ಕಲ್ಯಾಣ ನಿಧಿ ಉಳಿತಾಯ ದ್ವಿಗುಣ ಅಗತ್ಯ
ಗುಲ್ಬರ್ಗ: ಮುಂದಿನ ವರ್ಷದ ಪೊಲೀಸ್ ಧ್ವಜ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆಯೊಳಗೆ ಪೊಲೀಸ್ ಕಲ್ಯಾಣ ಸಾಮಾನ್ಯ ನಿಧಿಯ ಮತ್ತು ನಿವೃತ್ತ ನಿಧಿಯ ಉಳಿತಾಯ ಮೊತ್ತ ದ್ವಿಗುಣಗೊಳಿಸವುದು ಅಗತ್ಯ. ಸದ್ಯ ಕಲ್ಯಾಣ ಸಾಮಾನ್ಯ ನಿಧಿಯಲ್ಲಿ 15 ಲಕ್ಷ ಹಾಗೂ ನಿವೃತ್ತ ನಿಧಿಯಲ್ಲಿ 5 ಲಕ್ಷ ಉಳಿತಾಯವಿದೆ ಎಂದು ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಸುರೇಶ್ ಮೊಹ್ಮದ್ ಹೇಳಿದರು.
ನಗರದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಿ ಅವರ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಕಲ್ಪಿಸಿಕೊಡಬೇಕು. ನಿವೃತ್ತ ಸೈನಿಕರ ಮಾದರಿಯಲ್ಲಿ ನಿವೃತ್ತ ಪೊಲೀಸರಿಗೂ ಉದ್ಯೋಗಾವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ. ಠಾಣೆಗಳು ಸಾರ್ವಜನಿಕರ ಕಲ್ಯಾಣ ಕೇಂದ್ರಗಳಾಗಿದ್ದು, ಠಾಣೆಗೆ ಬರುವ ಮತ್ತು ಭೇಟಿ ನೀಡುವ ಪ್ರತಿಯೊಬ್ಬರ ದೂರು ದುಮ್ಮಾನಗಳಿಗೆ ಉತ್ತಮ ರೀತಿಯಿಂದ ಸ್ಪಂದಿಸಬೇಕು. ಉತ್ತಮ ಸೇವೆ ಸಲ್ಲಿಸಬೇಕೆಂದರು.
ಪೊಲೀಸರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಿ: ನಿವೃತ್ತ ಪೊಲೀಸ್ ಅಧೀಕ್ಷಕ ಎಸ್.ಬಿ. ಸಾಂಬಾ ಮಾತನಾಡಿ, ಧಾರವಾಡದ ಮಾದರಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಪೊಲೀಸರ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ನಿರ್ಮಿಸಬೇಕು. ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಗೃಹ ನಿರ್ಮಾಣ ಸಂಘ ರಚಿಸಿ ಪೊಲೀಸರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು. ಈ ವೇಳೆ ಅವರು ಪೊಲೀಸ್ ಧ್ವಜಗಳ ಬಿಡುಗಡೆ ಮಾಡಿದರು. ಅಲ್ಲದೆ 10 ಪೊಲೀಸ್ ತುಕಡಿಗಳಿಂದ ಪರೇಡ್ ವಂದನೆ ಸ್ವೀಕರಿಸಿದರು.
ಹಲವು ಸೌಲಭ್ಯ: ಗುಲ್ಬರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಅಮಿತ್ಸಿಂಗ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವತಿಯಿಂದ 10 ಸಾವಿರ ನೀಡಲಾಗುವುದು. 2013-14ನೇ ಸಾಲಿನಲ್ಲಿ 182 ಪೊಲೀಸರ ಆರೋಗ್ಯ ರಕ್ಷಣೆಗಾಗಿ 10.11 ಲಕ್ಷ ನೀಡಲಾಗಿದೆ. ಪೊಲೀಸ್ ಕಲ್ಯಾಣ ನಿಧಿಯಡಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ವಿದ್ಯಾಭಾಸಕ್ಕಾಗಿ 15 ಸಾವಿರ ಧನಸಹಾಯ ನೀಡಲಾಗಿದೆ.
ಅಲ್ಲದೆ ಪೊಲೀಸರ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಪೊಲೀಸ್ ಕ್ಯಾಂಟೀನ್, ಹಿಟ್ಟಿನ ಗಿರಣಿ, ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ಬೀದಿ ದೀಪ 473 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಬೃಹತ್ ನಿರ್ಮಾಣ ಯೋಜನೆಯಡಿ 390 ಹೊಸ ವಸತಿಗೃಹ ನಿರ್ಮಾಣ ಕಾರ್ಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಶರಣಸಿರಸಗಿ ಗ್ರಾಮದ ಬಳಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 9 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಪೊಲೀಸ್ ಕಾಲೋನಿಯಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿ 2.75 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಪರ ಪೊಲೀಸ್ ಅಧೀಕ್ಷಕ ಕಾಶೀನಾಥ ತಳಕೇರಿ ವಂದಿಸಿದರು. ಅಫಜಲ್ಪುರ ಸಿಪಿಐ ಪಿ.ವಿ. ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

