ಜಿಪಂ ರಾಜಕೀಯ ಚಟುವಟಿಕೆ ಚುರುಕು
ಕ.ಪ್ರ. ವಾರ್ತೆ ರಾಯಚೂರು ಏ.22
ಇಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗೆ ಮೂರನೇ ಹಾಗೂ ಕಡೆಯ ಅವಧಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿ ಮಾಡಿ ಆದೇಶ ಹೊರಡಿಸಿದ್ದು, ರಾಜಕೀಯ ಮತ್ತೆ ಗರಿಗೆದರಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕ ಎಸ್.ಎಂ. ಜುಲ್ಫೀಕರ್ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಹೈಕೋರ್ಟ್ ನಿರ್ದೇಶನದಂತೆ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದು, ಮೂರನೇ ಅವಧಿಗೂ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ದಾರಿ ಮಾಡಿದೆ.
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಜಿಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವೊದಗಿಸಿದಂತಾಗಿದೆ.
ಈಚೆಗಷ್ಟೇ ಲೋಕಸಭೆ ಚುನಾವಣೆ ಮುಗಿಸಿ ತಣ್ಣಗಾಗಿದ್ದ ರಾಜಕೀಯ ನಾಯಕರು ಈಗ ಮತ್ತೆ ಮೈ ಕೊಡವಿ ರಾಜಕೀಯ ಚಟುವಟಿಕೆಗೆ ತೊಡಗುವಂತಾಗಿದ್ದು, ಜಿಪಂ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರ ಹುಡುಕಾಟ ಮತ್ತು ಅಧಿಕಾರ ಹಿಡಿಯುವ ತಂತ್ರಗಾರಿಕೆಗೆ ಚಾಲನೆ ದೊರೆತಿದೆ.
ಬಲಾಬಲ: ರಾಯಚೂರು ಜಿ.ಪಂ.ನಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಅವರಲ್ಲಿ ಕಾಂಗ್ರೆಸ್ನ 15, ಬಿಜೆಪಿಯ 11 ಹಾಗೂ ಜೆಡಿಎಸ್ನ 9 ಜನ ಸದಸ್ಯರಿದ್ದಾರೆ. ಜಿ.ಪಂ.ನಲ್ಲಿ ಅಧಿಕಾರ ಹಿಡಿಯಲು 18 ಜನ ಸದಸ್ಯರ ಬೆಂಬಲ ಅವಶ್ಯ. ಜಿ.ಪಂ.ನಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲ. ಹೀಗಾಗಿ ಅಧಿಕಾರಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಯುವುದು ಬಹುತೇಕ ಖಚಿತವಾಗಿದೆ.
ಮೊದಲ ಅವಧಿಗೆ ಜಿಪಂ ಅಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ದಕ್ಕಿತ್ತು. ಬಹುಮತದ ಕೊರತೆಯಿಂದಾಗಿ ಆಗ ಕಾಂಗ್ರೆಸ್ ಜೆಡಿಎಸ್ ಜತೆಗೂಡಿ ಅಧಿಕಾರ ಹಿಡಿದಿತ್ತು. 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಮಹಿಳೆ ಮತ್ತು ಉಪಾಧ್ಯಕ್ಷ ಹಿಂದುಳಿದ ವರ್ಗಕ್ಕೆ ಸಿಕ್ಕಿತ್ತು. ಆಗ ಕಾಂಗ್ರೆಸ್ ವಿರೋಧ ಪಕ್ಷಗಳ ಸಹಕಾರದಿಂದ ಎರಡೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಸದ್ಯದ ಅಧ್ಯಕ್ಷೆ ಲಲಿತಮ್ಮ ಪಾಟೀಲ್ ಹಾಗೂ ಉಪಾಧ್ಯಕ್ಷ ಕೆ. ಶರಣಪ್ಪ ಅವರ ಅಧಿಕಾರವಧಿ ಮುಂದಿನ ತಿಂಗಳು ಪೂರ್ಣಗೊಳ್ಳಲಿರುವ ಹಿನ್ನೆಲೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಹಾಗಾಗಿ ಮತ್ತೆ ರಾಜಕೀಯ ಜಿದ್ದಾಜಿದ್ದಿಗೆ ಕಣ ಸಜ್ಜಾಗಿದ್ದು, ಚಟುವಟಿಕೆ ಇನ್ನು ಚುರುಕುಗೊಳ್ಳಲಿದೆ.
ಆಕಾಂಕ್ಷಿಗಳು: ಸದ್ಯದ ಮೀಸಲಾತಿಯಂತೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ 15 ಜನ ಸದಸ್ಯರಲ್ಲಿ ಏಕೈಕ ಮಹಿಳೆಯಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ತನ್ನ ವಶದಲ್ಲಿರಿಸಿಕೊಳ್ಳುವ ಪ್ರಯತ್ನ ಮಾಡಿದಲ್ಲಿ ಲಿಂಗಸ್ಗೂರು ತಾಲೂಕಿನ ಆನೆಹೊಸೂರು ಜಿಪಂ ಸದಸ್ಯೆ ಪುಷ್ಪಾ ಪಾಮಯ್ಯ ಮುರಾರಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ.
ಪ್ರತಿಪಕ್ಷಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದಾರೆ. ಆ ಪಕ್ಷಗಳಿಗೆ ಜಿಪಂನಲ್ಲಿ ಹೆಚ್ಚಿನ ಸ್ಥಾನವಿಲ್ಲದಿರುವುದು ಬಹುದೊಡ್ಡ ಅಡಚಣೆಯಾಗಲಿದೆ. ಹೀಗಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಟ್ಟು ಜಿಪಂ ಉಪಾಧ್ಯಕ್ಷ ಸ್ಥಾನದ ಮೇಲೆ ಜೆಡಿಎಸ್ ಮತ್ತು ಬಿಜೆಪಿ ಕಣ್ಣಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

