ರಾಯಚೂರು

ಹೈ.ಕ. ಸಮಾಜಘಾತಕರ ಮೇಲೆ ಕೆಂಗಣ್ಣು

Published On :

 ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ    ಗುಲ್ಬರ್ಗ    ಏ.22
ಕಳೆದ ಜನವರಿಯಲ್ಲಿ ರೌಡಿ ಮುನ್ನಾ ಶೂಟೌಟ್, ಪಿಎಸ್‌ಐ ಬಂಡೆ ದಾರುಣ ಸಾವಿನ ನಂತರ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿತ ಕಂಡಿದೆ. ಅದಕ್ಕಾಗಿ ಹೈ.ಕ. ಭಾಗದ ಖಾಕಿಪಡೆಗೆ ಶಕ್ತಿ ತುಂಬಲು ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಸುರೇಶ ಕೆ. ಮೊಹ್ಮದ್, ನೂತನ ಕ್ರಮಗಳನ್ನು ಜಾರಿಗೆ ತರಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ಪತ್ರ ಬರೆದು ತಮ್ಮ ಮನದಾಳದ ಅನಿಸಿಕೆಗಳನ್ನು ತಿಳಿಸಲು ಮತ್ತು ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಪ್ರಸ್ತಾವನೆ ಕಳುಹಿಸುವ ತಯಾರಿ ನಡೆಸಿದ್ದಾರೆ. ಹೈ-ಕ ಪ್ರಮುಖ ನಗರ- ಪಟ್ಟಣಗಳಲ್ಲಿನ ಪುಂಡರ ಬಾಲ ಕತ್ತರಿಸಲು ಗಟ್ಟಿಗ ಹಾಗೂ ಎದೆಗಾರಿಕೆ ಇರುವಂತಹ ಪೊಲೀಸ್ ಅಧಿಕಾರಿಗಳನ್ನು(ಡಿಎಸ್ಪಿ, ಸಿಪಿಐ, ಪಿಎಸ್‌ಐ, ಪಿಐ ಹಂತದಲ್ಲಿ) ನಗರ, ಪಟ್ಟಣ ಪೊಲೀಸಿಂಗ್ ಜಾಲಕ್ಕೆ ಕರೆತರುವ ಮೂಲಕ ಜನಮನದಲ್ಲಿ ಮಾಸಿ ಹೋಗಿರುವ ವಿಶ್ವಾಸಾರ್ಹತೆಯನ್ನು ಮರಳಿ ಸ್ಥಾಪಿಸುವ ಗುರಿ ಹೊಂದಿದ್ದಾರೆ.
ಈಶಾನ್ಯ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಸುರೇಶ ಮೊಹ್ಮದ್ ಜೊತೆ 'ಕನ್ನಡಪ್ರಭ' ಮುಖಾಮುಖಿಯಾಗಿತ್ತು. ಆಗ ಅನೇಕ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಚ ಹೈ-ಕ ಜಿಲ್ಲೆಗಳಲ್ಲಿನ ಕಾನೂನು- ಸುವ್ಯವಸ್ಥೆ ಸ್ಥಿತಿಗತಿ ಹೇಗಿದೆ?
 ಹೈ-ಕ ಪಂಚ ಜಿಲ್ಲೆಗಳಲ್ಲಿ ಉತ್ತಮ ಎಸ್ಪಿಗಳಿದ್ದಾರೆ. ಹೀಗಾಗಿ ತೊಂದರೆಯಿಲ್ಲ. ಆದರೆ, ಗುಲ್ಬರ್ಗ ಜಿಲ್ಲೆಯಲ್ಲಿ ಈಚೆಗೆ ನಡೆದ ಶೂಟೌಟ್, ಆ ನಂತರದ ಬೆಳವಣಿಗೆಗಳಿಂದ ಪೊಲೀಸ್ ನೈತಿಕತೆ ತುಸು ಕುಸಿತ ಕಂಡಿರುವ ಗುಮಾನಿ ಕಾಡುತ್ತಿದೆ. ಅದಕ್ಕಾಗಿ ಪೊಲೀಸ್ ಬಲಕ್ಕೆ ಹೊಸ ಚೈತನ್ಯ ತುಂಬಲು ಬರುವ ದಿನಗಳಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ.
ಚ ಪರಿಣಾಮಕಾರಿ, ಜನಸ್ನೇಹಿ ಪೊಲೀಸಿಂಗ್ ಕೊರತೆಯನ್ನ ಹೇಗೆ ನೀಗಿಸ್ತೀರಿ?
