ವೆಂಕನಗೌಡ ನೂತನ ತಹಸೀಲ್ದಾರ್
ಸಿಂಧನೂರು: ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಹೊಸಕೋಟೆಗೆ ವರ್ಗವಾಗಿದ್ದ ನೂತನ ತಹಸೀಲ್ದಾರರಾಗಿ ವೆಂಕನಗೌಡ ಆರ್. ಪಾಟೀಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಶಹರ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಎನ್.ಆರ್. ಅವರಿಗೆ ಮಾನವಿ ತಾಲೂಕಿನ ಸಿರವಾರ ಪೊಲೀಸ್ ಠಾಣೆಗೆ ವರ್ಗವಾಗಿದೆ. ತಾಲೂಕಿನ ಬಳಗಾನೂರ ಠಾಣೆಯ ಪಿಎಸ್ಐ ಬಾಳನಗೌಡ ಅವರನ್ನು ಶಹರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಪೌರಾಯುಕ್ತ ನಾಸೀರ್ ಅಲಿ ಅವರನ್ನು ಶಹಬಾದ್ಗೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ರಮೇಶ ವಟಗಲ್ ಎನ್ನುವವರನ್ನು ಪೌರಾಯುಕ್ತರನ್ನಾಗಿ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಹಾಗೆಯೇ ಬಿಇಒ ವೃಷಭೇಂದ್ರಯ್ಯಸ್ವಾಮಿ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದೆ. ಒಂದೇ ದಿನದಲ್ಲಿ ನಾಲ್ವರ ಅಧಿಕಾರಿಗಳು ವರ್ಗವಾಗಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಸಂಘಟನೆ ವಿರುದ್ಧ ಸುಳ್ಳು ಆರೋಪ: ಪ್ರತಿಭಟನೆ
ಮಸ್ಕಿ: ಜಯ ಕರ್ನಾಟಕ ಸಂಘಟನೆ ವಿರುದ್ಧ ಸುಳ್ಳು ಆರೋಪ ಮಾಡಿದ ಲಿಂಗಸ್ಗೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ನಾಯಕ ಮತ್ತು ಪಿಡಿಒ ಸಂಘದ ಅಧ್ಯಕ್ಷ ಸುಶೀಲ್ ಕುಮಾರ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಂದಾಯ ನಿರೀಕ್ಷಕರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಅನೇಕ ಜನಪರ ಹೋರಾಟಗಳನ್ನು ಮಾಡುತ್ತಿರುವ ಸಂಘಟನೆ ಜಿಲ್ಲೆ ಜನರ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದೆ. ಮೂಲಸೌಲಭ್ಯ, ವಿವಿಧ ಇಲಾಖೆಗಳಲ್ಲಿನ ಅಕ್ರಮಗಳ ವಿರುದ್ಧ ಹೋರಾಟ ಮತ್ತಿತರೆ ಸಮಾಜಮುಖಿ ಕಾರ್ಯ ಮಾಡುತ್ತಿರುವ ಸಂಘಟನೆ ವಿರುದ್ಧ ನೌಕರರ ಸಂಘದವರು ಮಾಡಿದ ಆರೋಪ ಸತ್ಯಕ್ಕೆ ದೂರವಾದುದಾಗಿದೆ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ಸಂಘಟನೆಯ ಕಾರ್ಯ ಸಹಿಸದ ನೌಕರರು ಸಂಘಟನೆಯ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆಯ ಮಸ್ಕಿ ಘಟಕದ ಅಧ್ಯಕ್ಷ ಯಮನೂರು ಒಡೆಯರ್ ಒತ್ತಾಯಿಸಿದ್ದಾರೆ.
ಈ ಸಂದರ್ಭ ಕಿರಣ್ ಮುರಾರಿ, ಮಲ್ಲಪ್ಪ ಸಾನಬಾಳ, ಬಸವರಾಜ ಕೆಳಗೇರಿ, ಗಂಗಾಧರ ಮುರಾರಿ, ಸಿದ್ದು ಮುರಾರಿ, ರಾಮು ಆಟೋ, ಆರ್. ನದಾಫ್, ಎಸ್.ಮಲ್ಲಿಕ್, ನಾಗರಾಜ, ದುರ್ಗಸಿಂಗ್, ಶಿವು ಇತರರು ಇದ್ದರು.
