ಪರಿವರ್ತನೆ, ಪ್ರಗತಿಯ ಪಾಲುದಾರರಾಗಿ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.18
ಬಡತನ ನಿವಾರಣೆಗೆ ಪ್ರಗತಿಯ ಪಾಲುದಾರರಾಗುವುದು ಅವಶ್ಯ. ಯೋಜನಾಬದ್ಧ ಮತ್ತು ಆರ್ಥಿಕ ಸೌಲಭ್ಯದ ಸದ್ಬಳಕೆ ಮೂಲಕ ಬದುಕಿನಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.
ನಗರದ ರಾಜೇಂದ್ರ ಗಂಜ್ನಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ 1,501 ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ, ಸ್ಮಾರ್ಟ್ ಕಾರ್ಡ್ ವಿತರಣೆ, ಸಾಲ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ: ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಕಷ್ಟು ಪ್ರಗತಿ ಕಂಡಿದ್ದೇವೆ. ಆದರೂ ನಿರೀಕ್ಷಿಸಿದಷ್ಟು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಇಲ್ಲಿನ ಪ್ರತಿಯೊಬ್ಬ ನಿವಾಸಿಗಳು ಯೋಚಿಸಬೇಕಿದೆ. ಅದಕ್ಕೆ ಪೂರಕವಾಗಿ ಸ್ವತಃ ಆರ್ಥಿಕ ಪ್ರಗತಿ ಸಾಧಿಸುವತ್ತ ಮುಂದಾಗಬೇಕಿದೆ ಎಂದು ತಿಳಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸ್ವಸಹಾಯ ಸಂಘಗಳ ಫಲಾನುಭವಿಗಳಿಗೆ ಆರ್ಥಿಕ ಸಹಾಯ ದೊರಕಿಸಿಕೊಡುವ ಮೂಲಕ ಸರ್ವತೋಮುಖ ಪ್ರಗತಿಗೆ ಪೂರಕ ಪರಿಸರ ನಿರ್ಮಿಸುತ್ತದೆ. ಆದರೆ ಫಲಾನುಭವಿಗಳು ಸಂಸ್ಥೆಯ ಯೋಜನೆಯ ಪಾಲುದಾರರಾಗಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಹಾಗೂ ತಮ್ಮ ಬದುಕಿನ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ದೇಶದ ಪ್ರಗತಿ ಗ್ರಾಮೀಣರಿಂದ ಸಾಧ್ಯ: ಸಂಸ್ಥೆಯು ಇದುವರೆಗೆ ಒಟ್ಟು 27 ಲಕ್ಷ ಸದಸ್ಯರನ್ನು ಹೊಂದಿದ್ದು ಕೋಟ್ಯಂತರ ರು. ವಹಿವಾಟಿನ ಮೂಲಕ ಸಮಾಜದ ಬಡವರ ಏಳಿಗೆಗೆ ದುಡಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆಸಿದವರ ಪ್ರಗತಿಯಲ್ಲಿ ಮಾತ್ರ ದೇಶದ ಪ್ರಗತಿ ಎಂದು ಕರೆಯಬಹುದು. ಕೇವಲ ನಗರಕ್ಕೆ ಸೀಮಿತ ಅಭಿವೃದ್ಧಿಯಿಂದ ದೇಶದ ಸಮಗ್ರ ಪ್ರಗತಿ ಸಾಧ್ಯವಾಗದು ಎಂದು ಅವರು ಹೇಳಿದರು.
ರಾಯಚೂರು ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಗೆ ಐಡಿಬಿಐ ಬ್ಯಾಂಕ್ 200 ಕೋಟಿ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ. ಈ ಹಣವನ್ನು ಪಡೆದವರು ಅದನ್ನು ಸದ್ಬಳಕೆ ಮಾಡಿಕೊಂಡು ಪ್ರಗತಿಯತ್ತ ಹೆಜ್ಜೆಯಿಡುವಂತೆ ಕರೆ ನೀಡಿದ ಅವರು, ಸ್ವಸಹಾಯ ಸಂಘಗಳವರು ಪ್ರಗತಿಯ ಹರಿಕಾರರಾಗಬೇಕೆಂದು ಸಲಹೆ ನೀಡಿದರು.
ಪಾಲುದಾರಿಕೆ ಕೊರತೆ: ಸರ್ಕಾರದ ಅನೇಕ ಯೋಜನೆಗಳಲ್ಲಿ ಜನರ ಪಾಲುದಾರಿಕೆಯ ಕೊರತೆ ಎದ್ದು ಕಾಣುತ್ತದೆ. ಅದರಿಂದಾಗಿಯೇ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಅವಶ್ಯಕತೆಯಿದೆ ಎಂದರು.
ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಆಸಕ್ತಿವಹಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಶುದ್ಧ ಗಂಗಾ ಯೋಜನೆ ಅಡಿ ನೀರಿನ ಘಟಕಗಳ ಸ್ಥಾಪನೆಗೆ ಸಿದ್ಧವಿದೆ. ಬೇಡಿಕೆಗೆ ಅನುಸಾರವಾಗಿ ಘಟಕಗಳ ಸ್ಥಾಪನೆ ನಡೆಯಲಿದೆ ಎಂದು ಅವರು ಹೇಳಿದರು.
