ಬತ್ತ, ಹತ್ತಿ, ತೊಗರಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಒತ್ತಾಯ
ಸಿಂಧನೂರು: ಬತ್ತ, ಹತ್ತಿ ಹಾಗೂ ತೊಗರಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷ, ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ನ.2ರಿಂದ ದಢೇಸುಗೂರಿನಿಂದ ಪಾದಯಾತ್ರೆ ಆರಂಭಿಸಲಿದ್ದು ನ.7ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಬತ್ತದ ಬೆಳೆಗೆ ಕೇವಲ 1,337 ಬೆಂಬಲ ಬೆಲೆ ಘೋಷಿಸಿದೆ. ಆದರೆ ಪ್ರತಿ ಎಕರೆಗೆ 25 ಸಾವಿರ ಖರ್ಚು ತಗಲುತ್ತದೆ. ಸರ್ಕಾರ ಯಾವ ಮಾನದಂಡವನ್ನು ಆಧರಿಸಿ ಬೆಂಬಲ ಬೆಲೆ ನಿಗದಿಪಡಿಸಿದೆ ಎನ್ನುವುದೇ ಆಶ್ಚರ್ಯವಾಗಿದೆ. ಕಾರಣ ಪ್ರತಿ ಕ್ವಿಂಟಲ್‌ಗೆ 3 ಸಾವಿರ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದರು.
ನೀರು ಸ್ಥಗಿತಗೊಳಿಸಬೇಡಿ: ಡಿಸೆಂಬರ್ ತಿಂಗಳಲ್ಲಿ ಎಡದಂಡೆ ನಾಲೆಗೆ ನೀರು ಪೂರೈಕೆ ಸ್ಥಗಿತಗೊಳಿಸಿ ಜನವರಿಯಲ್ಲಿ ಹರಿಬಿಡಲಾಗುತ್ತದೆ. ಈ ವರ್ಷ ಯಾವುದೇ ಕಾರಣಕ್ಕೂ ಡಿಸೆಂಬರ್‌ನಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಬಾರದು. ಆ ಅವಧಿಯಲ್ಲಿ ನೀರು ಸ್ಥಗಿತಗೊಂಡರೆ ಎರಡೂವರೆ ಲಕ್ಷ ಎಕರೆ ಜಮೀನಿನಲ್ಲಿ ಬೆಳೆದ ಹತ್ತಿ, ಜೋಳ, ಮೆಣಸಿನಕಾಯಿ ಮತ್ತಿತರ ಬೆಳೆಗೆ ಹಾನಿಯಾಗುತ್ತದೆ ಎಂದು ಅವರು ಹೇಳಿದರು.
ಇತ್ತೀಚೆಗೆ ದಢೇಸುಗೂರಿನಲ್ಲಿ ರೈತರ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಿದ ಶಾಸಕರು ಮತ್ತು ಮಂತ್ರಿಗಳು ರಾಜ್ಯ- ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದರೂ ಸಭೆ ಮಾಡಿ ರೈತರ ಮುಂದೆ ಮೊಸಳೆ ಕಣ್ಣೀರು ಸುರಿಸುವ ಬದಲು ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕಾಗಿತ್ತು ಎಂದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಕೆ.ಕರಿಯಪ್ಪ ಟೀಕಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಮರೇಶಪ್ಪ ಮೈಲಾರ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡೆಹಾಳ, ಜಿಲ್ಲಾಧ್ಯಕ್ಷ ಸುಗೂರಯ್ಯ, ಆರ್.ಎಸ್. ಮಠ, ತಾಲೂಕಾಧ್ಯಕ್ಷ ಶರಣಪ್ಪ ಮಳ್ಳಿ, ದಲಿತ ರಕ್ಷಣಾ ವೇದಿಕೆ ವಿಭಾಗೀಯ ಅಧ್ಯಕ್ಷ ಹನುಮಂತ ಹಂಚಿನಾಳ, ಮುಖಂಡರಾದ ಮೋಸಿನ್ ಖಾದ್ರಿ ಸಾಲಗುಂದಾ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

