ರಾಯಚೂರು

ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಸಿಂಧನೂರು: ನಗರದ ಬಡಿಬೇಸ್‌ನಲ್ಲಿ ಈಚೆಗೆ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಕೋಮು ಗಲಭೆಗೆ ಕಾರಣರಾದ ಕಿಡಿಗೇಡಿಗಳು ಹಾಗೂ ಗಲಭೆ ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರು ತಾಲೂಕಿನಲ್ಲಿ ಹಿಂದು-ಮುಸ್ಲಿಮರು ಸೋದರರಂತೆ ಭ್ರಾತೃತ್ವ ಮತ್ತು ಸಹಬಾಳ್ವೆಯಿಂದ ಬದುಕಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆ ಕಾರ್ಯಕ್ರಮಗಳಲ್ಲಿ ಕೆಲ ಕಿಡಿಗೆಡಿಗಳು ಧಾರ್ಮಿಕ ಪ್ರಚೋದನೆ ಮಾಡುವ ಮೂಲಕ ಜನತೆಯ ಭಾವನೆಗಳನ್ನು ಕೆರಳಿಸುವ ಕೃತ್ಯಕ್ಕೆ ಕೈ ಹಾಕುತ್ತಿರುವುದು ಖಂಡನೀಯ ಎಂದರು.
ಅಸಮರ್ಥತೆ: ಬಸವ ಕೇಂದ್ರದ ಗೌರವಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಸೆ.15ರಂದು ರಾತ್ರಿ ಗಣೇಶ ವಿಸರ್ಜನೆ ವೇಳೆ ಜರುಗಿದ ಪರಸ್ಪರ ಕಲ್ಲು ತೂರಾಟ, ನಿಂದನೆ, ಆಸ್ತಿಪಾಸ್ತಿ ಹಾನಿ ಘಟನೆಗಳಿಗೆ ಪೊಲೀಸ್ ಇಲಾಖೆ ಅಸಮರ್ಥತೆ ಕಾರಣ. ಶಾಂತಿ ಸಭೆಯಲ್ಲಿ ಚರ್ಚೆಸಿ ತೆಗೆದುಕೊಂಡ ನಿರ್ಣಯಗಳನ್ನು ಪಾಲಿಸದ ಗಜಾನನ ಸಮಿತಿಯವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ.
ಗಲಭೆ ಸಂಭವಿಸಬಹುದೆಂಬ ಮಾಹಿತಿ ಮುಂಚೆಯೇ ಗೊತ್ತಿದ್ದರೂ, ಅದನ್ನು ತಡೆವ ಕಾರ್ಯ ಯೋಜನೆ ರೂಪಿಸುವಲ್ಲಿ ಪೊಲೀಸ್ ಇಲಾಖೆಯ ವಿಫಲತೆ ಎದ್ದು ಕಾಣುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಬಳಸಿದ ಹಾಡು ಕೋಮುಭಾವನೆಯನ್ನು ಪ್ರಚೋದಿಸುವಂತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಾಲೂಕಿನಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿ ವಿಸರ್ಜನೆ ವೇಳೆ ಆದ ಗಲಭೆಗಳ ಮಾಹಿತಿ ಹಾಗೂ ಕಳೆದ ವರ್ಷ ವಿಸರ್ಜನೆ ಸಂದರ್ಭದಲ್ಲಿ ಮಸೀದಿ ಮುಂದೆ ನಡೆಯುಬಹುದಾದ ಘರ್ಷಣೆಯನ್ನು ಪೊಲೀಸರೇ ವಿಫಲಗೊಳಿಸಿದ್ದು ಇಲಾಖೆಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ತನಿಖೆಯಾಗಲಿ: ಗಲಭೆಗೆ ಕಾರಣದ ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ಪೊಲೀಸ್ ವೈಫಲ್ಯವನ್ನು ತನಿಖೆಗೆ ಒಳಪಡಿಸಬೇಕೆಂದು ಬಸವ ಸಮಿತಿಯ ಶರಣಪ್ಪ ಟೆಂಗಿನಕಾಯಿ, ಸಮುದಾಯದ ಎಸ್. ದೇವೇಂದ್ರಗೌಡ, ಪ್ರಜಾ ರಕ್ಷಣೆ ಸಂಘಟನೆ ಕೆ. ಬಸವರಾಜ ಕೋಟೆ, ಕರ್ನಾಟಕ ರೈತ ಸಂಘದ ಎಚ್.ಎನ್. ಬಡಿಗೇರ, ಅಂಗನವಾಡಿ ಕಾರ್ಯಕರ್ತರ ಒಕ್ಕೂಟದ ಚಂದ್ರಶೇಖರ ಕ್ಯಾತನಟ್ಟಿ, ಲಂಕೇಶ ಬಳಗದ ಬಸವರಾಜ ಹಳ್ಳಿ, ಮನುಜ ಮತ ಬಳಗದ ಡಿ.ಎಚ್. ಕಂಬಳಿ, ಎಐಟಿಯುಸಿ ಅಧ್ಯಕ್ಷ ವೆಂಕನಗೌಡ ಗದ್ರಟಗಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.