ರಾಯಚೂರು

'ಎನ್‌ಆರ್‌ಬಿಸಿ ಕಾಲುವೆ ವಿಸ್ತರಿಸಿ'

Published On :

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯನ್ನು ಸದ್ಯದ 95 ಕಿಮೀನಿಂದ 157 ಕಿಮೀ ವರೆಗೆ ವಿಸ್ತರಿಸಬೇಕು. ಹಾಗೆಯೇ ಏಳುಮೈಲ್ ಕ್ರಾಸ್ ಬಳಿ ಜಲಾಶಯ ನಿರ್ಮಿಸುವ ಮೂಲಕ ರಾಯಚೂರು ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಪೂರಕ ಯೋಜನೆ ಜಾರಿಗೆ ತರುವಂತೆ ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅವಧಿಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕಾಲುವೆಯ ವಿಸ್ತರಣೆಗೆ ನಿರ್ಧಾರ ಕೈಗೊಂಡಿದೆ. ಅದರ ಪರಿಣಾಮ ಈಚೆಗೆ ಟೆಂಡರ್ ಕರೆಯಲಾಗಿದೆ. ಒಟ್ಟು 9 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸದ್ಯ 110 ಕಿ.ಮೀ.ವರೆಗೆ ಮಾತ್ರ ನಿರ್ಮಾಣವಾಗುವ ಬಗ್ಗೆ ಗೊತ್ತಾಗಿದೆ. ಇನ್ನುಳಿದಂತೆ ಕಾಲುವೆಯನ್ನು 157 ಕಿಮೀವರೆಗೆ ವಿಸ್ತರಣೆಯ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಗಣೇಕಲ್ ಜಲಾಶಯಕ್ಕೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ಲಿಂಕ್ ಕೆನಾಲ್ ನಿರ್ಮಾಣಕ್ಕೆ ಅನೇಕ ಅಡ್‌ಡಿ ಆತಂಕಗಳಿವೆ. ಆದರೆ ಏಳು ಮೈಲ್ ಕ್ರಾಸ್ ಬಳಿ ಜಲಾಶಯ ನಿರ್ಮಿಸಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬಹುದೆಂದು ಹೇಳಿದರು.
1998- 2004 ರವರೆಗೆ ಕೆಪಿಎಸ್ಸಿ ಯಿಂದ ತಹಸೀಲ್ದಾರ್ ಹುದ್ದೆಗೆ 800 ಜನರನ್ನು ನೇಮಿಸಿದ್ದು ಅವರಲ್ಲಿ ಶೇ.80 ರಷ್ಟು ಜನ 3ಎ ಸಮುದಾಯಕ್ಕೆ ಸೇರಿದ್ದಾರೆ. 2012 ರಲ್ಲಿ ಕೆಪಿಎಸ್ ಸಿಯಲ್ಲಿ ಗೋನಾಳ ಭೀಮಪ್ಪ ನಡೆಸಿರುವುದು ಆರ್ಥಿಕ ಭ್ರಷ್ಟಾಚಾರ ವಾಗಿದೆ ಎಂದು ಆರೋಪಿಸಿದ ಅವರು, ಒಂದೇ ಜಾತಿ ಸಮುದಾಯವರ ನೇಮಕಾತಿಯಿಂದ ಸಿಎಂ ಸಿದ್ದರಾಮಯ್ಯ ಅವರು ಸಮರ್ಪಕ ಆಡಳಿತ ನಿರ್ವಹಣೆ ನಡೆಸುವುದು ಅಸಾಧ್ಯ ಎಂದರು.
ಕೆಪಿಎಸ್ಸಿ ಯಿಂದ ನೇಮಕಗೊಂಡವರು ಒಂದೇ ಸಮುದಾಯದವರಾಗಿದ್ದು ಅದರಿಂದ ಸರ್ಕಾರದ ಕಾರ್ಯನಿರ್ವಹಣೆಗೆ ಅಡಚಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧವೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರು ಇಂದು ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿರುವ 700 ಜನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಡಾ. ವಿ.ಎ. ಮಾಲಿಪಾಟೀಲ್, ರಾಮನಗೌಡ ಜಾಲಿಬೆಂಚಿ, ಅಕ್ಬರ್ ಹುಸೇನ್ ನಾಗುಂಡಿ, ಬಸವರಾಜ್, ಈಶಪ್ಪ ಕಲ್ಮಲಾ, ವೆಂಕಟೇಶ ಯಾದವ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.