ಪೌಷ್ಟಿಕ ಆಹಾರಕ್ಕೆ ಮಹತ್ವ ಕೊಡಿ
ಕನ್ನಡಪ್ರಭ ವಾರ್ತೆ, ರಾಯಚೂರು, ಅ.29
ಆಹಾರ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡುವ ಜತೆಗೆ ಪೌಷ್ಟಿಕ ಆಹಾರ ಪದಾರ್ಥಗಳ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ವಿ.ಪಾಟೀಲ್ ಹೇಳಿದರು.
ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆಹಾರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಆಹಾರ ಭದ್ರತೆ ತಂದುಕೊಡುವ ಕಾರ್ಯ ಈಗಾಗಲೇ ಜಾರಿಯಲ್ಲಿದೆ. ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವುದಷ್ಟೇ ಅಲ್ಲ, ಅಪೌಷ್ಟಿಕತೆ ತೊಲಗಿಸಲು ಅಗತ್ಯ ಪೌಷ್ಟಿಕ ಆಹಾರ ಉತ್ಪಾದನೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಪೌಷ್ಟಿಕ ಆಹಾರ ಉತ್ಪಾದನೆಗೆ ಮುಂದಾಗಿ: ಪೌಷ್ಟಿಕಾಂಶ ಹೊಂದಿದ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವುದು ಮತ್ತು ಬಳಕೆಗೆ ಆದ್ಯತೆ ನೀಡುವುದು ಅವಶ್ಯ. ದೇಶದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಅಪೌಷ್ಟಿಕತೆ ಸಮಸ್ಯೆ ನಿರ್ಮೂಲನೆಯಲ್ಲಿ ಸರ್ಕಾರದೊಂದಿಗೆ ಕೃಷಿ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ರೈತರು ಕೈಜೋಡಿಸಬೇಕು. ಯುವಕರು ದೇಶದ ಆಹಾರ ಭದ್ರತೆಯೊಂದಿಗೆ ಪೌಷ್ಟಿಕ ಆಹಾರ ಉತ್ಪಾದನೆಯ ಕೃಷಿಯತ್ತ ಒಲವು ತೋರಬೇಕೆಂದು ಕರೆ ನೀಡಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಜಿಲ್ಲಾ ಘಟಕ ಉಪಾಧ್ಯಕ್ಷ ಡಾ. ವಾಸುದೇವನ್ ಮಾತನಾಡಿ, ಹೊಸ ತಂತ್ರಜ್ಞಾನ, ಕೌಶಲ್ಯವನ್ನು ರೈತಾಪಿ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಪ್ರಾಮಾಣಿಕವಾಗಿ ದುಡಿಯುತ್ತಿದೆ. ಕಳೆದ 10 ವರ್ಷಗಳಿಂದ ಸಂಸ್ಥೆಯು ಈ ವೃತ್ತಿಯಲ್ಲಿದೆ ಎಂದು ಹೇಳಿದರು.
ಅನೇಕ ರೈತಪರ ಕಾರ್ಯಕ್ರಮ: ಈಗಾಗಲೇ ಕೃಷಿ ಸಂಸ್ಥೆಯಿಂದ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕಾರ್ಯಾಗಾರ, ವಿಷಯಾಧಾರಿತ ಚರ್ಚೆ, ಶಿಕ್ಷಣ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ, ಕೃಷಿ ವಿವಿ ಮತ್ತು ಇತರ ಸ್ವಯಂ ಸೇವಕರ ಸಂಘ ಮತ್ತು ಸಂಸ್ಥೆಗಳೊಂದಿಗೆ ಅನೇಕ ರೈತಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯು ಯಾವುದೇ ಲಾಭಾಂಶವಿಲ್ಲದೆ ಜಾರಿಗೆ ಬಂದ ಕೃಷಿ ತಂತ್ರಜ್ಞರ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ 3500 ಹಾಗೂ ಜಿಲ್ಲೆಯಲ್ಲಿ 175 ಸದಸ್ಯರನ್ನು ಹೊಂದಿದೆ ಎಂದು ವಿವರಿಸಿದರು.
ಆಹಾರಧಾನ್ಯ ಉತ್ಪಾದನೆಯಲ್ಲಿ ಸ್ಥಿರತೆಯಿಲ್ಲ: ಬೆಂಗಳೂರಿನ ಆಹಾರ ತಜ್ಞ ಡಾ. ಕೆ.ಸಿ. ರಘು, ಕೃಷಿ ಪ್ರಧಾನ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಸ್ಥಿರತೆ ಸಾಧಿಸುವ ಮೂಲಕ ವಿವಿಧ ಆಹಾರಧಾನ್ಯಗಳ ಆಮದು ತಡೆಯುವತ್ತ ಎಲ್ಲರೂ ಗಮನಹರಿಸಬೇಕಿದೆ. ದೇಶವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಆದರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ಥಿರತೆ ಸಾಧಿಸಿಲ್ಲ. ಹೀಗಾಗಿ ನೆರೆ ದೇಶಗಳಿಂದ ಆಹಾರಧಾನ್ಯ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಆಮದಿಗೆ ಅಧಿಕ ಹಣ ವ್ಯಯ: ದೇಶದಲ್ಲಿ ಅಪಾರ ಕೃಷಿ ಪ್ರದೇಶವಿದ್ದು, ನೀರು, ಖನಿಜ ಸಂಪತ್ತು ಹೇರಳವಾಗಿದ್ದರೂ ಗುಣಮಟ್ಟದ ಆಹಾರದ ಉತ್ಪಾದನೆಯಲ್ಲಿ ಹಿಂದೆ ಬಿದ್ದಿದ್ದು, ಅದರಿಂದ ದೇಶದ ವಿವಿಧೆಡೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ. ಅಷ್ಟೇ ಅಲ್ಲ ಕೃಷಿ ಉತ್ಪಾದನೆ ಕುಸಿತದಿಂದ ಆಹಾರಧಾನ್ಯ ಆಮದಿಗೆ ಹೆಚ್ಚಿನ ಪ್ರಮಾಣದ ಹಣ ವ್ಯಯಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಸಿದ್ಧಾರೆಡ್ಡಿ ವಹಿಸಿದ್ದರು. ಜಿಲ್ಲಾ ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ರುದ್ರೇಶಪ್ಪ, ಕೃಷಿ ವಿವಿಯ ಪ್ರಮೋದ ಕಟ್ಟಿ, ಶರಣ ಹೀರೇಗೌಡರ್, ಸಂಸ್ಥೆ ಉಪಾಧ್ಯಕ್ಷ ವಿರುಪಾಕ್ಷಪ್ಪ ಕ್ಯಾದಿಗೇರಾ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪಾಟೀಲ್, ಕೃಷಿ ವಿವಿ ನಾನಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

