'ರ್ಯಾಗಿಂಗ್ ವಿರುದ್ಧ ಸಿಡಿದೇಳಿ'
ಕ.ಪ್ರ.ವಾರ್ತೆ, ರಾಯಚೂರು, ಸೆ.18
ರ್ಯಾಗಿಂಗ್ನಿಂದಾಗಿ ಹೊಸದಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಹೆಚ್ಚಿನ ಮಾನಸಿಕ ಹಿಂಸೆ ಅನುಭವಿಸುತ್ತಾರೆ. ರ್ಯಾಗಿಂಗ್ ವಿರುದ್ಧ ಹೋರಾಟ ಮಾಡುವಂತೆ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಹಾಗೂ ನ್ಯಾಯಿಕ ದಂಡಾಧಿಕಾರಿಗಳಾದ ಮಹಮ್ಮದ್ ಮುಜಾಹಿದ್ ಉಲ್ಲಾ ಕರೆ ನೀಡಿದರು.
ನಗರದ ಎಲ್ವಿಡಿ ಕಾಲೇಜು ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸವೋಚ್ಚ ನ್ಯಾಯಾಲಯವು ರ್ಯಾಗಿಂಗ್ ತಡೆಗೆ ಅನೇಕ ಕಾನೂನು ಜಾರಿಗೊಳಿಸಿದೆ. ರ್ಯಾಗಿಂಗ್ಗೆ ಒಳಗಾಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾನಸಿಕ ದೌರ್ಬಲ್ಯ, ಶಾರೀರಿಕ, ಮತ್ತು ಏಕಾಗ್ರತೆಯ ಕೊರತೆಯಿಂದ ವಿದ್ಯಾಭ್ಯಾಸವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಯೋಚಿಸುವ ಸಾಧ್ಯತೆಗಳಿದ್ದು, ರ್ಯಾಗಿಂಗ್ ವಿರುದ್ಧ ಹೋರಾಟಕ್ಕೆ ಸಲಹೆ ನೀಡಿದರು.
ರ್ಯಾಗಿಂಗ್ಗೆ ಜೈಲು ಶಿಕ್ಷೆ: ಕಾರ್ಯಕ್ರಮದಲ್ಲಿ ನ್ಯಾಯವಾದಿ ಮೇರಿ ಡ್ಯಾನಿಯಲ್ ಉಪನ್ಯಾಸ ನೀಡಿ, ರ್ಯಾಗಿಂಗ್ ವಿರೋಧಿ ಆಂದೋಲನವು ಜಾಗ್ರತೆಗೊಂಡಿದ್ದು, ಇದರಿಂದ ಆಗುವ ಅನಾಹುತಗಳನ್ನು ಮನಗಂಡ ನ್ಯಾಯಾಲಯಗಳು ರ್ಯಾಗಿಂಗ್ ನಡೆಸುವವರ ವಿರುದ್ಧ 7 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ದಂಡದ ಶಿಕ್ಷೆಯ ಎಚ್ಚರಿಕೆ ನೀಡಿದೆ ಎಂದರು.
ರ್ಯಾಗಿಂಗ್ ಪ್ರಕರಣಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಲು ಹಿಂಜರಿದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪೊಲೀಸರಿಗೆ ವರದಿ ಮಾಡಬೇಕು. ರ್ಯಾಗಿಂಗ್ ನಡೆಸಿದವರಿಗೆ ಕಾಲೇಜಿನಿಂದ ಅಮಾನತು ಮಾಡುವುದು, ಪರೀಕ್ಷೆಗೆ ಕುಳಿತುಕೊಳ್ಳದಂತೆ ತಡೆಯೊಡ್ಡುವ ಅಧಿಕಾರವನ್ನು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ನ್ಯಾಯಾಲಯ ನೀಡಿದೆ ಎಂದರು.
ಸಹಾಯವಾಣಿಗೆ ಕರೆ ಮಾಡಿ: ರ್ಯಾಗಿಂಗ್ ತಡೆಗೆ ರಾಷ್ಟ್ರಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಿದ್ದು ದೂರವಾಣಿ ಸಂಖ್ಯೆ 1800-180-552 ಇಲ್ಲಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ರ್ಯಾಗಿಂಗ್ನಂತ ಕೃತ್ಯಗಳಿಗೆ ಮುಂದಾಗದೇ ವಿದ್ಯಾರ್ಥಿಗಳು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರನ್ನೂ ಸಹೋದರ ಭಾವದಿಂದ ಕಾಣುವಂತೆ ಸಲಹೆ ನೀಡಿದರು.
ಮುಚ್ಚಳಿಕೆ ಪತ್ರ: ಅಧ್ಯಕ್ಷತೆಯನ್ನು ವಕೀಲರಾದ ಬಸವರಾಜಪ್ಪ ವಹಿಸಿದ್ದರು. ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ರ್ಯಾಗಿಂಗ್ ತಡೆಗೆ ಕಾಲೇಜು ಆಡಳಿತವು ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲು ಕ್ರಮ ಕೈಗೊಳ್ಳಲಿದೆ ಎಂದರು.
ಎಲ್ವಿಡಿ ಕಾಲೇಜಿನ ಪ್ರಾಚಾರ್ಯ ಶರಣಬಸವ ಖೇಣೇದ್, ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಶಾಂತಪ್ಪ ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

