ಜಾಗತೀಕರಣ ಪ್ರಭಾವದಿಂದ ಕನ್ನಡದ ಹಿನ್ನಡೆ: ಕಳವಳ
ರಾಯಚೂರು ನ.24
ಜಾಗತೀಕರಣದಿಂದ ಕನ್ನಡ ಭಾಷೆಗೆ ಧಕ್ಕೆಯಾಗಿದೆ. ಜತೆಗೆ ಕನ್ನಡಿಗರಲ್ಲಿನ ಸ್ವಾಭಿಮಾನದ ಕೊರತೆ, ಭಾಷೆಯೆಡೆಗಿನ ಗೌರವದ ಅಭಾವದಿಂದ ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಕಳವಳ ವ್ಯಕ್ತಪಡಿಸಿದರು.
ಅವರು ನಗರದ ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಸ್ವಾಭಿಮಾನಿ ಕನ್ನಡಗಿರ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಾಗತೀಕರಣದ ಪ್ರಭಾವದಿಂದ ಆಂಗ್ಲ ಭಾಷೆಯ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಪದ್ಧತಿ ಜಾರಿಗೆ ಬಂದಿದೆ. ಅದರಿಂದಾಗಿ ಕನ್ನಡ ಮಾಧ್ಯಮಕ್ಕೆ ಸೋಲಾಗುತ್ತಿದೆ ಎಂದರು.
ಅಗೌರವ ಸಲ್ಲದು: ಬದುಕಿಗಾಗಿ ಆಂಗ್ಲ ಭಾಷೆಯ ಕಲಿಕೆ ತಪ್ಪಲ್ಲ. ಆದರೆ ಕನ್ನಡದ ನೆಲ, ಜಲದ ಬಳಕೆ ಮಾಡುತ್ತಿರುವ ಎಲ್ಲರೂ ಕನ್ನಡಿಗರಾಗಿ ಬಾಳುವುದೂ ಅವಶ್ಯಕ. ಈ ನಿಟ್ಟಿನಲ್ಲಿ ಕನ್ನಡದ ಬಗ್ಗೆ ಅಗೌರವದಿಂದ ವರ್ತಿಸುವವರು ಗಂಟುಮೂಟೆ ಕಟ್ಟಿ ಕನ್ನಡ ನೆಲದಿಂದ ಹೊರಹೋಗಲು ಸಿದ್ಧರಾಗುವಂತೆ ಸಲಹೆ ನೀಡಿದರು. ರಾಜ್ಯದ ರೈತರ ಬದುಕು ಜಾಗತೀಕರಣ, ಕೈಗಾರಿಕೀಕರಣದಿಂದ ಸಂಕಷ್ಟಕ್ಕೆ ಸಿಲುಕುತ್ತಿದೆ. ಉದ್ಯಮಗಳ ಸ್ಥಾಪನೆ ನೆಪದಲ್ಲಿ ಫಲವತ್ತಾದ ಜಮೀನು ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಳುವ ಸರ್ಕಾರಗಳು ಮತ್ತು ವಿರೋಧ ಪಕ್ಷಗಳವರಿಗೆ ಕನ್ನಡ ಭಾಷೆಗೆ ಒದಗಿದ ದುರ್ಗತಿಯ ಕಾಳಜಿಯಿಲ್ಲ. ರಾಷ್ಟ್ರೀಯ ಸಂಪತ್ತು ಲೂಟಿ ಮಾಡುವುದು, ರೈತರ ಜಮೀನು ಕೊಳ್ಳೆ ಹೊಡೆಯುವಲ್ಲಿ ರಾಜಕೀಯ ವ್ಯಕ್ತಿಗಳು ತೊಡಗಿದ್ದಾರೆ. ಕನ್ನಡಕ್ಕಾಗಿ ಹೋರಾಡುವವರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕನ್ನಡಕ್ಕೆ 2ಸಾವಿರ ವರ್ಷದ ಇತಿಹಾಸವಿದೆ. ಇಂಥ ಸುದೀರ್ಘ ಕಾಲದ ಹಿನ್ನೆಲೆಯ ಭಾಷೆ ಬಗ್ಗೆ ಎಲ್ಲರೂ ಗೌರವ ಆದರ ಬೆಳೆಸಿಕೊಳ್ಳುವುದು ಅವಶ್ಯಕ. ಕನ್ನಡಿಗರು ಸ್ವಾಭಿಮಾನಿಗಳಾಗದ ಹೊರತು ಅನ್ಯಭಾಷೆಗಳ ದಬ್ಬಾಳಿಕೆ ನಿಲ್ಲದು. ಕನ್ನಡತನ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಕನ್ನಡ ಪರ ಸಂಘಟನೆ ಕರವೇ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪರಿಹಾರ: ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಕರವೇ ಸಂಘಟನೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅನೇಕ ಸಂದರ್ಭದಲ್ಲಿ ಯಶಸ್ಸು ಕಂಡಿದೆ. ಕೆಲ ಸಂಘಟನೆಗಳು ಕನ್ನಡ ರಕ್ಷಣೆ ಹೆಸರಿನಲ್ಲಿ ಅನ್ಯಕಾರ್ಯಗಳಲ್ಲಿ ತೊಡಗಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಗಳು ಅಡ್ಡದಾರಿ ಹಿಡಿದಲ್ಲಿ ಅಂಥ ಸಂಘಟನೆಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವ ಮೂಲಕ ಹೋರಾಟ ದಿಕ್ಕು ತಪ್ಪುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

