ವಿಪಕ್ಷ ಸದಸ್ಯರಿಗೆ ಎಸ್ಎಫ್ಸಿ ಅನುದಾನದಲ್ಲಿ ನಿರ್ಲಕ್ಷ್ಯ
ಸಿಂಧನೂರು: ನಗರಸಭೆ ಆಡಳಿತವು ಕಾಂಗ್ರೇಸ್ಪ್ಕ್ಷದ ಹಿಡಿತದಲ್ಲಿದ್ದು ಶಾಸಕ ಹಂಪನಗೌಡ ಬಾದರ್ಲಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ ವಿರೋಧ ಪಕ್ಷದ ಸದಸ್ಯರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರಾದ ಕೆಜೆಪಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ್, ಜೆಡಿಎಸ್ ಸದಸ್ಯ ಬಸವರಾಜ ನಾಡಗೌಡ ಬಿಎಸ್ಆರ್ ಚಂದ್ರಶೇಖರ ಮೈಲಾರ್ ಆರೋಪಿಸಿದರು.
ಅವರು ಪ್ರವಾಸಿ ಮಂದಿರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಎಸ್ಎಫ್ಸಿ ಯೋಜನೆ (ರಾಜ್ಯ ಹಣಕಾಸು ನಿಧಿ) ಅಡಿಯಲ್ಲಿ ರು. 4.85 ಕೋಟಿ ಹಣ ಬಿಡುಗಡೆಯಾಗಿದ್ದು, ಇದರಲ್ಲಿ ಅವಶ್ಯವಿರುವ ವಾರ್ಡ್ಗಳಿಗೆ ಹೆಚ್ಚಿನ ರೀತಿಯಲ್ಲಿ ಹಣ ಬಿಡುಗಡೆ ಮಾಡದೇ ಕೇವಲ ಕಾಂಗ್ರೇಸ್ ಸದಸ್ಯರ ವಾರ್ಡ್ಗಳಿಗೆ ಹೆಚ್ಚಿಗೆ ಹಣ ಬಿಡುಗಡೆ ಮಾಡಲು ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ.
ಹಣ ನೀಡಿಲ್ಲ: ಸಮಸ್ಯೆಗಳ ಗೂಡಾಗಿರುವ ವಾರ್ಡ್ಗಳಾದ 10, 22, 27, 30 ಮತ್ತಿತರ ವಾರ್ಡ್ಗಳಿಗೆ ಹಣ ನೀಡಿಲ್ಲ. ವಾರ್ಡ್ ನಂ. 6 ರಲ್ಲಿ ಶೌಚಾಲಯದ ಸಮಸ್ಯೆ ಇದ್ದರೂ, ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಪ್ರತಿಪಕ್ಷಗಳ ಸದಸ್ಯರನ್ನು ಸೌಜನ್ಯಕ್ಕೂ ಕರೆಯದೇ ತಮ್ಮ ಮನೆಯಲ್ಲಿಯೇ ಅಧಿಕಾರಿಗಳನ್ನು ಕರೆಯಿಸಿ ಕ್ರಿಯಾ ಯೋಜನೆಯನ್ನು ಶಾಸಕರು ರೂಪಿಸಿದ್ದಾರೆ ಎಂದು ಟೀಕಿಸಿದರು.
ಹದಗೆಟ್ಟ ರಸ್ತೆ, ಒಳಚರಂಡಿ ವ್ಯವಸ್ಥೆ: ಮಳೆಗಾಲದಿಂದಾಗಿ ನಗರದ ಎಲ್ಲಾ ವಾರ್ಡ್ಗಳ ರಸ್ತೆಗಳು ಹದಗೆಟ್ಟು ಹೋಗಿವೆ. ಶೌಚಾಲಯ, ವಿದ್ಯುತ್ ದೀಪ, ಚರಂಡಿ ಸೌಕರ್ಯ ಇಲ್ಲದಂತಾಗಿದೆ. ಸಾರ್ವಜನಿಕರು ನಗರಸಭೆ ಸದಸ್ಯರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನಗರಸಭೆ ಸದಸ್ಯರಾಗಿ 6 ತಿಂಗಳು ಗತಿಸಿದರೂ ಅಧಿಕಾರಿಗಳು, ಆಡಳಿತ ಪಕ್ಷದವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ಸೆ. 7ರಂದು ನಗರಸಭೆ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜಾಫರ್ ಜಾಗೀರದಾರ್ 4 ಬಾರಿ ಆಯ್ಕೆಯಾಗಿ ಅನುಭವ ಹೊಂದಿದ್ದರೂ, ಅವರನ್ನು ಶಾಸಕರು ಸ್ವತಂತ್ರ ನಿರ್ಣಯ ಕೈಗೊಳ್ಳಲು ಬಿಡುತ್ತಿಲ್ಲ. ಅಧ್ಯಕ್ಷರ ವಾರ್ಡ್ನ ಟಿಪ್ಪು ಸುಲ್ತಾನ್ ವೃತ್ತದಿಂದ ಬಪ್ಪೂರ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಅದಕ್ಕೆ ಎಸ್ಎಫ್ಸಿ ಹಣ ನೀಡದಿರುವುದು ದುರದೃಷ್ಟಕರ ಎಂದು ಕೆಜೆಪಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ವ್ಯಂಗ್ಯವಾಡಿದರು. ಶಾಸಕರು ತಮ್ಮ ಮನಸೋ ಇಚ್ಚೆ ಹಣ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿರುವುದು ಇವರ ಏಕಪಕ್ಷೀಯ ನಿಲುವನ್ನು ತೋರಿಸುತ್ತದೆ ಎಂದು ಬಿಎಸ್ಆರ್ ಸದಸ್ಯ ಚಂದ್ರಶೇಖರ ಮೈಲಾರ ಆಪಾದಿಸಿದರು.
ನಗರಸಭೆ ಸದಸ್ಯರಾದ ಕೆ. ಮರಿಯಪ್ಪ, ಶರಣಬಸವ ಗೊರೇಬಾಳ, ನಾಗಪ್ಪ ಸುಕಾಲಪೇಟೆ, ಗ್ಯಾನಪ್ಪ, ಸಣ್ಣವೀರಭದ್ರಪ್ಪ ಕುರುಕುಂದಿ, ಲಿಂಗರಾಜ ಗೊರೇಬಾಳ, ಹಾಜಿ ಮಸ್ತಾನ್, ಮಹಿಬೂಬ್, ಮುಖಂಡರಾದ ಸಿದ್ರಾಮೇಶ ಮನ್ನಪೂರ್, ಜಗದೀಶ ಮೇದಾರ ಮತ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

