ಕ್ರೀಡೆ: ಅನಿಕೇತನ ಕಾಲೇಜು ಪ್ರಥಮ
ಸಿಂಧನೂರು: ಪದವಿಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಅನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಮುಖ 3 ಆಟಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿನಿಯರ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಬಾಲಕರ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಬಾಲಕರ ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ವೈಯಕ್ತಿಕ ಆಟಗಳಲ್ಲಿ ಅನೇಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವೈ.ಎಸ್. ರಕ್ಕಸಗಿ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಿ.ಎಚ್. ಕಂಬಳಿ, ಪ್ರಾಚಾರ್ಯ ವೈ.ಎಸ್.ರಕ್ಕಸಗಿ, ಉಪನ್ಯಾಸಕರಾದ ತಿಮ್ಮಣ್ಣ ರಾಮತ್ನಾಳ, ಗ್ಯಾನಪ್ಪ ಕನ್ನಪೇಟೆ, ನಾಗರಾಜ ಮುಕ್ಕುಂದ, ಚಿದಾನಂದಪ್ಪ, ಅಯ್ಯಣ್ಣ ಬಡಿಗೇರ, ಹನುಮೇಶ, ಬಸವರಾಜ ಜವಳಗೇರಾ, ಗುಂಡಮ್ಮ, ಚಂದ್ರಶೇಖರ ಹಿರೇಮಠ, ಪ್ರವೀಣ, ರಾಮಣ್ಣ, ಸಹಾಯಕಿ ಹುಸೇನಮ್ಮ, ಕ್ರೀಡಾ ತರಬೇತಿದಾರ ಶೇಖರ ಯರದಿಹಾಳ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.
ಮ್ಯಾನೇಜ್ಮೆಂಟ್ ಫೆಸ್ಟ್ನಿಂದ ಕೌಶಲ್ಯವೃದ್ಧಿ
ಸಿಂಧನೂರು: ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಮ್ಯಾನೇಜ್ಮೆಂಟ್ ಫೆಸ್ಟ್ ಪೂರಕವಾಗಲಿದೆ ಎಂದು ಕಾರ್ಪೋರೇಶನ್ ಬ್ಯಾಂಕಿನ ವ್ಯವಸ್ಥಾಪಕ ಸಂತೋಷಕುಮಾರ ಹೇಳಿದರು.
ನಗರದ ಸಂಕೇತ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರ್ ಕಾಲೇಜ್ ಮ್ಯಾನೇಜ್ಮೆಂಟ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯದ ಕೊರತೆ ಕಂಡುಬರುತ್ತಿದೆ. ಅವುಗಳ ವೃದ್ಧಿಗೆ ನಿರಂತರವಾಗಿ ಇಂತಹ ಫೆಸ್ಟ್ ಮಾಡಬೇಕಾಗಿದೆ. ಫೈನಾನ್ಸ್, ಮಾರ್ಕೆಟಿಂಗ್, ಕಾರ್ಪೋರೇಟ್ ಅಫೇರ್ಸ್ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯದು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಫೈನಾನ್ಸ್, ಮಾರ್ಕೆಟಿಂಗ್ ಬಗ್ಗೆ ಕೇವಲ ಪಾಠಗಳನ್ನು ಮಾಡಿದರೆ ಸಾಲದು. ಅದಕ್ಕೆ ಪೂರಕವಾಗಿ ಸಮಾಜದಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆ ತಿಳಿವಳಿಕೆ ಅಗತ್ಯ. ಸಂಕೇತ್ ಕಾಲೇಜಿನ ರೀತಿಯಲ್ಲಿ ಎಲ್ಲ ವಾಣಿಜ್ಯ ವಿಭಾಗಗಳನ್ನು ಹೊಂದಿರುವಂತಹ ಕಾಲೇಜುಗಳು ಮ್ಯಾನೇಜ್ಮೆಂಟ್ ಫೆಸ್ಟ್ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಕೇತ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಎಸ್.ಅನಿಲ್ರಾಜ್, ಎಕ್ಸಿಸ್ ಬ್ಯಾಂಕಿನ ಸೇಲ್ಸ್ ವ್ಯವಸ್ಥಾಪಕ ನಾಗರಾಜ, ರಾಜಕುಮಾರ ಇದ್ದರು. ಮ್ಯಾನೇಜ್ಮೆಂಟ್ ಫೆಸ್ಟ್ನಲ್ಲಿ ದುದ್ದುಪೂಡಿ ಕಾಲೇಜ್, ಸರ್ಕಾರಿ ಮಹಾವಿದ್ಯಾಲಯ, ಶಂಕರ್ ಟ್ರಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ರೀಡಾಪಟುಗಳಿಗೆ ಅಗೌರವ; ಆಕ್ರೋಶ