 ಪೊಲೀಸಿಂಗ್ ಜನಸ್ನೇಹಿ ಆಗಿರಲೇಬೇಕು. ಹೈ.ಕ.ದ ಎಲ್ಲ ನಗರಗಳಲ್ಲಿ ಇಂತಹ ಸಮಸ್ಯೆಯಿಲ್ಲ, ಗುಲ್ಬರ್ಗದಲ್ಲಿ ಮಾತ್ರ ಕಾಣುತ್ತಿದೆ. ಬರುವ ದಿನಗಳಲ್ಲಿ ಗುಲ್ಬರ್ಗ ನಗರ ಠಾಣೆಗಳಲ್ಲಿ ಟಫ್, ಎದೆಗಾರಿಕೆಯ, ಯಾವುದೇ ಪಕ್ಷಪಾತಿ ಧೋರಣೆಯಿಲ್ಲದೆ ಕಾರ್ಯನಿರ್ವಹಿಸುವಂಥ ಪಿಐಯಿಂದ ಹಿಡಿದು ಡಿಎಸ್ಪಿ ಹಂತದವರೆಗಿನ ಅಧಿಕಾರಿಗಳ ಪಡೆ ತರುವ ಉದ್ದೇಶವಿದೆ. ಇದಕ್ಕಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸುವ ಚಿಂತನೆ ಸಾಗಿದೆ.
ಚ ಹೈ.ಕ..ದ ಪಂಚ ಜಿಲ್ಲೆಗಳಲ್ಲಿ ಯಾವ ಸಂಗತಿಗಳಿಗೆ ಹೆಚ್ಚಿನ ಗಮನ ನೀಡುತ್ತೀರಿ?
 ಈ ಬಾಗದಲ್ಲಿ ಲ್ಯಾಂಡ್ ಮಾಫಿಯಾ ತುಂಬ ಕೆಟ್ಟದಾಗಿದೆ. ಭೂಗಳ್ಳರ ಭರಾಟೆಗೆ ಕಡಿವಾಣ ಹಾಕಲೇಬೇಕು, ಇದಲ್ಲದೆ ಗೂಂಡಾಗಳು, ರೌಡಿಗಳನ್ನು ಮಟ್ಟಹಾಕಬೇಕಿದೆ. ಬಂಧನದ ನಂತರ ರೌಡಿಗಳು ಕಾನೂನು ಕೈಯಿಂದ ತಪ್ಪಿಸಿಕೊಂಡು ಹೋಗದಂತೆ, ಯಾರದೇ ಪ್ರಭಾವಕ್ಕೆ ಮಣಿಯದೆ ಪೊಲೀಸಿಂಗ್ ವ್ಯವಸ್ಥೆಯಲ್ಲಿ ಸರ್ವ ಕ್ರಮ ಕೈಗೊಳ್ಳುವ ಇರಾದೆಯಿದೆ.
ಚ ಅಕ್ರಮ ಶಸ್ತ್ರಾಸ್ತ್ರ ವಹಿವಾಟು ನಡೆದಿದ್ರೂ ಈ ವಿಚಾರದಲ್ಲಿ ಜಾಣ ಕುರುಡೇಕೆ?
 ಹಾಗೇನಿಲ್ಲ, ನಾನು ಬಂದ ಮೇಲೆ ಈ ಸಂಗತಿ ಗಮನಿಸುತ್ತಿದ್ದೇನೆ. 3 ದಿನಗಳ ಹಿಂದಿನ ರವಿ ಭೈರಾಮಡಿ ಶೂಟೌಟ್‌ನಲ್ಲೂ ಅಕ್ರಮ ಶಸ್ತ್ರಾಸ್ತ್ರಗಳೇ ಬಳಕೆಯಾಗಿವೆ. ಆರೋಪಿಗಳನ್ನು ಬಂಧಿಸಲಾಗಿದೆ. ಹಾಗಂತ ಅಕ್ರಮ ಶಸ್ತ್ರಾಸ್ತ್ರ ಜಾಲದ ಪತ್ತೆ ಕೈಬಿಟ್ಟಿಲ್ಲ.
ಚ ಹೆಚ್ಚುತ್ತಿರುವ ರೌಡಿಗಳ ನಿಗ್ರಹಕ್ಕೆ ಕ್ರಮ ಏನು?
 ಗುಲ್ಬರ್ಗ ರೌಡಿ ನಿಗ್ರಹ ದಳ ಪುನಃ ರಚಿಸಲಾಗಿದೆ. ಈ ದಳದ ಉಸ್ತುವಾರಿ ನಾನೇ ನಿರ್ವಹಿಸಲು ನಿರ್ಧರಿಸಿರುವೆ. ಇಬ್ಬರು ಡಿಎಸ್ಪಿ, ನಾಲ್ವರು ಇನ್ಸಪೆಕ್ಟರ್, 6 ಪಿಎಸ್‌ಐ, ತರಬೇತಿ ಪಡೆದ ಪೇದೆಗಳಿರುವ ರೌಡಿ ನಿಗ್ರಹ ದಳ ರಚಿಸಲಾಗುತ್ತದೆ. ಆ ಮೂಲಕ ನಗರ ರೌಡಿಗಳನ್ನು ಮಟ್ಟ ಹಾಕಲಾಗುತ್ತದೆ.
ಚ ಹೈ.ಕ. ಪೊಲೀಸ್ ಪಡೆಗೆ- ಜನತೆಗೆ ನಿಮ್ಮ ಸಂದೇಶ?
 ಜನತೆ ತಾವು ಅನುಭವಿಸುತ್ತಿರುವ ತೊಂದರೆಗಳನ್ನು ತಕ್ಷಣ ಸನಿಹದ ಠಾಣಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ನೆರವು ಪಡೆಯಬೇಕು. ಅಲ್ಲೇನಾದರೂ ಐಬುಗಳು ಕಂಡಲ್ಲಿ ಹಿರಿಯ ಅಧಿಕಾರಿಗಳ ಗಮನ ಸೆಳೆಯಬೇಕು. ಇನ್ನು ಪೊಲೀಸರೂ ಠಾಣೆಗೆ ಬರುವ ಸಾರ್ವಜನಿಕರಿಗೆ ಗೌರವ ನೀಡಿ, ಕಣ್ಣೊರೆಸುವ ಕೆಲಸ ಮಾಡಬೇಕು. ಕಾನೂನು ಪ್ರಕಾರ ಅವರ ಸಮಸ್ಯೆ ಪರಿಹರಿಸಬೇಕು. ಮಾನವೀಯತೆ, ಅನುಕಂಪದೊಂದಿಗೆ ಮುಂದುವರಿಯಬೇಕೇ ಹೊರತು ಪಕ್ಷಪಾತಿ ಧೋರಣೆಯಿಂದಲ್ಲ ಎಂಬುದನ್ನು ಅರಿಯಬೇಕು.



