'ಆರೋಗ್ಯ ಮಹಿಳೆಯಿಂದ ಸ್ವಸ್ಥ ಸಮಾಜ'
ಸಿಂಧನೂರು: ಹೆಣ್ಣುಮಕ್ಕಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು, ಅಕ್ಷರಸ್ಥ ಮಹಿಳೆಯರು ತಮ್ಮ ಕುಟುಂಬಗಳನ್ನು ಆರೋಗ್ಯದಿಂದಿಡಲು ಸಾಧ್ಯ. ಅಂತಹ ಆರೋಗ್ಯವಂತ ಮಹಿಳೆಯರಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗಲಿದೆ ಎಂದು ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ ಅಣಗೌಡರ್ ಹೇಳಿದರು.
ತಾಲೂಕಿನ ಚಿಕ್ಕಬೇರಿಗಿ ಸರ್ಕಾರಿ ಶಾಲೆಯಲ್ಲಿ ತಾಲೂಕು ಆರೋಗ್ಯ ಕೇಂದ್ರ ಸಿಂಧನೂರು, ಪ್ರಾಥಮಿಕ ಆರೋಗ್ಯ ಕೇಂದ್ರ ತುರವಿಹಾಳ ಹಾಗೂ ಎಸ್ಡಿಎಂಸಿ ಚಿಕ್ಕ ಬೇರಿಗಿ ಜಂಟಿಯಾಗಿ ನಡೆಸಿದ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಆರೋಗ್ಯ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದ್ದು, ಪೋಷಕಾಂಶದ ಕೊರತೆಯಿಂದ ಮಕ್ಕಳು ಸಾವನ್ನಪ್ಪುತ್ತಿವೆ. ಮಗು ಹುಟ್ಟಿದ 6 ತಿಂಗಳವರೆಗೆ ತಾಯಿಯ ಹಾಲನ್ನು ಬಿಟ್ಟು ಬೇರೇನು ಕೊಡಬಾರದು. ನಂತರ ಆಹಾರದ ಜೊತೆಯಲ್ಲಿ 2 ವರ್ಷ ಹಾಲು ಕೊಟ್ಟರೆ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ರಕ್ತಹೀನತೆ ತಡೆಗೆ ಸಲಹೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಮಾತನಾಡಿ, ತಾಯಂದಿರಲ್ಲಿ ರಕ್ತಹೀನತೆ ಕಂಡು ಬರುತ್ತಿದ್ದು ಅದರ ಸುಧಾರಣೆಗಾಗಿ ಮೊಳಕೆ ಕಾಳುಗಳು, ಮೂಲಂಗಿ, ಗಜ್ಜರಿ, ತತ್ತಿ, ಬೆಲ್ಲ, ಹಸಿ ತರಕಾರಿ ತಿನ್ನಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಶುದ್ಧ ನೀರು ಕುಡಿಯಬೇಕು. ಹೆರಿಗೆಯಾಗುವ ಸ್ಥಳ ಸ್ವಚ್ಛತೆಯಿಂದಿರಬೇಕು. ಇಲ್ಲದಿದ್ದರೆ ಮಕ್ಕಳಿಗೂ ಮತ್ತು ಬಾಣಂತಿಗೂ ಸೋಂಕು ತಗಲುವ ಸಾದ್ಯತೆಗಳಿರುತ್ತವೆ ಎಂದು ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಕೆ ಗೋನಾಳ ವಹಿಸಿದ್ದರು. ಡಾ ಶಂಕರಾಚಾರ್ಯ, ಡಾ. ಸೌಮ್ಯಶ್ರೀ, ಗ್ರಾಪಂ ಸದಸ್ಯ ಶರಣಪ್ಪ ಹೂವಿನಭಾವಿ, ನಾಗಪ್ಪ ಎತ್ನಟ್ಟಿ, ನಾಗಪ್ಪ ರಾಠೋಡ. ಎ.ಐ.ಪಾಟೀಲ್. ಅಂದಾನಪ್ಪ ಕೊಟಗಿ, ಶಿವಪ್ಪ, ರಾಜಣ್ಣ, ಶಂಕ್ರಪ್ಪ, ಶಿವುಕುಮಾರ, ನಿಜಲಿಂಗಪ್ಪ, ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

