ವಕ್ಫ್ ಆಸ್ತಿ ಸಮೀಕ್ಷೆಗೆ ಮಾರ್ಚ್- 2014ರ ಗಡುವು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಸೆ.11
ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಮೀಕ್ಷೆಯನ್ನು 1992ರಿಂದ ಪ್ರಾರಂಭಿಸಲಾಗಿದ್ದು, ಈವರೆಗೆ ಪೂರ್ಣಗೊಂಡಿಲ್ಲ. ಎಲ್ಲ ಆಸ್ತಿಗಳ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಮೂಲಕ ಕೈಗೊಳ್ಳುವ ಮೂಲಕ 2014ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಪೌರಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಗುಲ್ಬರ್ಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ವಕ್ಫ್ ಆಸ್ತಿಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸೆಂಬರ್ ಅಂತ್ಯದೊಳಗೆ ಅಧಿಸೂಚನೆ ಹೊರಡಿಸಿ: ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳ ಸಮೀಕ್ಷೆ ಶೇ.50ರಷ್ಟು ಪೂರ್ಣಗೊಂಡಿದ್ದು, ತಕರಾರು ಇಲ್ಲದ ಆಸ್ತಿಗಳನ್ನು ಕಾಯಂಗೊಳಿಸಲು ಕಂದಾಯ ಇಲಾಖೆಯಿಂದ ಡಿಸೆಂಬರ್ ಅಂತ್ಯದೊಳಗೆ ಗೆಝೇಟ್ ಅಧಿಸೂಚನೆ ಹೊರಡಿಸಬೇಕೆಂದು ತಿಳಿಸಿದರು.
ಗುಲ್ಬರ್ಗ ಜಿಲ್ಲೆಯಲ್ಲಿ ಒಟ್ಟು 3,790 ವಕ್ಫ್ ಆಸ್ತಿಗಳಿದ್ದು ಈ ಪೈಕಿ 3,435 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಪೈಕಿ 1,889 ಆಸ್ತಿಗಳನ್ನು ಕಾಯಂಗೊಳಿಸಲಾಗಿದ್ದು, ಉಳಿದ ಸಮೀಕ್ಷೆಯ ವಿವರಗಳು ತಹಸೀಲ್ದಾರರಲ್ಲಿ ಬಾಕಿ ಉಳಿದಿವೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 2,553 ವಕ್ಫ್ ಆಸ್ತಿಗಳಿದ್ದು, ಈ ಪೈಕಿ 1,532 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಎಲ್ಲ ಆಸ್ತಿಗಳ ವಿವರಗಳು ತಹಸೀಲ್ದಾರರಲ್ಲಿ ಬಾಕಿ ಉಳಿದಿವೆ. ಯಾದಗಿರಿಯಲ್ಲಿ 960 ವಕ್ಫ್ ಆಸ್ತಿಗಳಿದ್ದು ಈ ಪೈಕಿ 682 ಆಸ್ತಿಗಳ ಸಮೀಕ್ಷೆ ಕೈಗೊಂಡಿದ್ದು, ವಿವರಗಳನ್ನು ತಹಸೀಲ್ದಾರರು ಕಾಯಂಗೊಳಿಸಿದ್ದಾರೆ.
ಅದೇ ರೀತಿ ಬೀದರ್ನಲ್ಲಿ ಒಟ್ಟು 2,603 ಆಸ್ತಿಗಳಿದ್ದು, 1,032 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಪೈಕಿ 203 ಆಸ್ತಿಗಳನ್ನು ಕಾಯಂಗೊಳಿಸಲಾಗಿದ್ದು, ಇನ್ನುಳಿದ ಆಸ್ತಿಗಳ ವಿವರಗಳು ತಹಸೀಲ್ದಾರರಲ್ಲಿ ಬಾಕಿ ಉಳಿದಿವೆ.
