡೆದಿರುವುದು ಜಗಜ್ಜಾಹೀರಾಗಿದೆ. ನಗರದ ಕುಡಿವ ನೀರಿನ ಕೆರೆ ಕಟ್ಟಲು 1.3 ಕೋಟಿ ಖರ್ಚಾಗಿದೆ. ಆದರೆ ಈವರೆಗೆ ದುರಸ್ತಿಗೆ 4.5 ಕೋಟಿ ಖರ್ಚಾಗಿದೆ. ಇಷ್ಟಾದರೂ ಈ ಕೆರೆ ಯಾವಾಗ ಒಡೆಯುತ್ತದೆಯೋ ಗೊತ್ತಿಲ್ಲ ಎಂದು ಟೀಕಿಸಿದರು.
ಕಳಪೆ ಕಾಮಗಾರಿಗಳು: ಕೆಶಿಪ್ ವತಿಯಿಂದ ನಿರ್ಮಾಣವಾದ ಸಿಂಧನೂರು-ರಾಯಚೂರು ರಸ್ತೆ ಕೆಟ್ಟಿದೆ. ಎರಡೇ ವರ್ಷದಲ್ಲಿ ಒಳಚರಂಡಿ, ಪಾದಚಾರಿ ರಸ್ತೆ ಬಿದ್ದು ಹೋದವು. ಪ್ರಸ್ತುತ ಹೊಸ ಕೋರ್ಟಿನ ಗೋಡೆಗಳು ಬಿರುಕು ಬಿಟ್ಟಿವೆ. ಹಿರಿಯ ಶ್ರೇಣಿ ನ್ಯಾಯಾಲಯದ ಸಭಾಂಗಣದ ಚಾವಣಿ ನ್ಯಾಯಾಧೀಶರು ಕೂಡುವ ಸ್ಥಳದಲ್ಲೇ ಕುಸಿದು ಬಿತ್ತು. ಇದಕ್ಕೆ ಯಾರು ಹೊಣೆ ಎಂದು ಕಲ್ಮಠ ಪ್ರಶ್ನಿಸಿದರು.
ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಅಡುಗೆ ಮನೆ ದುರಸ್ತಿ ಕಾಂಕ್ರಿಟ್, ಕ್ಯೂರಿಂಗ್ ಇಲ್ಲದೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆಯುರ್ವೇದ ಆಸ್ಪತ್ರೆ ಕಟ್ಟಡ ಕಾಮಗಾರಿ 30 ದಿನಗಳಲ್ಲಿ ಲಿಂಟಲ್ ಲೆವಲ್ಲಿಗೆ ಬಂದಿದೆ. ತರಾತುರಿಯಲ್ಲಿ ಕಳಪೆ ಕಾಮಗಾರಿ ನಿರ್ವಹಿಸುತ್ತಿರುವ ಕುರಿತು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಜನಪ್ರತಿನಿಧಿಗಳಿಗೆ ನಾಚಿಕೆಯಿಲ್ಲವೇ?: ಕೆಎಸ್ಸಾರ್ಟಿಸಿ ನೂತನ ಬಸ್ ನಿಲ್ದಾಣ ಬಾದರ್ಲಿ- ನಾಡಗೌಡರ ರಾಜಕೀಯದಾಟದಲ್ಲಿ ನಲುಗಿದೆ. ಇಲ್ಲಿಯೂ ಕಾಂಕ್ರೀಟ್ ಕೆಲಸ, ಕ್ಯೂರಿಂಗ್ ಸರಿಯಾಗಿ ನಡೆದಿಲ್ಲ. ನಗರಸಭೆ ಲಕ್ಷಾಂತರ ರು. ಖರ್ಚಾದರೂ ಹೈಮಾಸ್ಟ್ ಬಲ್ಬ್ಗಳು ಬೆಳಗಲಿಲ್ಲ. ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡ ನಗರಸಭೆ ಸಿಗ್ನಲ್ಲೈಟ್ಗಳನ್ನು ಎಲ್ಲಿಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಜನರ ಹಣ ಹಿಗ್ಗಾಮುಗ್ಗಾ ಪೋಲು ಮಾಡುವ ಜನಪ್ರತಿನಿಧಿಗಳಿಗೆ ನಾಚಿಕೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.