ಅಂತಾರಾಜ್ಯ ಕ್ರಿಕೆಟ್
ಪಂದ್ಯಾವಳಿಗೆ ಆಯ್ಕೆ
ರಾಯಚೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೆ.5ರಿಂದ 7ರವರೆಗೆ ನಡೆಯಲಿರುವ 14 ವರ್ಷದೊಳಗಿನವರ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ನಗರದ ಐವರು ಕ್ರಿಕೆಟಿಗರು ಆಯ್ಕೆಯಾಗಿದ್ದಾರೆಂದು ಸಿಟಿ ಇಲೆವನ್ ಕ್ರಿಕೆಟ್ ಕ್ಲಬ್ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕ್ಲಬ್ನ ಕಾರ್ಯದರ್ಶಿ ಸುಜಿತ್ ಬೊಹರಾ, ಕ್ರಿಕೆಟಿಗರಾದ ತಿಪ್ಪಾರೆಡ್ಡಿ, ವಿಜಯ ರೆಡ್ಡಿ, ರವಿರಾಜ್, ನಿಖಿಲ್ ಹಾಗೂ ನಿರಂಜನ್ ಅವರು ಆಯ್ಕೆಯಾಗಿದ್ದು ಇವರು ನಗರದ ಪ್ರಕಾಶ್ ಕ್ರಿಕೆಟ್ ಅಕಾಡೆಮಿ ಮತ್ತು ಸಿಟಿ ಇಲೆವನ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿದ್ದು, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೋಬಳಿಮಟ್ಟದ
ಕ್ರೀಡಾಕೂಟ
ರಾಯಚೂರು: ನಗರದ ಲಯನ್ಸ್ ಶಾಲೆಯಲ್ಲಿ ಈಚೆಗೆ ಹಾಷ್ಮಿಯಾ ವಲಯದ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟಕ್ಕೆ ಬಿಇಒ ಮಲ್ಲಿಕಾರ್ಜುನ ಚಾಲನೆ ನೀಡಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ನಗರಸಭೆ ಸದಸ್ಯೆ ಲಲಿತಾ ಸೋಮಶೇಖರ್ ಕ್ರೀಡಾಕೂಟ ಉದ್ಘಾಟಿಸಿದರು. ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಶರಣಭೂಪಾಲ್ ನಾಡಗೌಡ, ಅಧ್ಯಕ್ಷ ಶಿವಪ್ರತಾಪ್, ಬಸವರಾಜ ಬೋರೆಡ್ಡಿ, ಮುಖ್ಯಗುರು ಸರ್ವಮಂಗಳ, ಎ. ಗುಂಡಪ್ಪ, ಶ್ರೀನಿವಾಸ ನಂದಾಪೂರ ಮತ್ತಿತರರಿದ್ದರು.
ಜೀತದಾಳುಗಳ ಸಮೀಕ್ಷೆ ಪ್ರಾರಂಭ
ಶಹಾಪುರ: ಕರ್ನಾಟಕವನ್ನು ಜೀತ ವಿಮುಕ್ತಿ ಮಾಡುವ ಉದ್ದೇಶದಿಂದ ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿ ಕಾರ್ಮಿಕರ ಒಕ್ಕೂಟದ ಸಹಭಾಗಿತ್ವದಲ್ಲಿ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಸಮೀಕ್ಷೆ ಆರಂಭಿಸಲಾಗಿದೆ.
ಆಯಾ ಗ್ರಾಪಂ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ಜೀವಿಕ ಜೀತ ವಿಮುಕ್ತಿಯ ಸಂಚಾಲಕ ನಿಂಗಣ್ಣಾ ಕೊಂಬಿನೋರ್ ನೇತೃತ್ವದಲ್ಲಿ ಸಮೀಕ್ಷೆ ಪ್ರಕ್ರಿಯೆ ನಡೆದಿದೆ. ತಾಲೂಕಿನ ಅಣಬಿ, ಶಿರವಾಳ ಗ್ರಾಮದಲ್ಲಿ ಪರಿಶೀಲನೆ ನಡೆಸಲಾಯಿತು. ಸಮೀಕ್ಷೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೊಂಬೆನೋರ್, ಜೀತ ಪದ್ಧತಿ ಗ್ರಾಮೀಣ ಭಾಗದಲ್ಲಿ ಹಾಗೆಯೇ ಮುಂದುವರೆದಿದೆ. ಅಣಬಿ, ಶಿರವಾಳದಲ್ಲಿ ಕೆಲವರನ್ನು ಗುರುತಿಸಲಾಗಿದ್ದು, ಅವರಿಗೆ ಪುನರ್ವಸತಿ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ತಾಲೂಕಿನಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿದೆ. ಎಲ್ಲರ ಸಹಕಾರ, ಸರ್ಕಾರದ ನೆರವಿನಲ್ಲಿ ಈ ಪದ್ಧತಿಯನ್ನು ಸಂಪೂರ್ಣ ಹೋಗಲಾಡಿಸಲು ಸಾಧ್ಯವಾದ ಪ್ರಯತ್ನ ಹಾಕುವುದಾಗಿ ತಿಳಿಸಿದರು.
