ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆಗೆ ಸಮಿತಿ ರಚನೆ
ರಾಯಚೂರು: ಜಿಲ್ಲಾ ಪಂಚಾಯ್ತಿ ಅಡಿ ವಿವಿಧ ಯೋಜನೆಗಳಲ್ಲಿ ಜಾರಿಗೆ ತಂದ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಜಿಪಂ ಸದಸ್ಯರ ಸಮಿತಿ ರಚನೆ ಹಾಗೂ ಜಿಪಂ ಸದಸ್ಯರಿಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ನಗರದಲ್ಲಿ ಸೋಮವಾರ ಜರುಗಿದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಪಂ ಸದಸ್ಯರು, ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನದಡಿ ಜಿಪಂನಿಂದ ಆರೋಗ್ಯ ಇಲಾಖೆಗೆ ರಕ್ತಕಣ ಬೇರ್ಪಡಿಸುವ ಘಟಕ ಸ್ಥಾಪನೆಗೆ ಅನುದಾನ ಒದಗಿಸಲಾಗಿತ್ತು. ಆದರೆ ಇದುವರೆಗೆ ಘಟಕದ ಸ್ಥಾಪನೆಯಾಗಿಲ್ಲ ಎಂದು ಸಭೆಗೆ ದೂರಲಾಯಿತು.
ಕಳೆದ ಅನೇಕ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈ ಬಗ್ಗೆ ಇದುವರೆಗೆ ರಿಮ್ಸ್ ವೈದ್ಯಕೀಯ ಕಾಲೇಜಿನ ಅಧಿಕಾರಿಗಳು ರಕ್ತಕಣ ಬೇರ್ಪಡಿಸುವ ಘಟಕ ಸ್ಥಾಪನೆಗೆ ಮುಂದಾಗಿಲ್ಲ. ಇದರಿಂದ ಜಿಪಂ ಒದಗಿಸಿದ ಅನುದಾನದ ಲಾಭ ಜನತೆಗೆ ದೊರೆಯುತ್ತಿಲ್ಲ ಎಂದು ಜಿಪಂ ಸದಸ್ಯರು ಟೀಕಿಸಿದರು.
ಘಟಕ ಸ್ಥಾಪನೆಗೆ ಅನುಮತಿ: ಈ ವೇಳೆ ಸಭೆಯಲ್ಲಿ ಮಾತನಾಡಿದ ರಿಮ್ಸ್ ಕಾಲೇಜಿನ ಅಧಿಕಾರಿ ಈಗಾಗಲೇ ರಕ್ತಕಣ ಬೇರ್ಪಡಿಸುವ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಮೆಡಿಸಿನ್ ವಿಭಾಗವು ಅದರ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿದ್ದಂತೆಯೇ ಈ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗುತ್ತದೆ ಎಂದು ಸಮಜಾಯಿಷಿ ನೀಡಿದರು.
ಲಿಂಗಸ್ಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಯಂತ್ರ ಅಳವಡಿಕೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಈಗಾಗಲೇ ಅನುದಾನ ಬಿಡುಗಡೆಯಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಲಾಗಿದೆ. ಈ ವೇಳೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಿಟಿ ಸ್ಕ್ಯಾನ್ ಯಂತ್ರಕ್ಕೆ ಮತ್ತಷ್ಟು ಅನುದಾನಕ್ಕೆ ಕೋರಿ ಪ್ರಸ್ತಾವನೆ ಜಿಪಂಗೆ ಸಲ್ಲಿಕೆಯಾಗಿದ್ದನ್ನು ತಿರಸ್ಕರಿಸಲಾಯಿತು.
ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ: ಜಿಪಂ ಸದಸ್ಯ ಅಸ್ಲಂಪಾಷಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಪಂನಿಂದ ಜಾರಿಗೆ ತರುವ ವಿವಿಧ ಯೋಜನೆಗಳಡಿಯ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿಲ್ಲ. ಇದರಿಂದಾಗಿ ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಸಭೆಗೆ ದೂರಿದರು.