ಬಳ್ಳಾರಿ ಜಿಲ್ಲೆಯಲ್ಲಿ 836 ಆಸ್ತಿಗಳಿದ್ದು ಈ ಪೈಕಿ 446 ಆಸ್ತಿಗಳ ಸಮೀಕ್ಷೆ ಕೈಗೊಂಡು ತಹಸೀಲ್ದಾರರಿಗೆ ಕಾಯಂಗೊಳಿಸಲು ಸಲ್ಲಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 1,188 ಆಸ್ತಿಗಳ ಪೈಕಿ 189 ಆಸ್ತಿಗಳ ಸಮೀಕ್ಷೆ ಕೈಗೊಂಡು 101 ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ. 88 ಆಸ್ತಿಗಳ ವಿವರಗಳು ತಹಸೀಲ್ದಾರರಲ್ಲಿ ಬಾಕಿ ಉಳಿದಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 744 ಆಸ್ತಿಗಳ ಪೈಕಿ 450 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಎಲ್ಲ ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ.
ಪ್ರತಿ ತಿಂಗಳು ವರದಿ ಸಲ್ಲಿಸಿ: ಹಾವೇರಿ ಜಿಲ್ಲೆಯಲ್ಲಿ 1,762 ಆಸ್ತಿಗಳ ಪೈಕಿ 693 ಆಸ್ತಿಗಳ ಸಮೀಕ್ಷೆ ಕೈಗೊಂಡಿದ್ದು, ಈ ಪೈಕಿ 553 ಆಸ್ತಿಗಳನ್ನು ಕಾಯಂಗೊಳಿಸಲಾಗಿದೆ. ಉಳಿದಿರುವ ಎಲ್ಲ ಆಸ್ತಿಗಳ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಿರುವ ಕಾರ್ಯಪಡೆಯು ಪ್ರತಿ ತಿಂಗಳು ಸಭೆ ಸೇರಿ ಪ್ರಗತಿ ವಿವರವನ್ನು ಚರ್ಚಿಸಿ ವರದಿಯನ್ನು ಸಲ್ಲಿಸಬೇಕೆಂದು ಜಿಲ್ಲಾ ಸಚಿವರು ತಿಳಿಸಿದರು.
ಅಲ್ಪಸಂಖ್ಯಾತರಿಗಾಗಿ ವಸತಿ ನಿಲಯ ಮತ್ತು ಮೊರಾರ್ಜಿ ದೇಸಾಯಿ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ 65 ಕೋಟಿ ಅನುದಾನ ನೀಡಿದೆ. ಈ ಹಾಸ್ಟೆಲ್ಗಳಿಗೆ ಸರ್ಕಾರಿ ನಿವೇಶನಗಳನ್ನು ಜಿಲ್ಲಾಧಿಕಾರಿಗಳು ಒದಗಿಸಬೇಕು. ಸರ್ಕಾರಿ ನಿವೇಶನಗಳು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಸ್ಥಳವನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಮಟ್ಟದ ಸಮಿತಿಯಿಂದ ಶಿಫಾರಸ್ಸು ಮಾಡಬೇಕೆಂದು ಸೂಚಿಸಿದರು.
ಗುಲ್ಬರ್ಗದಲ್ಲಿ ಹಜ್ ಭವನ: ಗುಲ್ಬರ್ಗ ನಗರದಲ್ಲಿ ಸರ್ಕಾರವು ಹಜ್ ಭವನ ನಿರ್ಮಿಸಲು ಉದ್ದೇಶಿಸಿದ್ದು, ವಿಮಾನ ನಿಲ್ದಾಣದ ಹತ್ತಿರ 5 ಎಕರೆ, ಮೊರಾರ್ಜಿ ದೇಸಾಯಿ ಶಾಲೆಗೆ 5 ಎಕರೆ ಭೂಮಿಯನ್ನು ನೀಡಬೇಕು. ಜಿಲ್ಲೆ ಮತ್ತು ತಾಲೂಕು ಮಟ್ಟಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಕೇಂದ್ರಗಳಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ನಿಗಮದ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಅಲ್ಪಸಂಖ್ಯಾತರ ಯೋಜನೆಗಳ ಪೂರ್ಣ ವಿವರವನ್ನು ನೀಡುವ ಕೇಂದ್ರವನ್ನು ಸ್ಥಾಪಿಸಲು ನಿವೇಶನದ ಅಗತ್ಯವಿದ್ದು, ಜಿಲ್ಲಾಧಿಕಾರಿಗಳು ನಿವೇಶನಗಳನ್ನು ಒದಗಿಸಬೇಕೆಂದು ಹೇಳಿದರು.