ಅಪರಿಚಿತ ಮಹಿಳೆ ಶವ ಪತ್ತೆ
ರಾಯಚೂರು: ಮಾನವಿ ತಾಲೂಕಿನ ರಾಧಾಕೃಷ್ಣ ಕ್ಯಾಂಪಿನ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯ ಉಪಕಾಲುವೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮೃತಳು 30-35 ವರ್ಷ ವಯಸ್ಸಿನವಳಾಗಿದ್ದು, ಶವ ಕಾಲುವೆ ನೀರಿನಲ್ಲಿ ತೇಲಿಬಂದಿದೆ. ಹಣೆಯ ಮೇಲೆ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ. ಈ ಕುರಿತು ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ದೂರಿದ್ದಾರೆ. ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮದ್ಯ ವ್ಯಸನಿ ಆತ್ಮಹತ್ಯೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ಮುದಗಲ್ ಗ್ರಾಮದ ಹಳೆಪೇಟೆಯಲ್ಲಿ ವ್ಯಕ್ತಿಯೊಬ್ಬ ಮದ್ಯ ಸೇವನೆಗೆ ಹಣ ನೀಡದ್ದರಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಮಹೆಬೂಬ್ ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ಮದ್ಯ ಸೇವನೆಗೆ ತನ್ನ ಹೆಂಡತಿಯನ್ನು ಹಣ ಕೇಳಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದರಿಂದ ಬೇಸತ್ತ ಆತ ತನ್ನ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟ ಗಾಯಗಳಿಂದ ಬಳಲಿದಾಗ ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಆತ ಸಾವಿಗೀಡಾಗಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿವೈಎಫ್ಐ ಪ್ರಮುಖ ಶಿವರಾಂ ನಿಧನ
ರಾಯಚೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮಾಜಿ ರಾಜ್ಯ ಕಾರ್ಯದರ್ಶಿ ಎಸ್.ಶಿವರಾಂ ಅವರು ಸೆ.1ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಸಂಘಟನೆ ಪ್ರಕಟಣೆ ತಿಳಿಸಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಸೇರಿ ಅಪಾರ ಬಂಧುಗಳನ್ನಗಲಿದ್ದಾರೆ. ಇವರು 1980ರಲ್ಲಿ ಡಿವೈಎಫ್ಐ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಸಂಚರಿಸಿ ಸಂಘಟನೆ ಬಲಪಡಿಸಲು ಶ್ರಮಿಸಿದ್ದರು. ಸೋವಿಯತ್ ರಷ್ಯಾದಲ್ಲಿ ನಡೆದ ಯುವಜನೋತ್ಸವದಲ್ಲಿ ಪಾಲ್ಗೊಂಡಿದ್ದರು. ಗೌರವ: ಮೃತ ಡಿವೈಎಫ್ಐ ಪ್ರಮುಖ ಶಿವರಾಂ ಅವರ ಪಾರ್ಥೀವ ಶರೀರಕ್ಕೆ ನಗರದ ಪ್ರಮುಖರಾದ ಚಂದ್ರಶೇಖರ್ ಬಾಳೆ, ರಾಘವೇಂದ್ರ ಕುಷ್ಟಗಿ, ರಾಮನಗೌಡ ಜಾಲಿಬೆಂಚಿ, ಜೆ.ಎಂ. ಚೆನ್ನಬಸಯ್ಯ, ಕೆ.ಜಿ. ವೀರೇಶ್, ನಾಗೇಂದ್ರ, ಕೆ.ಮಲ್ಲೇಶಪ್ಪ ಸೇರಿ ಅನೇಕರು ಗೌರವ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

