ರಾಯಚೂರು

ಸಭೆಗೆ ದಲಿತ ಮುಖಂಡರ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಸೆ.18
ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸರ್ಕಾರ ಹಲವಾರು ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಸಭೆ ಬಿಟ್ಟು ತೊಲಗುವುದಿಲ್ಲ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ದಲಿತ ಮುಖಂಡರು ಬುಧವಾರ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿದ ಮುಖಂಡರು, ತಾಲೂಕಿನಾದ್ಯಂತ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ವಿವಿಧ ಕಾಮಗಾರಿಗಳು ಅಪೂರ್ಣಗೊಂಡಿವೆ. ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ದಲಿತ ಮುಖಂಡರಾದ ಹನುಮಂತಪ್ಪ ತವಗ, ಹನುಮಂತಪ್ಪ ವೆಂಕಟಾಪೂರ, ಪ್ರೇಮಜೀವಿ, ದುರುಗಪ್ಪ, ಬಸವರಾಜ, ತಿಪ್ಪಣ್ಣ, ಹನುಮೇಶ, ದುರುಗೇಶ ಸೇರಿದಂತೆ ಇನ್ನಿತರರು ಸಮಸ್ಯೆಗಳ ಸುರಿಮಳೆಗೈದರು. ಇದಕ್ಕೆ ತಾಪಂ ಸದಸ್ಯರೂ ಧ್ವನಿಗೂಡಿಸಿದರು.
ವಲಯಾಧಿಕಾರಿ ಅಮಾನತಿಗೆ ಒತ್ತಾಯ: ಅಂಬೇಡ್ಕರ್ ಅಭಿವೃದ್ಧಿ ಮಂಡಳಿಯಿಂದ ಎಸ್‌ಸಿ, ಎಸ್ಟಿ ಫಲಾನುಭವಿಗಳು ಸಾಲ ಸೌಲಭ್ಯಕ್ಕಾಗಿ ಅರ್ಜಿ ಪಡೆಯಲು ಬಂದರೆ ವಲಯ ಅಧಿಕಾರಿಗಳು ಕಾಣೆಯಾಗಿದ್ದಾರೆ. ಸೆ.16 ಕೊನೆ ದಿನವೆಂದು ತಿಳಿದು ಬಂದಿದ್ದು, ಇದರಿಂದ ಯೋಜನೆಯಿಂದ ವಂಚಿತರಾಗಿದ್ದಾರೆ. ಕೂಡಲೇ ವಲಯ ಅಧಿಕಾರಿಗಳನ್ನು ಅಮಾನತುಗೊಳಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಮೇಲಾಧಿಕಾರಿಗಳಿಗೆ ಕಳುಹಿಸಬೇಕು, ಅರ್ಜಿ ಪಡೆಯುವ ದಿನಾಂಕ ಮುಂದೂಡಬೇಕೆಂದು ಒತ್ತಾಯಿಸಿದರು.
ಭ್ರಷ್ಟಾಚಾರದ ತನಿಖೆ ನಡೆಸಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಬೇಕು. ಮುದಗಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮನಗೂಳಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹಟ್ಟಿ ಆಸ್ಪತ್ರೆಗೂ ಕರ್ತವ್ಯಕ್ಕೆ ಹಾಜರಾಗಿ ಮನಬಂದಂತೆ ಬಿಲ್ ಬರೆಯುತ್ತಾರೆ. ಇಂದಿರಾ ಆವಾಸ್, ಬಸವ ವಸತಿ ಮನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಪಿಡಿಒ ಸಭೆ ಕರೆದು ಕ್ರಮ ಕೈಗೊಳ್ಳಬೇಕು.
ಒಂದೇ ಕಾಮಗಾರಿಗೆ ಎರಡು ಬಿಲ್: ನಾಗರಹಾಳ, ಕರಡಕಲ್ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ನಿಲೋಗಲ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗೆ ಗ್ರಾಪಂ ಹಾಗೂ ಶಾಸಕರ ಅನುದಾನದಡಿ ಎರಡು ಬಾರಿ ಬಿಲ್ ಪಡೆಯಲಾಗಿದೆ. ಸಂತೆಕೆಲ್ಲೂರ, ಮುದಗಲ್, ಮಸ್ಕಿ ಸೇರಿದಂತೆ ಬಿಸಿಎಂ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರುದ್ರಭೂಮಿ ಇಲ್ಲ: ನಾಗಲಾಪುರ, ಸಂತೆಕೆಲ್ಲೂರ, ಹೂನೂರ, ಹಟ್ಟಿವಿವಿಧ ಗ್ರಾಮಗಳಲ್ಲಿ ದಲಿತ ಜನಾಂಗಕ್ಕೆ ರುದ್ರಭೂಮಿ ತೊಂದರೆಯಾಗಿದೆ. ಕೂಡಲೇ ಅಧಿಕಾರಿಗಳು ಈ ಎಲ್ಲ ಸಮಸ್ಯೆಗಳ ಕುರಿತು ಗಮನ ಹರಿಸಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದರೆ ಸಭೆ ಬಿಟ್ಟು ತೊಲಗುವುದಿಲ್ಲವೆಂದು ಪಟ್ಟು ಹಿಡಿದರು.
ಇದಕ್ಕೆ ಜಿಪಂ ಕಾರ್ಯನಿರ್ವಾಹಕ ಅಭಿಯಂತರ ವೀರಭದ್ರಪ್ಪ ಮಾತನಾಡಿ, ವಿವಿಧ ಇಲಾಖೆಗಳಲ್ಲಿನ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಪರಿಶೀಲನೆ ನಡೆಸಲು ಪ್ರತಿ ಇಲಾಖೆ ಒಂದು ತಂಡ ರಚನೆ ಮಾಡಿ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.