ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ: ಸಚಿವ ತಂಗಡಗಿ
ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ಅ.26
ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ರೈತರಿಗೆ ನೀರೊದಗಿಸಲು ಸರ್ಕಾರ ಚಿಂತನೆ ನಡೆಸಿದ್ದು ರೈತರ ಆಶಯದಂತೆ ಹಳ್ಳದ ದಂಡೆ ಬಳಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲು ಆದ್ಯತೆ ನೀಡುವುದಾಗಿ ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ದಢೇಸುಗೂರು ಗ್ರಾಮದಲ್ಲಿ ಶನಿವಾರ ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ತುಂಗಭದ್ರಾ ರೈತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕೊಪ್ಪಳ ಜಿಲ್ಲೆಯ ಕಲ್ಗುಡಿ, ಸಿದ್ದಾಪುರ ಗ್ರಾಮಗಳ ಹಳ್ಳಗಳ ಬಳಿ ಹಾಗೂ ಸಿಂಧನೂರು ತಾಲೂಕಿನ ಸಿಂಧನೂರು, ಪೋತ್ನಾಳ ಹಳ್ಳಗಳ ಬಳಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಯೋಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸರ್ವೆ ಕಾರ್ಯ ಹಾಗೂ ವರದಿ ತರಿಸಿಕೊಂಡು ಚೆಕ್ ಡ್ಯಾಂಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ರೈತರಿಗೆ ಅನ್ಯಾಯವಗಾದು: ಜಲಾಶಯದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ 5 ಟಿಎಂಸಿ ನೀರನ್ನು ಕಾಯ್ದಿರಿಸಲು ಮನವಿ ಸಲ್ಲಿಸಿದ್ದು ಈ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒತ್ತಾಯಿಸುತ್ತೇನೆ. ಬತ್ತಕ್ಕೆ ರೈತರು 2 ಸಾವಿರ ಬೆಂಬಲ ಬೆಲೆ ಕೇಳಿದ್ದು ಈ ಬಗ್ಗೆ 15 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಖರೀದಿ ಕೇಂದ್ರಗಳ ಆರಂಭಕ್ಕೆ ಹಾಗೂ ಬೆಂಬಲ ಬೆಲೆಗೆ ಸಾವಿರ ಕೋಟಿ ಆವರ್ತ ನಿಧಿಯನ್ನು ಬಜೆಟ್ನಲ್ಲಿ ಇಟ್ಟಿದ್ದು ಈ ಬಗ್ಗೆ ರೈತರು ಗಾಬರಿಯಾಗುವುದು ಬೇಡ. ರೈತರಿಗೆ ನ್ಯಾಯಯುತ ದರದಲ್ಲಿ ಬತ್ತ ಖರೀದಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ವಿವರಿಸಿದರು.
ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಸರ್ಕಾರ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮತ್ತಿತರ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ ದೇಶಕ್ಕೆ ಅನ್ನ ನೀಡುವ ಹಾಗೂ ದೇಶದ ಬೆನ್ನೆಲುಬು ಎಂದು ರೈತನನ್ನು ಹೊಗಳುವ ಸರ್ಕಾರ ರೈತ ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸುವಲ್ಲಿ ಇಂದಿಗೂ ಎಡವಿದೆ. ಉದ್ಯೋಗ ಖಾತ್ರಿಯಂತೆ ಬೆಳೆ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ರೈತರನ್ನು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ನಿಗದಿಗಿಂತ ಕಡಿಮೆ ದರಕ್ಕೆ ಖರೀದಿ: ಸರ್ಕಾರ ಮೆಕ್ಕೆಜೋಳ, ಸೂರ್ಯಪಾನ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದ್ದರೂ ಅದರನ್ವಯ ಮಾರುಕಟ್ಟೆಯಲ್ಲಿ ಖರೀದಿ ನಡೆಯುತ್ತಿಲ್ಲ. ಸೂರ್ಯಪಾನಕ್ಕೆ ಸರ್ಕಾರ 3,600 ನಿಗದಿಪಡಿಸಿದರೂ 3,300ಕ್ಕೆ ಖರೀದಿಸಲಾಗುತ್ತಿದೆ. ಪ್ರತಿ ಬೆಳೆಯನ್ನೂ 300ರಿಂದ 400 ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ. ಕೂಡಲೇ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಬೆಳಗುರ್ಕಿ ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಿರುಗುಪ್ಪ ಮಾಜಿ ಶಾಸಕ ಚಂದ್ರಶೇಖರಯ್ಯ ಸ್ವಾಮಿ, ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಭೂಪಾಲ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ಒಗ್ಗೂಡಿ ರೈತರ ಹಿತರಕ್ಷಣೆಗಾಗಿ ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘವನ್ನು ರಚಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ರೈತರ ಸಮಸ್ಯೆಗಳಿಗೆ ಒಕ್ಕೋರಲಿನಿಂದ ಹೋರಾಡಲು ಈ ಸಂಘ ಅನುಕೂಲವಾಗಲಿದೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಶಾಸಕರಾದ ಬಿ.ಎಂ. ನಾಗರಾಜ, ಪ್ರತಾಪಗೌಡ ಪಾಟೀಲ್, ಜಿಪಂ ಸದಸ್ಯರಾದ ಚಂದುಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಗಿ, ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ ಹರೇಟನೂರು, ಉಪಾಧ್ಯಕ್ಷ ರಾಮಣ್ಣ ಹುಡಾ, ನಿರ್ದೇಶಕ ಫಾರುಕ್ಸಾಬ ಖಾಜಿ, ಚನ್ನಬಸವ ಉಪ್ಪಳ, ನಗರಸಭೆ ಅಧ್ಯಕ್ಷ ಜಾಫರ್ ಜಾಗೀರದಾರ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ದಢೇಸುಗೂರು ಗ್ರಾಪಂ ಅಧ್ಯಕ್ಷ ಯುನೂಸ್ ಪಾಷಾ, ಮುಕ್ಕುಂದಿ ಮುದೇಗೌಡರ್, ಮೋಹನಕುಮಾರ, ಬಸವಂತರಾಯ ಕುರಿ, ಮಲ್ಲನಗೌಡ ಕನ್ನಾರಿ ಪಾಲ್ಗೊಂಡಿದ್ದರು. ಚನ್ನಬಸವ ಹೊಸಳ್ಳಿ ನಿರೂಪಿಸಿದರು. ಸಿರುಗುಪ್ಪ, ಕೊಪ್ಪಳ, ಸಿಂಧನೂರು, ಮಸ್ಕಿ ಮತ್ತಿತರ ಭಾಗಗಳಿಂದ ನೂರಾರು ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