ಪ್ರತಿ ಬ್ಲಾಕಿಗೆ 10 ಕೋಟಿ: ಅಲ್ಪಸಂಖ್ಯಾತರ ಎಂಎಸ್ಡಿಪಿ ಯೋಜನೆಯ 11ನೇ ಪಂಚವಾರ್ಷಿಕ ಯೋಜನೆಯಡಿ ಬೀದರ್, ಗುಲ್ಬರ್ಗ, ಯಾದಗಿರಿಗಳನ್ನು ಆಯ್ಕೆ ಮಾಡಲಾಗಿತ್ತು. ಈಗ ಪ್ರಾರಂಭವಾಗಿರುವ 12ನೇ ಪಂಚವಾರ್ಷಿಕ ಯೋಜನೆಯಡಿ ಬ್ಲಾಕುಗಳನ್ನಾಗಿ ಗುರುತಿಸಿ ರಾಜ್ಯದ ಒಟ್ಟು 11 ಬ್ಲಾಕುಗಳನ್ನು ಆಯ್ಕೆ ಮಾಡಲಾಗಿದೆ. ಶೇ. 25ರಷ್ಟು ಅಲ್ಪಸಂಖ್ಯಾತರಿರುವ ಪ್ರದೇಶವನ್ನು ಗುರುತಿಸಿ ಬ್ಲಾಕುಗಳನ್ನಾಗಿ ರಚಿಸಬೇಕು. ಗುಲ್ಬರ್ಗ ನಗರದಲ್ಲಿ ಮಹಾನಗರ ಪಾಲಿಕೆಯ 55 ವಾರ್ಡುಗಳನ್ನು ಮೂರು ಬ್ಲಾಕುಗಳನ್ನಾಗಿ ಹಾಗೂ ಎಲ್ಲ ತಾಲೂಕಿನ ನಗರಸಭೆ, ಪುರಸಭೆಗಳನ್ನು ಬ್ಲಾಕುಗಳನ್ನಾಗಿ ರಚಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದಲ್ಲಿ ಪ್ರತಿ ಬ್ಲಾಕಿಗೆ ಮೂಲ ಸೌಲಭ್ಯ ಹಾಗೂ ಶಿಕ್ಷಣಕ್ಕಾಗಿ 10 ಕೋಟಿಯನ್ನು ಕೇಂದ್ರ ಸರ್ಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ವಕ್ಫ್ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಅನಿಲಕುಮಾರ್, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಆರ್.ಅಬ್ದುಲ್ ರಿಯಾಜ್ ಖಾನ್, ಅಲ್ಪಸಂಖ್ಯಾತರ ನಿರ್ದೇಶಕ ಅಕ್ರಂ ಪಾಶಾ, ಗುಲ್ಬರ್ಗ ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ, ಬೀದರ್ ಜಿಲ್ಲಾಧಿಕಾರಿ ಪಿ.ಸಿ. ಜಾಫರ್, ರಾಯಚೂರು ಡಿಸಿ ಎಸ್.ಎನ್.ನಾಗರಾಜ , ಯಾದಗಿರಿ ಜಿಲ್ಲಾಧಿಕಾರಿ ಜಮಾದಾರ, ವಿಭಾಗ ಮಟ್ಟದ ಅಧಿಕಾರಿಗಳು ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

