ಸೇನೆಯ ಎಂಜಿನಿಯರ್ ವಿಭಾಗ ಪರಿಶೀಲನೆ
ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ಅ.26
ಜಿಲ್ಲಾ ನಿರ್ಮಿತಿ ಕೇಂದ್ರದಲ್ಲಿ ನಡೆದಿರುವ 150 ಕೋಟಿ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರದಡಿ ಕೈಗೊಂಡ ಕಾಮಗಾರಿಗಳ ವಸ್ತುಸ್ಥಿತಿ ಪರಿಶೀಲನೆಗೆ ಸಿಬಿಐ ಸೂಚಿಸಿತ್ತು. ಆದರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಪರಿಶೀಲನೆಗೆ ನಿರಾಕರಿಸಿದ ಹಿನ್ನೆಲೆ ಪರ್ಯಾಯವಾಗಿ ಮಿಲಿಟರಿಯ ಎಂಜಿನಿಯರಿಂಗ್ ವಿಭಾಗ ಇಲ್ಲವೇ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಎಂಜಿನಿಯರ್ಗಳನ್ನು ಈ ಕಾರ್ಯಕ್ಕೆ ನಿಯೋಜಿಸಲು ಉದ್ದೇಶಿಸಿದ್ದಾಗಿ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ತಿಳಿಸಿದರು.
ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಮಿತಿ ಕೇಂದ್ರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ವಸ್ತುಸ್ಥಿತಿ ಮಾಹಿತಿ ಒದಗಿಸಲು ಸಿಬಿಐ ಸೂಚಿಸಿದೆ. ಅದರಂತೆ 200 ವಿವಿಧ ಕಾಮಗಾರಿಗಳ ವಸ್ತುಸ್ಥಿತಿಯ ಮಾಹಿತಿ ಸಂಗ್ರಹಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಸೇನೆಯ ಎಂಜಿನಿಯರಿಂಗ್ ವಿಭಾಗದವರು ಇಲ್ಲವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿ ವಿವಿಧ ಇಲಾಖೆಗಳ ಎಂಜಿನಿಯರುಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಆಹಾರಧಾನ್ಯ ಒದಗಿಸಲು ಸೂಚನೆ: ಮಾನವಿ ತಾಲೂಕಿನ ಹಿರೇಬಾದರದಿನ್ನಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಘಟನೆಗೆ ಸಂಬಂಧಿಸಿ ಗ್ರಾಮಕ್ಕೆ ಭೇಟಿ ನೀಡಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ದಲಿತರಿಗೆ ಆಹಾರಧಾನ್ಯ ಒದಗಿಸಲು ಸೂಚಿಸಲಾಗಿದೆ. ಹಾಗೆಯೇ ಸೂಕ್ತ ಪೊಲೀಸ್ ಕಾವಲು ಹಾಕಲಾಗಿದೆ ಎಂದು ಹೇಳಿದರು.
ಲಿಂಗಸ್ಗೂರು ತಾಲೂಕಿನ ಮುದಗಲ್ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತ ತನಿಖೆಗೆ ಲಿಂಗಸ್ಗೂರು ಸಹಾಯಕ ಆಯುಕ್ತರ ನೇತೃತ್ವದ ತನಿಖಾ ತಂಡ ರಚಿಸಿದ್ದು, ತಂಡದ ನೇತೃತ್ವವನ್ನು ಸಹಾಯಕ ಆಯುಕ್ತರಿಗೆ ನೀಡಿದ ಬಗ್ಗೆ ಆಕ್ಷೇಪ ಬಂದಿದ್ದರೂ, ಅವರನ್ನು ಬದಲಿಸುವ ಯೋಚನೆ ಜಿಲ್ಲಾಡಳಿತಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
210 ಪ್ರಕರಣ ಇತ್ಯರ್ಥ: ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿದ್ದ ಕಂದಾಯ ಇಲಾಖೆಯ ವಿವಿಧ ಪ್ರಕರಣಗಳ ವಿಚಾರಣೆ ಬಹುತೇಕ ಪೂರ್ಣಗೊಳಿಸಿದ್ದು, ಇದುವರೆಗೆ ಸುಮಾರು 210 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಪ್ರಕರಣಗಳ ವಿಲೇವಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