ಪಂಚಸೂತ್ರ


1. ಗುಲ್ಬರ್ಗ ಮಹಾನಗರಕ್ಕೆ ರಾಜಕೀಯ ವಶೀಲಿ ಮುಕ್ತ ಟಫ್ ಕಾಪ್‌ಗಳ ನಿಯೋಜನೆ
2. ರೌಡಿ ನಿಗ್ರಹ ದಳಕ್ಕೆ ಹೊಸರೂಪ ನೀಡಲು ನಿರ್ಧಾರ, ಜನಸ್ನೇಹಿ ಪೊಲೀಸಿಂಗ್‌ಗೆ ಒತ್ತು
3. ಮಟಕಾ, ಜೂಜಾಟ ಅಡ್ಡೆಗಳ ಮೇಲೆ 24್ಢ7 ದಾಳಿ, ಸಮಾಜಘಾತಕರ ಮೇಲೆ ನಿಗಾ
4. ಗುಲ್ಬರ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಶಸ್ತ್ರಾಸ್ತ್ರಗಳ ವಹಿವಾಟಿನ ಮೇಲೆ ಹದ್ದಿನಕಣ್ಣು
5. ಗುಲ್ಬರ್ಗ ನಗರ- ಗ್ರಾಮೀಣ ಪೊಲೀಸಿಂಗ್ ಪರಿಣಾಮಕಾರಿಯಾಗಲು ಸರ್ವ ಕ್ರಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.