ರಾಯಚೂರು

ಶಾಂತಿನಗರವೆಂದು ಘೋಷಣೆ, ಅನುಮಾನ ಬೇಡ: ನಾಡಗೌಡ

Published On :

ಸಿಂಧನೂರು: ತಾಲೂಕಿನ ಹಂಚಿನಾಳಕ್ಯಾಂಪನ್ನು ಈಗಾಗಲೇ ಸರ್ಕಾರ ಶಾಂತಿನಗರವೆಂದು ಘೋಷಿಸಿ ಆದೇಶ ಹೊರಡಿಸಿದೆ. ಆದರೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ವಿನಾಕಾರಣ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಶಾಂತಿನಗರದಲ್ಲಿ (ಹಂಚಿನಾಳಕ್ಯಾಂಪ್) ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಹೊಸ ಜನಾದೇಶದನ್ವಯ ಹಂಪನಗೌಡ ಬಾದಲರ್ ಶಾಸಕರಾದ ಮೇಲೆ ತಾವು ಆರು ತಿಂಗಳ ಕಾಲ ಮಾತನಾಡಬಾರದು ಎಂದು ತೀರ್ಮಾನಿಸಿದ್ದೆ ಆದರೆ ಕಾರ್ಯಕರ್ತರ ಆಶಯದನ್ವಯ ಸುದ್ದಿಗೋಷ್ಠಿಯನ್ನು ಕರೆದಿದ್ದೇನೆ. ವಿನಾಕಾರಣ ಶಾಂತಿನಗರದ ವಿಚಾರವನ್ನು ಇಲ್ಲಿನ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಮಾಡುತ್ತಿದ್ದಾರೆ.
ರಾಜಕೀಯ ಬೇಡ: ಸರ್ಕಾರದ ಆದೇಶ ಸಂಖ್ಯೆ ಆರ್‌ಡಿಜೆ ಬಿಎಚ್‌ಯುಡಿ ದಿ. 31-12-2012ರನ್ವಯ ಹಂಚಿನಾಳಕ್ಯಾಂಪನ್ನು ಶಾಂತಿನಗರವನ್ನಾಗಿ ಘೋಷಣೆ ಮಾಡಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಪಹಣಿ ಪತ್ರಿಕೆಗಳಲ್ಲಿ ಶಾಂತಿನಗರವೆಂದು ದಾಖಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಇಲ್ಲಿನ ಜಮೀನುಗಳ ಮೌಲ್ಯವನ್ನು ನಿಗದಿಪಡಿಸಲಾಗಿದೆ. ಆದರೆ ಗ್ರಾಮ ಪಂಚಾಯಿತಿ, ಕೆಎಂಎಫ್ ಮತ್ತಿತರ ಕಡೆ ತಹಸೀಲ್ದಾರ್ ಸೂಚನೆ ನೀಡದಿರುವುದರಿಂದ ಹಂಚಿನಾಳಕ್ಯಾಂಪ್ ಎಂದು ನಮೂದಾಗಿದೆ. ಇದನ್ನೇ ದೊಡ್ಡ ವಿಷಯವನ್ನಾಗಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಸರ್ಕಾರದ ಆದೇಶದ (ರಾಜ್ಯ ಪತ್ರ) ಪ್ರತಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಹೇಳಿದರು.