ಈ ವೇಳೆ ಮಾತನಾಡಿದ ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್, ಲಿಂಗಸ್ಗೂರು ತಾಪಂ ಇಒ ಸಭೆಗೆ ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರೆ, ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿ, ಸಭೆಯಲ್ಲಿ ಚರ್ಚಿಸುವ ವಿವಿಧ ವಿಷಯಗಳ ಬಗ್ಗೆ ತಮಗೆ ಸಭೆಯಲ್ಲಿಯೇ ಮಾಹಿತಿ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಬಯೋವುಟ್ರಿಕ್ ವ್ಯವಸ್ಥೆಗೆ ಸೂಚಿಸಲಾಗಿತ್ತು: ಜಿಲ್ಲೆಯ ಎಲ್ಲ ಗ್ರಾಪಂ.ಗಳಲ್ಲಿ ಸಿಬ್ಬಂದಿ ಹಾಜರಾತಿ ಮತ್ತು ಕಾರ್ಯನಿರ್ವಹಣೆಯ ಮೇಲೆ ನಿಗಾಯಿರಿಸಲು ಬಯೋವುಟ್ರಿಕ್ ವ್ಯವಸ್ಥೆ ಅಳವಡಿಕೆಗೆ ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಇದುವರೆಗೂ ಅಳವಡಿಸಿಲ್ಲ ಎಂದು ಸಭೆಗೆ ದೂರಿದಾಗ ಜಿಪಂ ಸಿಇಒ ವಿಜಯ ಜೋತ್ಸಾ ಮಾತನಾಡಿ, ವಾರದೊಳಗೆ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಪಂ ಸ್ಥಾಯಿ ಸಮಿತಿ ಸದಸ್ಯ ಹನುಮೇಶ್ ಮದ್ಲಾಪುರ ಮತ್ತು ಪ್ರಕಾಶ ಜೀರಬಂಡಿ ಮಾತನಾಡಿ, ಜಿಪಂನಿಂದ ಬಿಡುಗಡೆಯಾದ ಅನುದಾನದಿಂದ ಕೈಗೊಂಡ ಕಾಮಗಾರಿಗಳ ಪ್ರಗತಿಗೆ ಜಿಪಂ ಸದಸ್ಯರಿರುವ ಸಮಿತಿಯೊಂದನ್ನು ರಚಿಸಲು ಕಳೆದ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಆದರೆ ಇದುವರೆಗೆ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಅವರು ನಾಲ್ಕು ಜನರ ಸಮಿತಿ ಶೀಘ್ರವೇ ರಚಿಸಿ ಮಾಹಿತಿ ನೀಡುವುದಾಗಿ ಹೇಳಿದರು.
ತರಾಟೆ: ಮೂಲ ಸೌಕರ್ಯಾಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಗೆ ಸಮರ್ಪಕ ಮಾಹಿತಿ ಒದಗಿಸಲು ವಿಫಲರಾದ ಅಧಿಕಾರಿಯನ್ನು ಜಿಪಂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು. ಮಾನವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ವಸತಿ ಯೋಜನೆ ಅಡಿ ಮನೆ ನಿರ್ಮಾಣ ಇದುವರೆಗೆ ಇಲಾಖೆಯಿಂದ ಪ್ರಾರಂಭಿಸಿಲ್ಲ ಎಂದು ಆರೋಪಿಸಿದರು.
ಕೆಆರ್ ಐಡಿಎಲ್‌ನಿಂದ ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಸಭೆಗೆ ಸಮರ್ಪಕ ಮಾಹಿತಿಯಿರುವುದಿಲ್ಲ. ಹಾಗೆಯೇ ಜಿಪಂ ಸದಸ್ಯರಿಗೂ ಯಾವುದೇ ರೀತಿಯ ಮಾಹಿತಿ ದೊರೆಯುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಸದಸ್ಯರು ಒತ್ತಾಯಿಸಿದರು.
ಸಭೆಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

