ಕ್ಷುಲ್ಲಕ ಕಾರಣಕ್ಕೆ ಕೋಮು ಗಲಭೆ, ಹಲವರಿಗೆ ಗಾಯ
ಕನ್ನಡಪ್ರಭ ವಾರ್ತೆ, ಸಿಂಧನೂರು, ಸೆ.15
ತಾಲೂಕಿನ ವಿರುಪಾಪುರ ಹಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಹಲವರಿಗೆ ಗಾಯಗಳಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರನೇ ದಿನದ ಗಣೇಶನ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ದರ್ಗಾದ ಮುಂದೆ ಸಾಗುತ್ತಿದ್ದಾಗ ಕೆಲವರು ಪ್ರಾರ್ಥನಾ ಸಮಯವಿದೆ. ಮೆರವಣಿಗೆ ಮುಂದೆ ಹೋಗಲಿ ಎಂದು ಮನವಿ ಮಾಡಿದರು. ಆಗ ಮೆರವಣಿಗೆಯಲ್ಲಿ ಸಾಗುತ್ತಿದ್ದ ಯುವಕರು ದರ್ಗಾದಿಂದ 200 ಮೀ. ದೂರದಲ್ಲಿರುವ ಮಲ್ಲನಗೌಡ ಅವರ ಮನೆಯ ಮುಂದೆ ಮೆರವಣಿಗೆ ಕೊಂಡೊಯ್ದರು.
ಸುಳ್ಳು ಹೇಳಿದ್ದೇ ಜಗಳಕ್ಕೆ ಕಾರಣ: ಇದೇ ವೇಳೆ ಸಿಂಧನೂರಿನಿಂದ ಹಟ್ಟಿ ಗ್ರಾಮಕ್ಕೆ ತನ್ನ ಬೈಕ್ನಲ್ಲಿ ಬರುತ್ತಿದ್ದ ಅಯೂಬ್ ಪಟೇಲ್ ಎಂಬುವವರು ಗಣೇಶನ ಮೆರವಣಿಗೆಯ ಯುವಕರೊಂದಿಗೆ ವಿನಾಕಾರಣ ಜಗಳ ತೆಗೆದಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನೇ ಅಯೂಬ್ ಪಟೇಲ್ ದರ್ಗಾದ ಬಳಿ ಇದ್ದ ಜನರಿಗೆ ತಮ್ಮನ್ನು ಹೊಡಿ ಬಡಿ ಮಾಡಿದ್ದಾರೆಂದು ಸುಳ್ಳು ಹೇಳಿ ಅಲ್ಲಿಂದ ಜನರನ್ನು ಜಗಳಕ್ಕೆ ಕರೆತಂದರು. ಇದರಿಂದ ಎರಡು ಗುಂಪುಗಳ ಮಧ್ಯೆ ಜಗಳ ನಡೆದು ಹಲವರಿಗೆ ಗಾಯಗಳಾದವು ಎಂದು ಗ್ರಾಮೀಣ ಠಾಣೆಯ ಪಿಎಸ್ಐ ಎಸ್.ಎಂ.ಪಾಟೀಲ್ ಘಟನೆ ಕುರಿತು ವಿವರಿಸಿದರು.
30 ಜನರ ಮೇಲೆ ಪ್ರಕರಣ ದಾಖಲು: ಶಾಂತ ರೀತಿಯಿಂದ ಮೆರವಣಿಗೆಯಲ್ಲಿ ತೆರಳುತ್ತಿದ್ದ ತಮ್ಮ ಮೇಲೆ ವಿನಾಕಾರಣ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು 30 ಜನರ ಮೇಲೆ ಪಂಪಾಪತಿ ವಡ್ಡರ್ ಎಂಬುವವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಹನುಮನಗೌಡ ಹಾಗೂ ವೀರನಗೌಡ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು ಅವರನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿದೆ.
ಪ್ರತಿ ದಿನದಂತೆ ಮೆರವಣಿಗೆ ಕೊಂಡೊಯ್ಯುತ್ತಿರುವಾಗ ಅಯೂಬ್ ಪಟೇಲ್ರ ಮಾತನ್ನು ಕೇಳಿ ತಮ್ಮ ಮೇಲೆ ನೂರ್ಸಾಬ, ಅಯೂಬ್, ಖಾಜಾಸಾಬ, ಮುರ್ತುಜಾಸಾಬ, ಬಾಬುಸಾಬ, ಮಹ್ಮದ್ಸಾಬ ಸಣ್ಣಗೌಡರ್, ಖಾದರ್ಸಾಬ ಮತ್ತಿತರರು ಹಲ್ಲೆ ಮಾಡಿದ್ದಾರೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಹೇಳಿದರು.
ಸಾಂತ್ವನ: ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸುವುದಾಗಿ ಪಿಎಸ್ಐ ಪಾಟೀಲ್ ಹೇಳಿದರು. ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕಾಂಗ್ರೆಸ್ ಮುಖಂಡ ಬಾಬುಗೌಡ ಬಾದರ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