ಪುನಃ ಗುದ್ದಲಿ ಪೂಜೆ: ಜೆಡಿಎಸ್ ತಾಲೂಕಾಧ್ಯಕ್ಷ ಎಂ. ಲಿಂಗಪ್ಪ ಮಾತನಾಡಿ, ಈ ಹಿಂದೆ ಹಂಚಿನಾಳ ಕ್ಯಾಂಪಿನ ಕಾಂಗ್ರೆಸ್ ಮುಖಂಡ ಲಿಂಗರಾಜ ಪಾಟೀಲ ನಾಡಗೌಡರು ಯಾವಾಗಲೂ ಜೇಬಿನಲ್ಲಿ ಕತ್ತರಿ ಹಾಗೂ ರಿಬ್ಬನ್‌ನ್ನು ಇಟ್ಟುಕೊಂಡು ಪೂಜೆಗೆ ಹೋಗುತ್ತಾರೆಂದು ಆರೋಪಿಸಿದ್ದರು. ಆದರೆ ಈಗ ಹಂಪನಗೌಡರು ಮಾಡುತ್ತಿರುವುದಾದರೂ ಏನು ನಾಡಗೌಡರ ಅವಧಿಯಲ್ಲಿ ಆಗಿರುವ ಕಾಮಗಾರಿಗಳನ್ನೇ ತಮ್ಮ ಕಾಮಗಾರಿಗಳೆಂದು ಪುನಃ ಗುದ್ದಲಿ ಪೂಜೆ ಮಾಡಿಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುತ್ತಿದ್ದಾರೆ.
ನಾಡಗೌಡರು ಅವಧಿಯಲ್ಲಿ: ಇದಕ್ಕೆ ಉದಾಹರಣೆ ರೌಡಕುಂದಾ ಗ್ರಾಮದ ಸುವರ್ಣ ಗ್ರಾಮ ಯೋಜನೆಯ ರಸ್ತೆ ಕಾಮಗಾರಿ. ಈ ರಸ್ತೆಗೆ ನಾಡಗೌಡರು ತಮ್ಮ ಅವಧಿಯಲ್ಲಿ ಪೂಜೆ ಮಾಡಿಸಿದ್ದರು. ಆದರೆ ಬಾದರ್ಲಿ ಶಾಸಕರಾಗುತ್ತಿದ್ದಂತೆ ಅಲ್ಲಿ ಪುನಃ ಪೂಜೆ ಮಾಡಿಸಿ ತಾವೇ ಆ ಕೆಲಸ ಮಾಡಿಸಿದ್ದೇನೆಂಬಂತೆ ಹೇಳುತ್ತಿರುವುದು ಎಷ್ಟು ಸರಿ ಎಂದು ಟೀಕಿಸಿದರು.
ಸದಸ್ಯರನ್ನು ಆಹ್ವಾನಿಸಿಲ್ಲ: ನಗರಸಭೆ ಮಾಜಿ ಉಪಾಧ್ಯಕ್ಷ ಕೆ. ಜಿಲಾನಿಪಾಷ ಮಾತನಾಡಿ, ಈ ಹಿಂದೆ ನಾಡಗೌಡರು ದಢೇಸುಗೂರಿನಲ್ಲಿ ಕುಡಿವ ನೀರಿನ ಕಾಮಗಾರಿಯನ್ನು ಉದ್ಘಾಟಿಸಲು ಹೋದಾಗ ಕಾಂಗ್ರೆಸ್ ಪಕ್ಷದ ತಾಪಂ ಸದಸ್ಯರನ್ನು ಆಹ್ವಾನಿಸಿಲ್ಲವೆಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಂದ ಗಲಾಟೆ ಮಾಡಿಸಿದ್ದರು. ಆದರೆ ಮೊನ್ನೆ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ರೀಡಾಂಗಣ ಹೋರಾಟ ಸಮಿತಿ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಕಾರ್ಯದರ್ಶಿ ರಾಜಶೇಖರ ಪಾಟೀಲ ಸೇರಿದಂತೆ ಸಮಿತಿಯ ಸದಸ್ಯರನ್ನು ಆಹ್ವಾನಿಸಿಲ್ಲ. ಅಷ್ಟೇ ಏಕೆ ತಾಲೂಕಿನ ಹೆಸರನ್ನು ರಾಜ್ಯದ್ಯಂತ ಬೆಳಗಿಸಿದ ಕ್ರೀಡಾಪಟುಗಳಿಗೂ ಸೌಜನ್ಯಕ್ಕೆ ಆಹ್ವಾನ ಪತ್ರಿಕೆ ನೀಡದಿರುವುದು ಶಾಸಕರ ಸರ್ವಾಧಿಕಾರಿ ನೀತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ನಗರಸಭಾ ಸದಸ್ಯ ಶರಣಬಸವ ಗೊರೇಬಾಳ, ಮುಖಂಡರಾದ ಅಶೋಕ ಗೌಡ ಗದ್ರಟಗಿ, ಜಹೀರುಲ್ಲಾ ಹಸನ್, ನಾಗೇಶ ಹಂಚಿನಾಳಕ್ಯಾಂಪ್, ಮಲ್ಲನಗೌಡ ಮಾವಿನಮಡು, ಪಾಲಾಕ್ಷಗೌಡ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.