ಬಡವರ ಏಳ್ಗೆ ಬಯಸುವ ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ, ಬಡವರ ಏಳಿಗೆಯನ್ನು ಬ್ಯಾಂಕ್ ಬಯಸುತ್ತದೆ. ಅದೇ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜತೆ ಕೈಜೋಡಿಸಿ ಬಡವರ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸಮ್ಮತಿಸಿದೆ ಎಂದು ತಿಳಿಸಿದರು.
ಶಾಸಕರಾದ ವೆಂಕಟೇಶ ನಾಯಕ, ತಿಪ್ಪರಾಜು ಹವಾಲ್ದಾರ್, ಡಾ. ಶಿವರಾಜ್ ಪಾಟೀಲ್ ಮಾತನಾಡಿ, ಹೈ.ಕ. ಭಾಗವು ಎಲ್ಲ ರೀತಿಯಿಂದ ಹಿಂದುಳಿದಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಾರ್ಯನಿರ್ವಹಿಸಲು ಮುಂದಾಗಿರುವುದು ಶ್ಲಾಘನೀಯ. ಸಂಸ್ಥೆಗೆ ಅಗತ್ಯ ನೆರವು, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಚಿಕ್ಕಸೂಗೂರಿನ ಡಾ. ಸಿದ್ದಲಿಂಗ ಮಹಾಸ್ವಾಮೀಜಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪ, ಸಂಸ್ಥೆಯ ಇಡಿ ಡಾ. ಎಲ್.ಎಚ್. ಮಂಜುನಾಥ್, ಐಡಿಬಿಐ ಬ್ಯಾಂಕಿನ ಪ್ರಮುಖರಾದ ರಾಜೇಂದ್ರ ಪೂಜಾರಿ, ರಂಜಿತಾ, ಫಿನೋ ಸಂಸ್ಥೆಯ ಚೈತನ್ಯ ಕೃಷ್ಣ, ತಾಪಂ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ನಗರಸಭೆ ಅಧ್ಯಕ್ಷೆ ಮಹಾದೇವಮ್ಮ, ಉದ್ಯಮಿ ರಾಮಚಂದ್ರ ಪ್ರಭು ಸೇರಿ ಅನೇಕರಿದ್ದರು. ಸಾವಿರಾರು ಸಂಖ್ಯೆಯ ಜನತೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸ್ಮಾರ್ಟ್ ಕಾರ್ಡ್, ಸಾಲ ಪತ್ರ ವಿತರಣೆ: ಸಮಾರಂಭದಲ್ಲಿ ಸಾಂಕೇತಿಕವಾಗಿ ಸ್ವಸಹಾಯ ಸಂಘಗಳ ಫಲಾನುಭವಿಗಳಿಗೆ ಬ್ಯಾಂಕಿನ ಸ್ಮಾರ್ಟ್ ಕಾರ್ಡು ಮತ್ತು ಸಾಲದ ಪತ್ರಗಳನ್ನು ವಿತರಿಸಲಾಯಿತು.
ನಗರಕ್ಕೆ ಮೊಟ್ಟ ಮೊದಲ ಬಾರಿಗೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಪೂರ್ಣಿಮಾ ಚಿತ್ರಮಂದಿರದಿಂದ ಭವ್ಯ ಮೆರವಣಿಗೆಯಲ್ಲಿ ಸಮಾರಂಭ ಸ್ಥಳಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಶಾಸಕರು, ಗಣ್ಯರು ಸೇರಿ ಕಲಾ ತಂಡಗಳು ಪಾಲ್ಗೊಂಡಿದ್ದವು.
ಮಳೆಗಾಲದ ಸಂಭ್ರಮ ಆನಂದಿಸಿ...
ರಾಯಚೂರು: ನಿಮ್ಮಲ್ಲಿ ಮಳೆಯೇ ಕಡಿಮೆ. ಮಳೆಯಾಗುತ್ತಿದೆ ಆನಂದಿಸಿ.. ಮಳೆ ನಿಂತ ಮೇಲೆ ಮಾತಾಡ್ತೇನೆ..
ಸುಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ನುಡಿಯಿದು.
ನಗರದಲ್ಲಿ ಬುಧವಾರ ರಾಜೇಂದ್ರ ಗಂಜ್ನಲ್ಲಿ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ ಮಳೆ ಜೋರಾಗಿ ಸುರಿಯತೊಡಗಿತು. ಅದರಿಂದಾಗಿ ಅವರ ಮಾತುಗಳು ಯಾರಿಗೂ ಕೇಳದಾಯಿತು.
ಈ ವೇಳೆ ಅವರು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆಯಾಗುವುದೇ ತೀರಾ ವಿರಳ. ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ತೀರಾ ಸಾಮಾನ್ಯ. ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗುವುದನ್ನು ಧರ್ಮಸ್ಥಳದ ಸುತ್ತಲಿನ ಪ್ರದೇಶದಲ್ಲಿ ಕಾಣುತ್ತೇವೆ. ಆದರೆ ಈ ಪ್ರದೇಶದಲ್ಲಿ ಮಳೆಯಾಗುವುದೇ ಇಲ್ಲ ಎಂದು ಕೇಳಿದ್ದೇನೆ. ಹಾಗಾಗಿ ಮಳೆಯಾಗುತ್ತಿದೆ ಆನಂದಿಸಿ. ಮಳೆ ನಿಂತ ಮೇಲೆ ಮಾತನಾಡುತ್ತೇನೆಂದು ಮಳೆ ನಿಲ್ಲುವವರೆಗೆ ಕಾದು ನಿಂತು ನಂತರದಲ್ಲಿ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