ಸಿಂಧನೂರು: ಜಿಲ್ಲಾ ಪಂಚಾಯ್ತಿ ರಾಯಚೂರು, ತಾಲೂಕ ಕ್ರೀಡಾಂಗಣ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಕ್ರೀಡಾಂಗಣದ ಉದ್ಘಾಟನೆ ಕ್ರೀಡಾಪಟುಗಳನ್ನು ಆಹ್ವಾನಿಸದೆ ಜಿಲ್ಲಾಡಳಿತ ಕ್ರೀಡಾಪಟುಗಳನ್ನು ಅಗೌರವಿಸಿದೆ ಎಂದು ನಗರಸಭೆ ಸದಸ್ಯ ಹಾಗೂ ಕ್ರಿಕೆಟ್ ಝೋನ್ ಸಮಿತಿ ಸದಸ್ಯ ಚಂದ್ರಶೇಖರ ಮೈಲಾರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಯಾಮೊಬ್ಬ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ ನಾಡಗೌಡ, ಎಲ್ಲಾ ನಗರಸಭೆ ಸದಸ್ಯರನ್ನು ಒಳಗೊಂಡು ನಗರಸಭೆ ಸದಸ್ಯರನ್ನು ಮತ್ತು ಹಿರಿಯ ಕ್ರೀಡಾಪಟುಗಳಿಗೆ ಆಹ್ವಾನಿಸಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕಿಸದೆ ಜನಪ್ರತಿನಿಧಿಗಳಿಗೆ ಅಪಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕ್ರಮ ಎಂದು ಕಂಡುಬರುತ್ತದೆ. ಶಾಸಕ ಹಂಪನೌಡ ಬಾದಲ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಮೀನು ಹಕ್ಕು ಪತ್ರ ವಿತರಣೆಗೆ ಆಗ್ರಹ
ರಾಯಚೂರು: ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಮಾದಿಗ ದಂಡೋರಾದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಚೆಗೆ ದೂರು ಸಲ್ಲಿಸಿರುವ ಸಂಘಟನೆಯ ಪ್ರಮುಖರು, ತಾಲೂಕಿನ ಏಗನೂರು ಗ್ರಾಮದ ಸರ್ಕಾರಿ ಜಮೀನು ಸರ್ವೇ ನಂಬರ್ 117,162,198 ರಿಂದ 203,229ರಲ್ಲಿ ಕಳೆದ ಅನೇಕ ದಶಕಗಳಿಂದ ಭೂರಹಿತರು ಕೃಷಿ ಕಾರ್ಯದಲ್ಲಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸಾಗುವಳಿ ಜಮೀನಿನ ಹಕ್ಕುಪತ್ರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನಾಗಿಲ್ಲ. ಆದ್ದರಿಂದ ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರುದ್ರಭೂಮಿಗೆ ಮಂಜೂರು ಮಾಡುವಂತೆ ಒತ್ತಾಯಿಸಿದರು. ಮಹಿಳಾ ಶೌಚಾಲಯ ನಿರ್ಮಾಣ ಮಾಡುವಂತೆ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ನರಸಪ್ಪ ದಂಡೋರಾ, ಜಿಲ್ಲಾ ಕಾರ್ಯದರ್ಶಿ ಆನಂದ ಏಗನೂರು, ವೆಂಕಟೇಶ ಏಗ ನೂರು, ವಿಜಯರಾಣಿ ಸಿರವಾರ, ಪ್ರಭುರಾಜ್ ಮರ್ಚಟ್ಹಾಳ್,ರಾಮಚಂದ್ರ, ಸುನೀಲ್ ಕುಮಾರ್ ಇದ್ದರು.
ಪೋತ್ನಾಳದಲ್ಲಿ ಇಂದು ಶಿಕ್ಷಕರ ದಿನಾಚರಣೆ
ರಾಯಚೂರು: ಮಾನವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದಿಂದ ಸೆ.15ರಂದು ಶಿಕ್ಷಕರ ದಿನಾಚರಣೆ ಆಯೋಜಿಸಲಾಗಿದೆ.
ಈ ಕುರಿತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಬಲ್ಲಟಗಿ ಪ್ರಕಟಣೆ ನೀಡಿದ್ದು, ಅಂದು ಪೋತ್ನಾಳ ಗ್ರಾಮದ ಎಸ್.ಎ. ಚಿತ್ರಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮಾನ್ವಿ ಕಲ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸುವರು. ಮಾನವಿ ಶಾಸಕ ಹಂಪಯ್ಯನಾಯಕ ಉದ್ಘಾಟಿಸುವರು. ಮುಖಂಡರು, ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

