ರಾಯಚೂರು

ಬಿಜೆಪಿಗೆ ಮತ ಕೇಳಲು ಎಲ್ಲಿದೆ ನೈತಿಕ ಶಕ್ತಿ?

Published On :

ಕ.ಪ್ರ. ವಾರ್ತೆ , ಲಿಂಗಸ್ಗೂರು , ಏ.5
ರಾಜ್ಯದಲ್ಲಿ ಕಳೆದ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ ನಡೆದು ರಾಜ್ಯದ ಮಾನ ಹರಾಜಾಗಿದ್ದು, ಇವರಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಕೇಳಲು ನೈತಿಕ ಶಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ತಾಲೂಕಿನ ಮಸ್ಕಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಅಕ್ರಮ ಗಣಿಗಾರಿಕೆ, ಡಿ-ನೋಟಿಫಿಕೇಷನ್ ಸೇರಿದಂತೆ ಭ್ರಷ್ಟಾಚಾರ, ಅವ್ಯವಹಾರ ಆರೋಪದಡಿ  ಯಡಿಯೂರಪ್ಪ ಆದಿಯಾಗಿ ಕೆಲ ಸಚಿವರು ಜೈಲಿಗೆ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ಸಂಪತ್ತು ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ್ದಾರೆಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 10 ತಿಂಗಳಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತರ ಸಾಲಮನ್ನಾ ಸೇರಿದಂತೆ ಅನೇಕ ಯೋಜನೆ ಜಾರಿಗೆ ತರಲಾಗಿದೆ. ಹೊಸಪೇಟೆಯಿಂದ ಕೂಡಲಸಂಗಮವರೆಗೆ ಪಾದಯಾತ್ರೆ ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ 5 ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ನೀಡುವುದಾಗಿ ನೀಡಿದ ಭರವಸೆಯಂತೆ ಈ ವರ್ಷ 10 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ತುಂಗಭದ್ರಾ ನಾಲೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಾನೇ ಪೂರ್ಣಾವಧಿ ಸಿಎಂ: ಈ ಭಾಗದ ಶಾಸಕರು ಮಸ್ಕಿ- ಸಿಂಧನೂರು ರಸ್ತೆ ದುರಸ್ತಿಗೆ ಮನವಿ ಮಾಡಿದ ತಕ್ಷಣ 75 ಕೋಟಿ ಬಿಡುಗಡೆ ಮಾಡಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕಾಲುವೆಗೆ ನೀರು ಹರಿಸುವಂತೆ ಶಾಸಕರು ಮನವಿ ಮಾಡಿದ ತಕ್ಷಣ 6 ಟಿಎಂಸಿ ನೀರು ಬಿಡಿಸಿ ರೈತರ ಬೆಳೆ ಹಾಳಾಗದಂತೆ ನೋಡಿಕೊಳ್ಳಲಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಕೃಷಿ ಬೆಲೆ ಆಯೋಗ ರಚಿಸಲಾಗಿದೆ. ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಇಂತಹ ಅನೇಕ ಬಡವರ, ರೈತಪರ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಇನ್ನೂ 4 ವರ್ಷ 2 ತಿಂಗಳ ಕಾಲ ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳಿದರು.
ಮೋದಿ ಆಟ ನಡೆಯದು: ಲೋಕಸಭೆ ಚುನಾವಣೆಗೆ ಬಿಜೆಪಿ ಈ ಬಾರಿ ಮೋದಿಯನ್ನು ಕರೆತಂದಿದ್ದಾರೆ. ಆದರೆ ರಾಜ್ಯದಲ್ಲಿ ಮೋದಿ ಆಟ ನಡೆಯದು. ಕೊಪ್ಪಳ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಇಟ್ನಾಳರನ್ನು ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕಾರಣ ಪಕ್ಷದ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿ ಗೆಲವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಸಮಾವೇಶದಲ್ಲಿ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಎನ್.ಎಸ್. ಭೋಸರಾಜ್, ಪಕ್ಷದ ಅಭ್ಯರ್ಥಿ ಬಸವರಾಜ ಇಟ್ನಾಳ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾನವಿ ಶಾಸಕ ಹಂಪಯ್ಯ ನಾಯಕ, ಜಿಲ್ಲಾಧ್ಯಕ್ಷ ಎ. ವಸಂತಕುಮಾರ, ಜಿಪಂ ಅಧ್ಯಕ್ಷೆ ಲಲಿತಮ್ಮ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ಎಚ್.ಬಿ. ಮುರಾರಿ, ತಿಮ್ಮಯ್ಯ ನಾಯಕ, ಶರಣಪ್ಪ ಮೇಟಿ, ಪಾಮಯ್ಯ ಮುರಾರಿ ಇದ್ದರು.
'ನಿದ್ದೆ'ರಾಮಯ್ಯ...!
ದಿನದಿಂದ ದಿನಕ್ಕೆ ಏರುತ್ತಿರುವ ಬೀಸಿಗೆ ಬಿಸಿಲಿನ ತಾಪದಂತೆ ಲೋಕಸಭಾ ಚುನಾವಣೆ ಕಾವೂ ಏರತೊಡಗಿದೆ. ಬಿಜೆಪಿಗೆ ನಾವೇನು ಕಡಿಮೆ ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ(ಕಾಂಗ್ರೆಸ್) ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಶನಿವಾರ ಎಂದಿನಂತೆ ಬೆಳಗಿನಿಂದ ವಿವಿಧ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಲಿಂಗಸ್ಗೂರು ತಾಲೂಕಿನ ಮಸ್ಕಿ ಪಟ್ಟಣದ ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಬಂದಾಗ ಮಟಮಟ ಮಧ್ಯಾಹ್ನ 3 ಗಂಟೆ. ಆಗಲೇ ಅವರ ಮುಖಭಾವ ಸಾಕಪ್ಪಾ ಸಾಕು ಎನ್ನುವಂತಿತ್ತು. ಕಾರ್ಯಕಕ್ರಮ ಆರಂಭವಾಯಿತು. ಶಾಸಕ ಪ್ರತಾಪಗೌಡ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅದಾಗುತ್ತಿದ್ದಂತೆ ಸಿಎಂ ಆಪ್ತ ಸ್ನೇಹಿತ ಸಿ.ಎಂ. ಇಬ್ರಾಹಿಂ ಮಾತಿಗಿಳಿದರು. ಇತ್ತ ಸಿದ್ದರಾಮಯ್ಯನವರು ನಿದ್ರೆಗೆ ಜಾರಿಯೇ ಬಿಟ್ಟರು. ಇದನ್ನು ಕಂಡ ಕಾರ್ಯಕರ್ತರು, ಸಾರ್ವಜನಿಕರು ಒಳಗೊಳಗೇ ಮಾತನಾಡಿಕೊಳ್ಳುತ್ತ ಮುಸಿಮುಸಿ ನಕ್ಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.